
ಜಾತಿ ಶ್ರೇಷ್ಠತೆಯ ರೋಗ | ಸಚಿವರಿಂದ ಬೌದ್ಧ ಧರ್ಮ ಸ್ವೀಕಾರದ ಪ್ರತಿಜ್ಞೆ
ನನ್ನ ಅನುಭವದಲ್ಲಿ ಜಾತಿ ಶ್ರೇಷ್ಠತೆಯ ರೋಗದಿಂದ ಬಳಲುತ್ತಿರುವ ಹಿಂದೂ ಧರ್ಮವು ಸುಧಾರಣೆ ಆಗುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಹೀಗಾಗಿ ನಾನು ಸಮಾನತೆ ಮತ್ತು ಶಾಂತಿಯ ರೂಪಕವಾದ ಬೌದ್ಧ ಧರ್ಮವನ್ನು ಸ್ವೀಕರಿಸುತ್ತೇನೆ.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ವಿಶ್ವವಿಖ್ಯಾತ ದಸರಾ ಆಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು ಬೌದ್ಧ ಧರ್ಮ ಸ್ವೀಕರಿಸುವುದಾಗಿ ಘೋಷಿಸಿದ್ದಾರೆ.
ಸೋಮವಾರ ಧಮ್ಮ ಚಕ್ರ ಪರಿವರ್ತನಾ ದಿನದ ಪ್ರಯುಕ್ತ ಜಾಲತಾಣ ಎಕ್ಸ್ನಲ್ಲಿ ಶುಭಾಶಯ ಕೋರಿರುವ ಮಹದೇವಪ್ಪ ಅವರು, ಹಿಂದೂ ಧರ್ಮ ಜಾತಿ ಶ್ರೇಷ್ಠತೆಯ ರೋಗದಿಂದ ಬಳಲುತ್ತಿದೆ. ಹಾಗಾಗಿ ಹಿಂದೂ ಧರ್ಮ ಸುಧಾರಣೆಯಾಗುವ ಯಾವ ಲಕ್ಷಣವೂ ಕಾಣುತ್ತಿಲ್ಲ. ನಾನು ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಬೋಧಿಸುವ ಧರ್ಮವನ್ನು ಇಷ್ಟಪಡುತ್ತೇನೆ ಎಂದು ಬರೆದುಕೊಂಡಿದ್ದಾರೆ.
ನಾನು ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಬೋಧಿಸುವ ಧರ್ಮವನ್ನು ಇಷ್ಟಪಡುತ್ತೇನೆ. ಏಕೆಂದರೆ ವ್ಯಕ್ತಿಯ ಬೆಳವಣಿಗೆಗೆ ಕರುಣೆ, ಸಮಾನತೆ ಮತ್ತು ಸ್ವಾತಂತ್ರ್ಯ ಅತ್ಯಂತ ಮುಖ್ಯ. ಆದರೆ ನನ್ನ ಅನುಭವದಲ್ಲಿ ಜಾತಿ ಶ್ರೇಷ್ಠತೆಯ ರೋಗದಿಂದ ಬಳಲುತ್ತಿರುವ ಹಿಂದೂ ಧರ್ಮವು ಸುಧಾರಣೆ ಆಗುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಹೀಗಾಗಿ ನಾನು ಸಮಾನತೆ ಮತ್ತು ಶಾಂತಿಯ ರೂಪಕವಾದ ಬೌದ್ಧ ಧರ್ಮವನ್ನು ಸ್ವೀಕರಿಸುತ್ತೇನೆ. ಮುಂದೆ ಎಲ್ಲರೂ ಭಾರತದ ಮೂಲ ಧರ್ಮವಾಗಿದ್ದ ಬೌದ್ಧ ಧರ್ಮದ ಪ್ರಚಾರ ಮಾಡಬೇಕೆಂದು ಬಯಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
3.5 ಲಕ್ಷ ಅನುಯಾಯಿಗಳೊಂದಿಗೆ ಬೌದ್ಧ ಧರ್ಮ ಸ್ವೀಕರಿಸಿದ ಬಾಬಾ ಸಾಹೇಬರ ಧಮ್ಮ ಚಕ್ರ ಪರಿವರ್ತನಾ ದಿನದಂದು ಎಲ್ಲರಿಗೂ ಶುಭಾಶಯಗಳನ್ನು ಕೋರಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಹಿಂದೂ ಧರ್ಮದ ಆಚರಣೆಗಳಿಂದ ವಿಮುಖರಾಗಿ 1956ರಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ಅಧಿಕೃತವಾಗಿ ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದರು.