
ಬಾಹ್ಯಾಕಾಶ ಮಿಷನ್‌ಗಳಲ್ಲಿಯೂ ಹೈಡ್ರೋಜನ್ ಬಳಸಿಕೊಳ್ಳಲು ಪರೀಕ್ಷೆಗಳು ನಡೆಯುತ್ತಿವೆ.
ಬಾಹ್ಯಾಕಾಶದಿಂದ ಸಾರಿಗೆಯವರೆಗೆ: ಹೈಡ್ರೋಜನ್ ಇಂಧನವೇ ಭವಿಷ್ಯ ಎಂದ ಇಸ್ರೋ ಅಧ್ಯಕ್ಷ
ಪ್ರಸ್ತುತ ವಿಶ್ವ ಎರಡು ಸವಾಲುಗಳನ್ನು ಎದುರಿಸುತ್ತಿದೆ. ಹೆಚ್ಚುತ್ತಿರುವ ಇಂಧನದ ಬೇಡಿಕೆ ಮತ್ತು ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ತಗ್ಗಿಸುವುದು ತುರ್ತುಅಗತ್ಯ ಎಂದು ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ತಿಳಿಸಿದರು.
ಭಾರತದ ಭವಿಷ್ಯದ ಬಾಹ್ಯಾಕಾಶ ಯೋಜನೆಗಳು, ಸಾರ್ವಜನಿಕ ಸಾರಿಗೆ ಮತ್ತು ಶುದ್ಧ ಇಂಧನ ಕ್ಷೇತ್ರದಲ್ಲಿ ಹೈಡ್ರೋಜನ್ ಮಹತ್ವದ ಪಾತ್ರ ವಹಿಸಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಅಧ್ಯಕ್ಷ ಡಾ. ವಿ. ನಾರಾಯಣನ್ ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ವಿಜ್ಞಾನ ಸಂಸ್ಥೆ ಆಯೋಜಿಸಿದ್ದ "ಹೈಡ್ರೋಜನ್ ಇಂಧನ ತಂತ್ರಜ್ಞಾನಗಳು ಮತ್ತು ಭವಿಷ್ಯದ ಪ್ರವೃತ್ತಿಗಳು" ಎಂಬ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, "ಪ್ರಸ್ತುತ ವಿಶ್ವವು ಹೆಚ್ಚುತ್ತಿರುವ ಇಂಧನದ ಬೇಡಿಕೆ ಮತ್ತು ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ತಗ್ಗಿಸುವುದು ಎಂಬ ಎರಡು ಪ್ರಮುಖ ಸವಾಲುಗಳನ್ನು ಎದುರಿಸುತ್ತಿದೆ. ಈ ಸಂದರ್ಭದಲ್ಲಿ, ಅತ್ಯಂತ ಶುದ್ಧ ಮತ್ತು ಹಸಿರು ಇಂಧನವಾದ ಹೈಡ್ರೋಜನ್ ಭವಿಷ್ಯದ ದೊಡ್ಡ ಭರವಸೆಯಾಗಿದೆ. ಇಸ್ರೋದ ಹಲವು ಪ್ರಗತಿಶೀಲ ಯೋಜನೆಗಳಲ್ಲಿ ಹೈಡ್ರೋಜನ್ ಪ್ರಮುಖವಾಗಿದೆ," ಎಂದರು.
ಇಸ್ರೋದಲ್ಲಿ ಹೈಡ್ರೋಜನ್ ತಂತ್ರಜ್ಞಾನ
ಇಸ್ರೋದ ಸಾಧನೆಗಳನ್ನು ವಿವರಿಸಿದ ಅವರು, "2025ರ ಜನವರಿಯಲ್ಲಿ ನಾವು ಜಿಎಸ್‌ಎಲ್‌ವಿ ಮಾರ್ಕ್-III ರಾಕೆಟ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಿದ್ದೇವೆ. ಇದರಲ್ಲಿ ದ್ರವರೂಪದ ಹೈಡ್ರೋಜನ್ ಮತ್ತು ಆಮ್ಲಜನಕವನ್ನು ಬಳಸುವ ಕ್ರಯೋಜೆನಿಕ್ ಹಂತವಿತ್ತು. ಒಮ್ಮೆ ಭಾರತಕ್ಕೆ ನಿರಾಕರಿಸಲ್ಪಟ್ಟಿದ್ದ ಈ ತಂತ್ರಜ್ಞಾನವನ್ನು ಇಂದು ನಾವು ಸಂಪೂರ್ಣವಾಗಿ ಕರಗತ ಮಾಡಿಕೊಂಡಿದ್ದೇವೆ. ಕಳೆದ ವರ್ಷ, ನಾವು 100 ವ್ಯಾಟ್ ಆಮ್ಲಜನಕ ಆಧಾರಿತ ಇಂಧನಕೋಶವನ್ನು ಬಾಹ್ಯಾಕಾಶದಲ್ಲಿ ಪ್ರದರ್ಶಿಸಿದ್ದು, ಈಗ 20 ಕಿಲೋವ್ಯಾಟ್ ಆವೃತ್ತಿಯ ಪರೀಕ್ಷೆ ನಡೆಯುತ್ತಿದೆ," ಎಂದು ಮಾಹಿತಿ ನೀಡಿದರು.
