![BJP Infighing | ಬಿಜೆಪಿ ಅಧ್ಯಕ್ಷನಾಗುವ ಅರ್ಹತೆ ನನಗೂ ಇದೆ; ಬಸನಗೌಡ ಪಾಟೀಲ ಯತ್ನಾಳ BJP Infighing | ಬಿಜೆಪಿ ಅಧ್ಯಕ್ಷನಾಗುವ ಅರ್ಹತೆ ನನಗೂ ಇದೆ; ಬಸನಗೌಡ ಪಾಟೀಲ ಯತ್ನಾಳ](https://karnataka.thefederal.com/h-upload/2025/02/09/511692-yatnal.webp)
BJP Infighing | ಬಿಜೆಪಿ ಅಧ್ಯಕ್ಷನಾಗುವ ಅರ್ಹತೆ ನನಗೂ ಇದೆ; ಬಸನಗೌಡ ಪಾಟೀಲ ಯತ್ನಾಳ
ಕುಟುಂಬ ರಾಜಕಾರಣ ಹಾಗೂ ಭ್ರಷ್ಟಾಚಾರ ವಿರುದ್ಧದ ನಮ್ಮ ಹೋರಾಟ ಮುಂದುವರೆಯಲಿದೆ. ರಾಜ್ಯವನ್ನು ಭ್ರಷ್ಟಾಚಾರ ಮುಕ್ತ ಮಾಡಲು ಪ್ರಯತ್ನಿಸಲಾಗುವುದು. ನಾನೂ ಕೂಡ ಬಿಜೆಪಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಆಗುವ ಅರ್ಹತೆ ನನಗೂ ಇದೆ. ದೆಹಲಿಯಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರ ಮನೆಯ ಗೃಹಪ್ರವೇಶವಿದೆ. ಅಲ್ಲಿಯೇ ವರಿಷ್ಠರನ್ನು ಭೇಟಿಯಾಗಿ ಚರ್ಚಿಸಲಿದ್ದೇವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಟುಂಬ ರಾಜಕಾರಣ ಹಾಗೂ ಭ್ರಷ್ಟಾಚಾರ ವಿರುದ್ಧದ ನಮ್ಮ ಹೋರಾಟ ಮುಂದುವರೆಯಲಿದೆ. ರಾಜ್ಯವನ್ನು ಭ್ರಷ್ಟಾಚಾರ ಮುಕ್ತ ಮಾಡಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಕಳೆದ ಬಾರಿ ದೆಹಲಿಗೆ ಹೋಗಿದ್ದಾಗ ವರಿಷ್ಠರ ಭೇಟಿಯ ಅವಕಾಶ ಸಿಗದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ವರಿಷ್ಠರು ಸಿಗುತ್ತಾರೋ, ಬಿಡುತ್ತಾರೋ ನಿಮಗೆ ಹೇಳಬೇಕೆಂದೇನಿಲ್ಲ ಎಂದು ಗರಂ ಆದರು.
ಇನ್ನು ಮಾಜಿ ಸಚಿವ ಶ್ರೀರಾಮುಲು ಅವರ ಯಾತ್ರೆ ಕುರಿತು ಪ್ರತಿಕ್ರಿಯಿಸಿದ ಯತ್ನಾಳ್ ಅವರು, ಒಡೆದ ಮನಸ್ಸುಗಳನ್ನು ಒಂದುಗೂಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಯಾತ್ರೆ ಕೈಗೊಳ್ಳುವ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ ಎಂದು ಹೇಳಿದರು.
ನಿನ್ನೆಯಷ್ಟೇ ಯತ್ನಾಳ್ ಬಣದ ನಾಯಕ ಕುಮಾರ್ ಬಂಗಾರಪ್ಪ ಅವರು ಕೂಡ ತಾವು ಕೂಡ ಬಿಜೆಪಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಹೇಳಿಕೊಂಡಿದ್ದರು. ಅಲ್ಲದೇ ಹಲವು ಆಕಾಂಕ್ಷಿಗಳ ಹೆಸರು ಮುಂಚೂಣಿಯಲ್ಲಿದ್ದು, ಪೈಫೋಟಿ ತೀವ್ರಗೊಂಡಿತ್ತು.
ವರಿಷ್ಠರು ಫೆ.20 ರೊಳಗೆ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ನಡೆಸಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.