
ಬಿಜೆಪಿ ರಾಜ್ಯಾಧ್ಯಕ್ಷ ಮರುನೇಮಕ ಗೊಂದಲ ನನಗಿಲ್ಲ; ಬಿ.ವೈ.ವಿಜಯೇಂದ್ರ
ನಮ್ಮ ಪಕ್ಷದಲ್ಲಿ ಯಾರನ್ನೂ ರೆಬೆಲ್ ಗಳಿಲ್ಲ. ಈವರೆಗೆ 10 ರಾಜ್ಯಗಳಲ್ಲಿ ಅಧ್ಯಕ್ಷರ ನೇಮಕ ನಡೆದಿದೆ. ಕರ್ನಾಟಕ ಸೇರಿದಂತೆ ಉಳಿದ ರಾಜ್ಯಗಳಲ್ಲಿ ಪ್ರಕ್ರಿಯೆ ಇನ್ನೂ ಮುಗಿದಿಲ್ಲ ಎಂದು ಬಿ.ವೈ. ವಿಜಯೇಂದ್ರ ಹೇಳಿದ್ದಾರೆ
ರಾಜ್ಯ ಬಿಜೆಪಿ ಅಧ್ಯಕ್ಷರ ಮರುನೇಮಕದ ಗೊಂದಲ ನನಗಂತೂ ಇಲ್ಲ ಎಂದು ಹೇಳುವ ಮೂಲಕ ತಾವೇ ಅಧ್ಯಕ್ಷರಾಗಿ ಮುಂದುವರಿಯುವುದಾಗಿ ಬಿ.ವೈ.ವಿಜಯೇಂದ್ರ ಸುಳಿವು ನೀಡಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯಾಧ್ಯಕ್ಷ ನೇಮಕ ಅಥವಾ ಪುನರಾಯ್ಕೆ ಕುರಿತ ಗೊಂದಲಗಳು ನಿಮ್ಮಲ್ಲಿವೆ. ಆದರೆ, ನನಗೆ ಮಾತ್ರ ಯಾವುದೇ ಗೊಂದಲವಿಲ್ಲ ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಬಿಜೆಪಿಯಲ್ಲೂ ಆಂತರಿಕ ಕಲಹಗಳಿವೆ. ಆದರೆ, ಕಳೆದ ಒಂದು ವಾರದಿಂದ ಕಡಿಮೆಯಾಗಿದೆ. ಪಕ್ಷದಲ್ಲಿನ ಬೆಳವಣಿಗೆಗಳನ್ನು ವರಿಷ್ಠರು ಗಮನಿಸುತ್ತಿದ್ದಾರೆ. ಶಿಸ್ತು ಸಮಿತಿ ಯಾರಿಗೆ ನೋಟಿಸ್ ನೀಡಬೇಕೋ ಅವರಿಗೆ ನೀಡಿದೆ. ಅವರೂ ಕೂಡ ಉತ್ತರ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಫೆ.20 ರಂದು ರೆಬೆಲ್ ನಾಯಕರ ಸಭೆ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ''ನಮ್ಮ ಪಕ್ಷದಲ್ಲಿ ಯಾರನ್ನೂ ರೆಬೆಲ್ ಎಂದು ಕರೆಯಬೇಡಿ. ಈವರೆಗೆ 10ರಾಜ್ಯಗಳಲ್ಲಿ ರಾಜ್ಯ ಅಧ್ಯಕ್ಷರ ಆಯ್ಕೆ ನಡೆದಿದೆ. ಕರ್ನಾಟಕ ಸೇರಿದಂತೆ ಉಳಿದ ರಾಜ್ಯಗಳಲ್ಲಿ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ರಾಜ್ಯದ 25 ಜಿಲ್ಲೆಗಳಿಗೆ ಅಧ್ಯಕ್ಷರ ನೇಮಕವಾಗಿದೆ. ಉಳಿದ ಜಿಲ್ಲೆಗಳಿಗೆ ಜಿಲ್ಲಾಧ್ಯಕ್ಷರ ನೇಮಕ ಬಾಕಿ ಇದೆ. ಆಕಾಂಕ್ಷಿಗಳ ಪಟ್ಟಿಯನ್ನು ದೆಹಲಿಗೆ ಕಳುಹಿಸಿದ್ದೇವೆ. ಜಿಲ್ಲಾಧ್ಯಕ್ಷರ ನೇಮಕ ಪ್ರಕ್ರಿಯೆ ಮುಗಿದ ಬಳಿಕ ರಾಜ್ಯಾಧ್ಯಕ್ಷರ ನೇಮಕಾತಿ ನಡೆಯಲಿದೆ,'' ಎಂದು ಹೇಳಿದ್ದಾರೆ.
''ರಾಜ್ಯ ಸರ್ಕಾರದ ವಿರುದ್ಧ ನಿರಂತರ ಹೋರಾಟ ಮಾಡುವ ದೊಡ್ಡ ಸವಾಲು ನಮ್ಮ ಮುಂದಿದೆ. ರಾಜ್ಯದ ರೈತರು, ಬಡವರ ಹಿತದೃಷ್ಟಿಯಿಂದ ಬಿಜೆಪಿಯ ಎಲ್ಲ ನಾಯಕರು ಒಗ್ಗಟ್ಟಾಗಿ ಹೋರಾಟ ಮಾಡಬೇಕಾಗಿದೆ. ಇದು ನಮ್ಮ ಆದ್ಯ ಕರ್ತವ್ಯ ಕೂಡ. ನಮ್ಮ ಮಧ್ಯೆ ಇರುವ ಸಮಸ್ಯೆಗಳನ್ನು ಕೇಂದ್ರ ನಾಯಕರು ಅತಿ ಶೀಘ್ರದಲ್ಲೇ ಬಗೆಹರಿಸಲಿದ್ದಾರೆ. ದಕ್ಷಿಣ ಭಾರತದ ಹೆಬ್ಬಾಗಿಲು ಎನಿಸಿಕೊಂಡಿರುವ ಕರ್ನಾಟಕದಲ್ಲಿ ಅಧಿಕಾರ ಹಿಡಿಯಲು ಹೋರಾಟ ಮಾಡುತ್ತೇವೆ,'' ಎಂದು ಹೇಳಿದ್ದಾರೆ.