ಸಾರಿಗೆ ಕ್ಷೇತ್ರದಲ್ಲೂ ಹೈಡ್ರೋಜನ್ ಬಳಕೆ
ಹೈಡ್ರೋಜನ್‌ನ ವ್ಯಾಪಕ ಬಳಕೆಯ ಬಗ್ಗೆ ಮಾತನಾಡಿದ ಅವರು, "ಹೈಡ್ರೋಜನ್ ಅನ್ನು ಬಸ್‌ಗಳು, ರೈಲುಗಳು, ವಿಮಾನಗಳು ಹಾಗೂ ಇಂಧನಕೋಶಗಳಲ್ಲಿ ಬಳಸಬಹುದು. 2010-11ರಲ್ಲಿ ಇಸ್ರೋ, ಟಾಟಾ ಮೋಟಾರ್ಸ್ ಜೊತೆಗೂಡಿ ಹೈಡ್ರೋಜನ್ ಇಂಧನಕೋಶ ಬಸ್ ನಿರ್ಮಿಸಿ ಯಶಸ್ವಿಯಾಗಿ ಪರೀಕ್ಷೆ ನಡೆಸಿತ್ತು. 2025ರ ಜೂನ್‌ನಲ್ಲಿ ಐದು ಹೈಡ್ರೋಜನ್ ಬಸ್‌ಗಳು ವಾಣಿಜ್ಯ ಸೇವೆಗೆ ಪ್ರವೇಶಿಸಿವೆ. ಬಿಎಚ್‌ಇಎಲ್ ಮತ್ತು ಎನ್‌ಟಿಪಿಸಿ ಸಂಸ್ಥೆಗಳು ಈಗ ಹೈಡ್ರೋಜನ್ ಗ್ಯಾಸ್ ಟರ್ಬೈನ್ ಎಂಜಿನ್ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವತ್ತ ಕೆಲಸ ಮಾಡುತ್ತಿವೆ," ಎಂದರು.
ಸುರಕ್ಷತೆ ಮತ್ತು ಸಂಶೋಧನೆಯ ಸವಾಲುಗಳು
ಹೈಡ್ರೋಜನ್ ಬಳಕೆಯಲ್ಲಿರುವ ಸವಾಲುಗಳನ್ನು ಕೂಡ ಅವರು ಉಲ್ಲೇಖಿಸಿದರು. "ಹೈಡ್ರೋಜನ್ ಜ್ವಾಲೆಯು ಬಣ್ಣರಹಿತವಾಗಿರುವುದರಿಂದ ಇದು ಅಪಾಯಕಾರಿ. ಹೈಡ್ರೋಜನ್ ಸಂಗ್ರಹಣಾ ಸೌಲಭ್ಯಗಳು ವಿಸ್ತಾರವಾಗುತ್ತಿರುವುದರಿಂದ ಉತ್ತಮ ಸೆನ್ಸರ್‌ಗಳ ಅವಶ್ಯಕತೆ ಇದೆ. ಪ್ರಸ್ತುತ 3-4 ಸೆಕೆಂಡುಗಳಲ್ಲಿ ಪ್ರತಿಕ್ರಿಯೆ ನೀಡುವ ಸೆನ್ಸರ್‌ಗಳ ಬದಲು, ಮಿಲಿಸೆಕೆಂಡ್ ಮಟ್ಟದಲ್ಲಿ ಪತ್ತೆಹಚ್ಚಬಲ್ಲ ತಂತ್ರಜ್ಞಾನದ ಅಗತ್ಯವಿದೆ," ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಸ್‌ಐಆರ್ ಮಹಾನಿರ್ದೇಶಕಿ ಡಾ. ಎನ್. ಕಲೈಸೆಲ್ವಿ, "ಭಾರತವು 'ನೆಟ್-ಶೂನ್ಯ' ಇಂಗಾಲ ಹೊರಸೂಸುವಿಕೆ ಗುರಿ ಸಾಧಿಸಲು ಹೈಡ್ರೋಜನ್ ಆರ್ಥಿಕತೆಯತ್ತ ವೇಗವಾಗಿ ಸಾಗಬೇಕು. ಇದಕ್ಕಾಗಿ ಇಂಧನ ಸಂಗ್ರಹಣೆ, 700 ಬಾರ್ ಮಟ್ಟದ ಸಂಗ್ರಹಣಾ ವ್ಯವಸ್ಥೆಗಳು ಮತ್ತು ಸಂಪೂರ್ಣ ಸ್ವದೇಶಿ ತಂತ್ರಜ್ಞಾನದ ಅಭಿವೃದ್ಧಿ ಅತ್ಯಗತ್ಯವಾಗಿದೆ," ಎಂದು ಸಂಶೋಧನೆಯ ಮಹತ್ವವನ್ನು ವಿವರಿಸಿದರು.