ಕುಮಾರಸ್ವಾಮಿಯ ಬೆದರಿಕೆಗೆ ಹೆದರುವ ರಕ್ತ ನನ್ನದಲ್ಲ: ಡಿಕೆ ಶಿವಕುಮಾರ್
x

ಕುಮಾರಸ್ವಾಮಿಯ ಬೆದರಿಕೆಗೆ ಹೆದರುವ ರಕ್ತ ನನ್ನದಲ್ಲ: ಡಿಕೆ ಶಿವಕುಮಾರ್


“ನನ್ನ ವಿರುದ್ಧ ಇರುವ ದಾಖಲೆಗಳನ್ನು ಬಿಡುಗಡೆ ಮಾಡಲಿ. ಅವರ ಬೆದರಿಕೆಗೆ ಹೆದರುವ ರಕ್ತ ನನ್ನದಲ್ಲʼʼ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಕುಮಾರಸ್ವಾಮಿ ಹಾಗೂ ನಿಮ್ಮ ನಡುವೆ ವೈಯಕ್ತಿಕ ನಿಂದನೆಗಳು ಹೆಚ್ಚುತ್ತಿವೆಯಲ್ಲ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ʻʻಇದನ್ನು ಆರಂಭಿಸಿದ್ದು ಯಾರು? ಕುಮಾರಸ್ವಾಮಿ ಅವರು ಮೊದಲು ನನ್ನ ಬಗ್ಗೆ ಏನೆಲ್ಲಾ ಹೇಳಿದರು? ಸಂಸತ್ ಚುನಾವಣೆ ಸೋತ ಬಳಿಕ ಕುಮಾರಸ್ವಾಮಿ ಏನೆಲ್ಲಾ ಮಾತನಾಡಿದ್ದಾರೆ ಎಂಬುದನ್ನು ಮಾಧ್ಯಮಗಳೇ ತೋರಿಸಲಿ. ಅವರು ಹೇಳಿರುವುದಕ್ಕೆ ನಾನು ಪ್ರತಿಕ್ರಿಯೆ ನೀಡಿದ್ದೇನೆ. ಅವರು ಮುಖ್ಯಮಂತ್ರಿಯಾಗಿದ್ದಾಗ ನಾನು ಅವರ ಜತೆ ಕೆಲಸ ಮಾಡಿದ್ದೇನೆ ಎಂಬ ಕಾರಣಕ್ಕೆ ಕಳೆದ ಎರಡು ಮೂರು ವರ್ಷಗಳಿಂದ ನಾನು ಬಹಳ ತಾಳ್ಮೆಯಿಂದ ಇದ್ದೆ. ಅವರನ್ನು ಅಣ್ಣ ಎಂದು ಸ್ವೀಕಾರ ಮಾಡಿದ್ದೆ. ಅವರು ಈ ರೀತಿ ಮಾತನಾಡಿದರೆ ನಾನು ಹೆದರಿ ಕೂರಲು ಸಾಧ್ಯವೇ? ಅಧಿಕಾರ ಬರುತ್ತದೆ, ಅಧಿಕಾರ ಹೋಗುತ್ತದೆ. ನನ್ನದು ಹೆದರಿ ಕೂರುವ ರಕ್ತವಲ್ಲʼʼ ಎಂದು ಆಕ್ರೋಶ ಹೊರಹಾಕಿದರು.

ʻʻಕುಮಾರಸ್ವಾಮಿ ಅವರು ನನಗೆ ಎಚ್ಚರಿಕೆ ಕೊಟ್ಟಿದ್ದಾರಲ್ಲ. ಇಂತಹ ಬೆದರಿಕೆಗೆ ಈ ಡಿ.ಕೆ. ಶಿವಕುಮಾರ್ ಹೆದರುವುದಿಲ್ಲ. ನನ್ನ ವಿರುದ್ಧ ಇರುವ ದಾಖಲೆ ಗೌಪ್ಯವಾಗಿ ಇರಬಾರದು. ಅದನ್ನು ಬಿಚ್ಚಿಡಲಿ. ಅವರ ಬುಟ್ಟಿಯಲ್ಲಿ ಹಾವಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ನಾನು ವಿಧವೆಯರಿಗೆ ಗನ್ ಪಾಯಿಂಟ್ ನಲ್ಲಿಟ್ಟು ಆಸ್ತಿ ಬರೆಸಿಕೊಂಡಿದ್ದೇನೆ ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಹಾಗಿದ್ದರೆ ಅವರನ್ನು ಕರೆದುಕೊಂಡು ಬಂದು ನನ್ನ ವಿರುದ್ಧ ದೂರು ನೀಡಿ ಎಫ್ಐಆರ್ ದಾಖಲಿಸಲಿʼʼ ಎಂದು ಸವಾಲು ಹಾಕಿದರು.

