
ಸಾಂದರ್ಭಿಕ ಚಿತ್ರ
ವಿಚ್ಛೇದನ ಕೇಳಿದ್ದಕ್ಕೆ ಪತ್ನಿಯ ಖಾಸಗಿ ಫೋಟೋ ಲೀಕ್; ಪತಿ ಬಂಧನ
ಆರೋಪಿ ಗೋವಿಂದರಾಜು ತನ್ನ ಪತ್ನಿಗೆ ಪದೇ ಪದೇ ಕರೆ ಮಾಡಿ ಖಾಸಗಿ ಫೋಟೋಗಳು ಮತ್ತು ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡುವುದಾಗಿ ನಿರಂತರವಾಗಿ ಬೆದರಿಕೆ ಹಾಕುತ್ತಿದ್ದ.
ವಿಚ್ಛೇದನ ಕೋರಿದ ಪತ್ನಿಯ ಮೇಲೆ ಸೇಡು ತೀರಿಸಿಕೊಳ್ಳಲು ಆಕೆಯ ಖಾಸಗಿ ಫೋಟೋಗಳನ್ನು ಆನ್‌ಲೈನ್‌ನಲ್ಲಿ ಸೋರಿಕೆ ಮಾಡಿದ ಪತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಅಮೃತನಗರದ ನಿವಾಸಿ ಗೋವಿಂದರಾಜು ಸಿ (27) ಬಂಧಿತ ಆರೋಪಿ. ಅಗ್ನಿಶಾಮಕ ಮತ್ತು ಸುರಕ್ಷತಾ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದರು. ಈಚೆಗೆ ಕೌಟುಂಬಿಕ ಕಲಹದಿಂದ ಪತ್ನಿಯು ಪತಿಯಿಂದ ವಿಚ್ಛೇದನ ಕೋರಿದ್ದರು. ಇದರಿಂದ ಕುಪಿತನಾದ ಪತಿಯು ತನ್ನ ಪತ್ನಿ ಖಾಸಗಿ ಚಿತ್ರಗಳನ್ನು ಸ್ನೇಹಿತರಿಗೆ ಟ್ಯಾಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ಜೋಡಿಯು ಯಲಹಂಕದ ಮಾಲ್‌ನಲ್ಲಿ ಒಟ್ಟಿಗೆ ಕೆಲಸ ಮಾಡುವಾಗ ಪರಿಚಯವಾಗಿ 2024 ರಲ್ಲಿ ವಿವಾಹವಾಗಿದ್ದರು. ಆದರೆ, ಗೋವಿಂದರಾಜು ಆನ್‌ಲೈನ್ ಬೆಟ್ಟಿಂಗ್ ಮೋಹಕ್ಕೆ ಬಿದ್ದು, ಪತ್ನಿಯ ಸಂಪಾದನೆಯನ್ನು ಬೆಟ್ಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದ. ಈ ವಿಚಾರ ದಂಪತಿ ನಡುವೆ ಆಗಾಗ ಜಗಳಕ್ಕೂ ಕಾರಣವಾಗುತ್ತಿತ್ತು. ಕಿರುಕುಳದಿಂದ ಬೇಸತ್ತ ಮಹಿಳೆಯು ಬೆಂಗಳೂರು ತೊರೆದು ಆಂಧ್ರಪ್ರದೇಶದಲ್ಲಿರುವ ತನ್ನ ತವರು ಮನೆಗೆ ತೆರಳಿದ್ದಳು. ಅಲ್ಲದೇ ವಿಚ್ಛೇದನ ನೀಡುವಂತೆ ಕೇಳಿದ್ದರು. ಇದರಿಂದ ಕುಪಿತನಾದ ಪತಿ ಗೋವಿಂದರಾಜು, ಆಕೆಯ ಖಾಸಗಿ ಫೋಟೋಗಳು ಮತ್ತು ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ. ಇದರಿಂದ ಹೆದರಿದ ಮಹಿಳೆಯು ಬೆಂಗಳೂರಿಗೆ ವಾಪಸಾಗಿ ಪೇಯಿಂಗ್ ಗೆಸ್ಟ್ ವಸತಿಗೃಹದಲ್ಲಿ ವಾಸಿಸುತ್ತಿದ್ದಳು.
ಅಲ್ಲಿಯೂ ಸಹ ಆರೋಪಿ ಕಿರುಕುಳ ನೀಡುವುದನ್ನು ಮುಂದುವರಿಸಿದ್ದಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಿರಂತರ ದೌರ್ಜನ್ಯ ಸಹಿಸಲಾಗದೆ ಮಹಿಳೆ ವಿಚ್ಛೇದನ ಕೋರಿದ್ದಳು. ಇದರಿಂದ ಕೋಪಗೊಂಡ ಗೋವಿಂದರಾಜು, ಸೇಡು ತೀರಿಸಿಕೊಳ್ಳಲು ಆಕೆಯ ಖಾಸಗಿ ಫೋಟೋಗಳನ್ನು 'ಥ್ರೆಡ್ಸ್' ಅಪ್ಲಿಕೇಶನ್‌ನಲ್ಲಿ ಹಂಚಿಕೊಂಡು ಆಕೆಯ ಸ್ನೇಹಿತರ ಗುಂಪನ್ನು ಟ್ಯಾಗ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಸ್ನೇಹಿತರಿಂದ ಮಾಹಿತಿ ಪಡೆದ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾರೆ. ಗೋವಿಂದರಾಜು ವಿರುದ್ಧ ಸೈಬರ್ ಕ್ರೈಂ ಮತ್ತು ಇತರೆ ಸಂಬಂಧಿತ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

