
ಸಾಂದರ್ಭಿಕ ಚಿತ್ರ
ಪತ್ನಿಯನ್ನು ಕೊಂದು ಮಂಚದಡಿ ಬಚ್ಚಿಟ್ಟಿದ್ದ ಪತಿ; ವರದಕ್ಷಿಣೆಗಾಗಿ ಕೊಲೆ ಶಂಕೆ
ಗೃಹಿಣಿ ಸಾಕ್ಷಿ ಅವರ ಕುಟುಂಬವು ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಆಕಾಶ್ ಪತ್ತೆಗೆ ಬಲೆ ಬೀಸಿದ್ದಾರೆ.
ವಿವಾಹವಾಗಿ ಕೇವಲ ನಾಲ್ಕು ತಿಂಗಳು ಕಳೆಯುವುದಷ್ಟರಲ್ಲೇ ಪತ್ನಿಯನ್ನು ಪತಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಮಲಾದಿನ್ನಿ ಗ್ರಾಮದಲ್ಲಿ ನಡೆದಿದೆ.
ಸಾಕ್ಷಿ (20) ಮೃತ ನವ ವಿವಾಹಿತೆ. ಆಕೆಯ ಪತಿ ಆಕಾಶ್ ಕಂಬಾರ್ ವಿರುದ್ಧ ಕೊಲೆ ಅರೋಪ ಕೇಳಿಬಂದಿದೆ. ಆಕಾಶ್ ತನ್ನ ಪತ್ನಿ ಸಾಕ್ಷಿಯನ್ನು ಕೊಂದು ಶವವನ್ನು ಹಾಸಿಗೆಯ ಕೆಳಗೆ ಮರೆ ಮಾಡಿ ಬಳಿಕ ಮನೆಯಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಕಾಶ್ ತಾಯಿ ಊರಿನಿಂದ ಹಿಂತಿರುಗಿ ಬಂದಾಗ ಸೊಸೆ ಸಾಕ್ಷಿಯ ಶವ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಮೂರು ದಿನಗಳ ಹಿಂದೆಯೇ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅಂದಿನಿಂದ ಆಕಾಶ್‌ನ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು, ಆತ ತಲೆಮರೆಸಿಕೊಂಡಿದ್ದಾನೆ.
ವರದಕ್ಷಿಣೆ ಕಿರುಕುಳ ಶಂಕೆ
ಸಾಕ್ಷಿಯ ಕುಟುಂಬವು ವರದಕ್ಷಿಣೆ ಕಿರುಕುಳದ ಶಂಕೆ ವ್ಯಕ್ತಪಡಿಸಿದ್ದು, ಈ ಹಿನ್ನೆಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆಕಾಶ್ ಪತ್ತೆಗೆ ಹುಡುಕಾಟ ಆರಂಭಿಸಿದ್ದಾರೆ. ವಿಧಿವಿಜ್ಞಾನ ತಜ್ಞರು ಮತ್ತು ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯಲ್ಲಿ ಇದೇ ರೀತಿಯ ಘಟನೆ ಇತ್ತೀಚೆಗೆ ನಡೆದಿತ್ತು. ಅಲ್ಲಿ ವರದಕ್ಷಿಣೆ ಕಿರುಕುಳ ನೀಡಿ ಗರ್ಭಿಣಿ ಮಹಿಳೆಯನ್ನು ಆಕೆಯ ಪತಿ ಮತ್ತು ಅತ್ತೆ ಮಾವ ಹೊಡೆದು ಕೊಂದಿದ್ದರು ಎಂಬ ಆರೋಪ ಕೇಳಿಬಂದಿತ್ತು.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಪ್ರಕಾರ, 2023ರಲ್ಲಿ ವರದಕ್ಷಿಣೆ ಸಂಬಂಧಿತ ಅಪರಾಧಗಳು ಶೇಕಡಾ 14ರಷ್ಟು ಹೆಚ್ಚಳ ಕಂಡಿದ್ದು, ದೇಶಾದ್ಯಂತ 15,000 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ 6,100 ಕ್ಕೂ ಹೆಚ್ಚು ಸಾವುಗಳು ವರದಿಯಾಗಿವೆ.
ವರದಕ್ಷಿಣೆ ನಿಷೇಧ ಕಾಯ್ದೆಯಡಿ 15,489 ಪ್ರಕರಣಗಳನ್ನು ದಾಖಲಿಸಿದ್ದು, 2022 ರಲ್ಲಿ 13,479 ಪ್ರಕರಣಗಳು ದಾಖಲಾಗಿದ್ದವು. ವರದಕ್ಷಿಣೆ ಸಂಬಂಧಿತ ಪ್ರಕರಣಗಳಲ್ಲಿ ಕರ್ನಾಟಕವು ದೇಶದಲ್ಲಿ ಮೂರನೇ ಅತಿ ಹೆಚ್ಚು ಸ್ಥಾನದಲ್ಲಿದ್ದರೆ, ಉತ್ತರ ಪ್ರದೇಶ ಮತ್ತು ಬಿಹಾರ ಮೊದಲೆರಡು ಸ್ಥಾನದಲ್ಲಿವೆ.