ಗಂಡಸ್ಥನ ಹಾಗೂ ನಪುಂಸಕ ರಾಜಕಾರಣದ ಬಗ್ಗೆ ಕುಮಾರಸ್ವಾಮಿ ಅವರ ಹೇಳಿಕೆ ಕುರಿತ ಮಾತನಾಡಿ, ʻʻಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ನಾನು ಗಮನಿಸಿಲ್ಲ. ಅವರೋಬ್ಬರೇ ಗಂಡಸು. ಅವರು ಈ ಹಿಂದೆ ಏನು ಮಾತನಾಡಿದ್ದಾರೆ ಒಮ್ಮೆ ನೋಡಿ. ನನ್ನನ್ನು ಮಿಲಿಟರಿ ಬಂದು ಕರೆದುಕೊಂಡು ಹೋಗುತ್ತೆ ಎಂದು ಹೇಳಿದ್ದಾರೆ. ಅಂದರೆ ನಾನು ಮತ್ತೆ ಜೈಲಿಗೆ ಹೋಗುತ್ತೇನೆ ಎಂದು ಹೇಳಿದ್ದಾರೆ. ನಾನು ಜೈಲು ನೋಡಿರುವವನು. ನಾನು ಜೈಲಲ್ಲಿ ಇದ್ದಾಗ ಅವರು ಬಂದು ನನ್ನ ನೋಡಿದ್ದರು. ಜೈಲಿನ ಒಳಗೆ ನಾನು ಎಷ್ಟು ಶಕ್ತಿಯಲ್ಲಿದ್ದೆ ಎಂದು ನೋಡಿದ್ದಾರೆʼʼ ಎಂದರು ತಿರುಗೇಟು ನೀಡಿದರು.

ʻʻನಾನು ಅವರ ಕುಟುಂಬದಲ್ಲಿ ಅವರ ಸಹೋದರನ ಆಸ್ತಿ ವಿವರ ಕೇಳಿದ್ದೇನೆ ನಿಜ. ಇವರು ಮುಖ್ಯಮಂತ್ರಿಯಾಗಿದ್ದಾಗ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ನನ್ನ ಮೇಲೆ, ನನ್ನ ಸಹೋದರ, ತಂಗಿ, ಪತ್ನಿ ಮೇಲೆ ಅದಿರು ಕಳ್ಳತನದ ಸುಳ್ಳು ಕೇಸ್ ಹಾಕಿಸಿದ್ದರು. ಎಫ್ಐಆರ್ ದಾಖಲಿಸಿದ್ದರು. ಅದೆಲ್ಲವನ್ನು ಮರೆತು ನಾನು ಅವರು ಮುಖ್ಯಮಂತ್ರಿಯಾಗಲು ನೆರವಾಗಿದ್ದೆ. ಆನಂತರ ನಡೆದ ಬೆಳವಣಿಗೆ ಎಲ್ಲರಿಗೂ ಗೊತ್ತಿದೆ. ಅವರು ಸಿಎಂ ಆಗಿದ್ದಾಗ ಪ್ರಾಮಾಣಿಕವಾಗಿ, ನಿಷ್ಠೆಯಿಂದ ಕೆಲಸ ಮಾಡಿದ್ದೆ. ನಾನು ಅವರ ಸುದ್ದಿಗೆ ಹೋಗುತ್ತಿರಲಿಲ್ಲʼʼ ಎಂದರು.

Read More
Next Story