
ವರದಕ್ಷಿಣೆಗಾಗಿ ವೈದ್ಯೆಗೆ ಗರ್ಭಪಾತ ಮಾಡಿಸಿದ ಪತಿಯ ಕುಟುಂಬ
ನವ್ಯಾ ಅವರ ಪತಿ ಅಭಿಷೇಕ್, ಮಾವ ಗೋವಿಂದರಾಜ್, ಅತ್ತೆ ಲತಾ, ಖಾಸಗಿ ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಜ್ಞಾನಶೇಖರ್ ಮತ್ತು ಖಾಸಗಿ ಆಸ್ಪತ್ರೆಯ ವೈದ್ಯೆ ಲತಾ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ವರದಕ್ಷಿಣೆ ಕೊಡಲಿಲ್ಲ ಎಂಬ ಕಾರಣಕ್ಕೆ, ಮದುವೆಯಾದ ಎರಡೇ ತಿಂಗಳಿಗೆ ವೈದ್ಯೆಯೊಬ್ಬರಿಗೆ ಗರ್ಭಪಾತ ಮಾಡಿಸಿದ ಆಘಾತಕಾರಿ ಘಟನೆ ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತೆಯ ಪತಿ, ಅತ್ತೆ, ಮಾವ ಸೇರಿದಂತೆ ಒಟ್ಟು ಐವರ ವಿರುದ್ಧ ಇದೀಗ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸಂತ್ರಸ್ತ ಮಹಿಳೆ ನವ್ಯಾ (ಹೆಸರು ಬದಲಾಯಿಸಲಾಗಿದೆ), ಕೆ.ಆರ್.ಪೇಟೆಯ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎರಡು ತಿಂಗಳ ಹಿಂದೆ, ಕೆ.ಆರ್.ನಗರದ ನಿವಾಸಿ ಮಹದೇವ್ ತಮ್ಮ ಮಗಳು ನವ್ಯಾರನ್ನು ಬಿಳಿಕೆರೆಯ ನಿವಾಸಿ ಹಾಗೂ ಚಿನ್ನದ ವ್ಯಾಪಾರಿ ಗೋವಿಂದರಾಜು ಅವರ ಪುತ್ರ ಅಭಿಷೇಕ್ ಅವರಿಗೆ ಸುಮಾರು 80 ಲಕ್ಷ ರೂಪಾಯಿ ಖರ್ಚು ಮಾಡಿ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು.
ಆದರೆ, ಮದುವೆಯಾದ ಕೆಲವೇ ತಿಂಗಳಲ್ಲಿ ವರದಕ್ಷಿಣೆಗಾಗಿ ಕಿರುಕುಳ ಶುರುವಾಗಿದೆ ಎಂದು ನವ್ಯಾ ಆರೋಪಿಸಿದ್ದಾರೆ. ನವ್ಯಾ ಗರ್ಭಿಣಿಯಾಗಿದ್ದಾಗ, ಪತಿ ಅಭಿಷೇಕ್, ಅತ್ತೆ ಮತ್ತು ಮಾವ ಸೇರಿಕೊಂಡು ಆಕೆಯನ್ನು ತಿರುಪತಿಗೆ ಕರೆದುಕೊಂಡು ಹೋಗಿ ಗರ್ಭಪಾತ ಮಾಡಿಸಿದ್ದಾರೆ ಎನ್ನಲಾಗಿದೆ. ನವ್ಯಾ ಅವರ ತಂದೆ ಮಹದೇವ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, "ನನ್ನ ಮಗಳನ್ನು ಮದುವೆಯ ನಂತರ ಒಂದು ದಿನವೂ ಚೆನ್ನಾಗಿ ನೋಡಿಕೊಂಡಿಲ್ಲ. ತಿರುಪತಿಗೆ ಹೋಗೋಣ ಎಂದು ಕರೆದುಕೊಂಡು ಹೋಗಿ, ಅವಳಿಗೆ ತಿಳಿಯದಂತೆ ಗರ್ಭಪಾತ ಮಾಡಿಸಿದ್ದಾರೆ. ಒಂದು ಖಾಸಗಿ ಆಸ್ಪತ್ರೆಯ ವೈದ್ಯೆ ಲತಾ ಎಂಬುವವರು ಈ ಅಮಾನವೀಯ ಕೃತ್ಯ ಎಸಗಿದ್ದಾರೆ" ಎಂದು ಕಣ್ಣೀರಿಟ್ಟಿದ್ದಾರೆ.
ಈ ಸಂಬಂಧ ನವ್ಯಾ ಅವರ ದೂರಿನ ಅನ್ವಯ, ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ನವ್ಯಾ ಅವರ ಪತಿ ಅಭಿಷೇಕ್, ಮಾವ ಗೋವಿಂದರಾಜ್, ಅತ್ತೆ ಲತಾ, ಖಾಸಗಿ ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಜ್ಞಾನಶೇಖರ್ ಮತ್ತು ಖಾಸಗಿ ಆಸ್ಪತ್ರೆಯ ವೈದ್ಯೆ ಲತಾ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನವ್ಯಾ ಅವರ ತಂದೆ-ತಾಯಿ ತಮ್ಮ ಮಗಳಿಗೆ ನ್ಯಾಯ ಸಿಗಬೇಕು ಮತ್ತು ಅಳಿಯನ ವಿರುದ್ಧ ಕಾನೂನು ಕ್ರಮ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದು, ಮುಂದಿನ ದಿನಗಳಲ್ಲಿ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.