ಭೂ ಹಗರಣ ಆರೋಪ: ನಾನು ತಪ್ಪಿತಸ್ಥನಲ್ಲ-ಆರ್. ಅಶೋಕ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತೆ ಮುಡಾ ಹಗರಣದಲ್ಲಿ ಅರಿಶಿಣ-ಕುಂಕುಮದ ಮೂಲಕ ನನಗೆ ಭೂಮಿ ಬಂದಿಲ್ಲ. ಹಣ ಕೊಟ್ಟು ಖರೀದಿ ಮಾಡಿದ್ದೇನೆ. ಈಗ ವೃಥಾ ಆರೋಪ ಮಾಡುವ ಮೂಲಕ ಕಾಂಗ್ರೆಸ್ ಪಕ್ಷ ತನ್ನನ್ನು ನ್ಯಾಯಾಲಯಕ್ಕಿಂತ ದೊಡ್ಡದು ಎಂದುಕೊಂಡಿದೆ
ನೂರಾರು ಕೋಟಿ ಬೆಲೆಬಾಳುವ ಜಮೀನು ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಕಾಂಗ್ರೆಸ್ ಸರ್ಕಾರದ ಸಚಿವರ ಆರೋಪಕ್ಕೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತಿರುಗೇಟು ನೀಡಿದ್ದಾರೆ.
ಭೂಮಿ ಖರೀದಿ ಪ್ರಕರಣದಲ್ಲಿ ನಾನು ತಪ್ಪಿತಸ್ಥನಲ್ಲ ಎಂದು ರಾಜ್ಯಪಾಲರು, ನ್ಯಾಯಾಲಯ ಹೇಳಿದೆ. ಆದರೆ, ಕಾಂಗ್ರೆಸ್ಸಿನವರು ಹಳೆಯ ಪ್ರಕರಣವನ್ನು ಕೆದಕಿ ತಾವೇ ನ್ಯಾಯಾಲಯದಂತೆ ತೀರ್ಪು ನೀಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನನ್ನು ಭೂ ಕಬಳಿಕದಾರ ಎಂದು ಕರೆದಿರುವ ಕಾಂಗ್ರೆಸ್ ಸರ್ಕಾರದ ನಾಲ್ವರು ಸಚಿವರು ನೈತಿಕತೆಯ ಪ್ರಶ್ನೆ ಎತ್ತಿದ್ದಾರೆ. ಕೇಂದ್ರದಲ್ಲಿ ಅವರದ್ದೇ ಸರ್ಕಾರವಿದ್ದಾಗ ತನಿಖೆ ನಡೆದಿದೆ. ರಾಜ್ಯಪಾಲರು ಮತ್ತು ನ್ಯಾಯಾಲಯ ನನ್ನನ್ನು ದೋಷಮುಕ್ತ ಮಾಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತೆ ಮುಡಾ ಹಗರಣದಲ್ಲಿ ಅರಿಶಿಣ-ಕುಂಕುಮದ ಮೂಲಕ ನನಗೆ ಭೂಮಿ ಬಂದಿಲ್ಲ. ಹಣ ಕೊಟ್ಟು ಖರೀದಿ ಮಾಡಿದ್ದೇನೆ. ಈಗ ವೃಥಾ ಆರೋಪ ಮಾಡುವ ಮೂಲಕ ಕಾಂಗ್ರೆಸ್ ಪಕ್ಷ ತನ್ನನ್ನು ನ್ಯಾಯಾಲಯಕ್ಕಿಂತ ದೊಡ್ಡದು ಎಂದುಕೊಂಡಿದೆ ಎಂದು ವ್ಯಂಗ್ಯವಾಡಿದರು.
ಭೂಮಿ ಖರೀದಿ ಪ್ರಕರಣದಲ್ಲಿ ನಾನು ಆರೋಪ ಮುಕ್ತ, ಆದರೆ, ಮುಡಾ ಹಗರಣದಲ್ಲಿ ಸಿದ್ಧರಾಮಯ್ಯ ಆರೋಪಿ. ಮುಡಾ ಹಗರಣವು ತನಿಖೆಯಾಗಬೇಕಾದ ಪ್ರಕರಣ ಎಂದು ಹೈಕೋರ್ಟ್ ಹೇಳಿದೆ. ಜಾರಿ ನಿರ್ದೇಶನಾಲಯ ಇಸಿಐಆರ್ ದಾಖಲಿಸುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಭಯಪಟ್ಟು ೧೪ ನಿವೇಶನಗಳನ್ನು ಹಿಂದಿರುಗಿಸಿದ್ದಾರೆ. ಆದರೆ ನನ್ನ ಪ್ರಕರಣದಲ್ಲಿ ಕೋರ್ಟ್ ಆದೇಶ ಬರುವ ಮುನ್ನವೇ ನಿವೇಶನ ಹಿಂದಿರುಗಿಸಿದ್ದೆ. ಹಾಗಾಗಿಯೇ ಕೋರ್ಟ್ ನನ್ನನ್ನು ಆಪಾದಿತ ಎಂದು ಹೇಳಿರಲಿಲ್ಲ. ಜನಪ್ರತಿನಿಧಿಗಳ ನ್ಯಾಯಾಲಯ ಕೂಡ ನನ್ನನ್ನು ಆರೋಪ ಮುಕ್ತ ಮಾಡಿದೆ ಎಂದು ಹೇಳಿದರು.
ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಮಾಜಿ ಸ್ಪೀಕರ್ ಕೋಳಿವಾಡ ಕೂಡ ಮುಖ್ಯಮಂತ್ರಿಯ ರಾಜೀನಾಮೆ ಕೇಳಿದ್ದಾರೆ. ನಿಮ್ಮ ವಿರುದ್ಧ ಆರೋಪ ಬಂದಿರುವಾಗ ಕೋರ್ಟಿನಲ್ಲಿ ಪರಿಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ವಿರೋಧ ಪಕ್ಷದವರ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಬಾರದು. ನನಗೆ ಯಾರ ಮೇಲೂ ದ್ವೇಷದ ಭಾವನೆ ಇಲ್ಲ ಎಂದು ಅಶೋಕ್ ಸ್ಪಷ್ಟಪಡಿಸಿದರು.