
ಹುಣಸೂರಿನಲ್ಲಿ ಸಿನಿಮಾ ಶೈಲಿಯಲ್ಲಿ ಗನ್ ತೋರಿಸಿ ಚಿನ್ನದಂಗಡಿ ದರೋಡೆ
ಕೇವಲ ಕೆಲವೇ ನಿಮಿಷಗಳಲ್ಲಿ ಸುಮಾರು 4 ರಿಂದ 5 ಕೋಟಿ ರೂಪಾಯಿ ಮೌಲ್ಯದ ಚಿನ್ನ ಮತ್ತು ವಜ್ರಾಭರಣಗಳನ್ನು ಚೀಲಕ್ಕೆ ತುಂಬಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.
ಜಿಲ್ಲೆಯ ಹುಣಸೂರು ಪಟ್ಟಣದಲ್ಲಿ ಭಾನುವಾರ (ಡಿ. 28) ಸಿನಿಮಾ ಶೈಲಿಯ ದರೋಡೆ ಪ್ರಕರಣವೊಂದು ನಡೆದಿದ್ದು, ಮುಸುಕುಧಾರಿ ದರೋಡೆಕೋರರು ಗನ್ ತೋರಿಸಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಾರೆ. ಹುಣಸೂರು ಬಸ್ ನಿಲ್ದಾಣದ ಹಿಂಭಾಗದಲ್ಲಿರುವ 'ಸ್ಕೈ ಗೋಲ್ಡ್ಸ್ ಆಂಡ್ ಡೈಮಂಡ್ಸ್' ಮಳಿಗೆಯಲ್ಲಿ ಈ ಘಟನೆ ಸಂಭವಿಸಿದೆ.
ಬೈಕ್‌ಗಳಲ್ಲಿ ಆಗಮಿಸಿದ ಐದಕ್ಕೂ ಹೆಚ್ಚು ಮುಸುಕುಧಾರಿ ದರೋಡೆಕೋರರು, ಅಂಗಡಿಗೆ ನುಗ್ಗಿ ಸಿಬ್ಬಂದಿಯ ಮೇಲೆ ಗನ್ ತೋರಿಸಿ ಬೆದರಿಕೆ ಹಾಕಿದ್ದಾರೆ. ಕೇವಲ ಕೆಲವೇ ನಿಮಿಷಗಳಲ್ಲಿ ಸುಮಾರು 4 ರಿಂದ 5 ಕೋಟಿ ರೂಪಾಯಿ ಮೌಲ್ಯದ ಚಿನ್ನ ಮತ್ತು ವಜ್ರಾಭರಣಗಳನ್ನು ಚೀಲಕ್ಕೆ ತುಂಬಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.
ಬೆಚ್ಚಿಬಿದ್ದ ಸ್ಥಳೀಯರು: ಪೊಲೀಸರಿಂದ ತೀವ್ರ ತನಿಖೆ
ಜನನಿಬಿಡ ಪ್ರದೇಶದಲ್ಲೇ ಹಾಡಹಗಲೇ ಇಷ್ಟು ದೊಡ್ಡ ಮಟ್ಟದ ದರೋಡೆ ನಡೆದಿರುವುದು ಸ್ಥಳೀಯ ನಿವಾಸಿಗಳು ಮತ್ತು ವರ್ತಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ದರೋಡೆಕೋರರು ಪಲಾಯನ ಮಾಡುವ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ಸಾಧ್ಯತೆಯಿದ್ದು, ಪೊಲೀಸರು ಅವುಗಳ ತಪಾಸಣೆ ನಡೆಸುತ್ತಿದ್ದಾರೆ. ಜಿಲ್ಲಾದ್ಯಂತ ನಾಕಾಬಂಧಿ ವಿಧಿಸಲಾಗಿದ್ದು, ಆರೋಪಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿದುಬಂದಿದೆ

