
ತುಂಗಭದ್ರಾ ಜಲಾಶಯಕ್ಕೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸರ್ಕಾರದ ನಿರ್ಲಕ್ಷ್ಯದಿಂದ ಟಿಬಿ ಡ್ಯಾಂನ ಅಪಾರ ನೀರು ವ್ಯರ್ಥ: ಆರ್. ಅಶೋಕ್
ತುಂಗಭದ್ರಾ ಜಲಾಶಯದಲ್ಲಿ 105 ಟಿಎಂಸಿವರೆಗೆ ನೀರು ಸಂಗ್ರಹಿಸಬಹುದು. ಆದರೆ 80 ಟಿಎಂಸಿಗಿಂತ ಹೆಚ್ಚು ನೀರು ಸಂಗ್ರಹಿಸಿದರೆ ಗೇಟ್‌ಗಳು ಹಾಳಾಗುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ತುಂಗಭದ್ರಾ ಜಲಾಶಯದ ಗೇಟ್‌ಗಳನ್ನು ಮೊದಲೇ ದುರಸ್ತಿ ಮಾಡಿಸಿದ್ದರೆ ಬಹಳಷ್ಟು ನೀರು ಉಳಿದು ಬೆಳೆ ನಷ್ಟವಾಗುವುದು ತಪ್ಪುತ್ತಿತ್ತು ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.
ಸೋಮವಾರ ತುಂಗಭದ್ರಾ ಜಲಾಶಯ ವೀಕ್ಷಣೆ ಮಾಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತುಂಗಭದ್ರಾ ಜಲಾಶಯದಲ್ಲಿ 105 ಟಿಎಂಸಿವರೆಗೆ ನೀರು ಸಂಗ್ರಹಿಸಬಹುದು. ಆದರೆ 80 ಟಿಎಂಸಿಗಿಂತ ಹೆಚ್ಚು ನೀರು ಸಂಗ್ರಹಿಸಿದರೆ ಗೇಟ್‌ಗಳು ಹಾಳಾಗುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದ್ದರಿಂದ ಹೆಚ್ಚು ನೀರು ಸಂಗ್ರಹಿಸುತ್ತಿಲ್ಲ. ಬಹಳ ಹಳೆಯದಾಗಿರುವುದರಿಂದ ಎಲ್ಲ ಗೇಟ್‌ಗಳನ್ನು ದುರಸ್ತಿ ಮಾಡಲು 52 ಕೋಟಿ ರೂ. ನೀಡಲಾಗಿದೆ. ಹೆಚ್ಚು ನೀರು ವ್ಯರ್ಥವಾಗಿ ಹರಿದುಹೋಗಿದೆ ಎಂದು ತಿಳಿಸಿದರು.
ಈ ಮೊದಲೇ ಗೇಟ್‌ಗಳನ್ನು ದುರಸ್ತಿ ಮಾಡಿದ್ದರೆ ಸುಮಾರು 180 ಟಿಎಂಸಿ ನೀರನ್ನು ಉಳಿಸಬಹುದಿತ್ತು. ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲಿಗೆ ಭೇಟಿ ನೀಡಿ ಕಾಮಗಾರಿಗೆ ಚಾಲನೆ ನೀಡಿದ್ದರೆ ಉಳಿಸಿದ ನೀರನ್ನು ರೈತರಿಗೆ ನೀಡಬಹುದಿತ್ತು. ಕಾಂಗ್ರೆಸ್ ನಾಯಕರು ದೆಹಲಿಗೆ ಹೋಗುವ ಉತ್ಸಾಹವನ್ನು ಈ ಕಡೆಗೆ ತೋರಿಸಬೇಕಿತ್ತು ಎಂದು ವ್ಯಂಗ್ಯವಾಡಿದರು.
ನೀರು ವ್ಯರ್ಥವಾಗಿ ಹರಿದುಹೋಗಿರುವುದರಿಂದ ಈ ಭಾಗದಲ್ಲಿ ಸುಮಾರು 7 ಲಕ್ಷ ಹೆಕ್ಟೇರ್ ಜಮೀನಿಗೆ ನೀರು ನಷ್ಟವಾಗಿ ಬೆಳೆಗಳಿಗೆ ಹಾನಿಯಾಗಿದೆ. ನೀರು ಸಿಕ್ಕಿದ್ದರೆ ರೈತರಿಗೆ ಬಹಳ ಅನುಕೂಲವಾಗುತ್ತಿತ್ತು. ಆದರೆ ಕಾಂಗ್ರೆಸ್ ಸಚಿವರು ನವೆಂಬರ್ ಕ್ರಾಂತಿಗೆ ಮಾತ್ರ ಸಿದ್ಧವಾಗುತ್ತಿದ್ದಾರೆ. ಪರಿಣಾಮ, ಬೇಗ ಹಣ ಬಿಡುಗಡೆಯಾಗದೆ ದುರಸ್ತಿ ಕಾರ್ಯ ನಡೆದಿಲ್ಲ ಎಂದರು.
ಧರ್ಮಸ್ಥಳ ಕ್ಷೇತ್ರವನ್ನು ಮುಜರಾಯಿಗೆ ಸೇರಿಸಲು ಯತ್ನ
ಧರ್ಮಸ್ಥಳದಲ್ಲಿ ಇರುವುದು ಬುರುಡೆ ಗ್ಯಾಂಗ್ ಎಂದು ವಿಧಾನಸಭೆಯಲ್ಲಿ ಹೇಳಿದಾಗ ಕಾಂಗ್ರೆಸ್ ನಾಯಕರು ಅದನ್ನು ವಿರೋಧಿಸಿದ್ದರು. ಲವ್ ಜಿಹಾದ್‌ನಂತೆಯೇ ಮತಾಂತರದ ಜಿಹಾದಿ ಕಾರ್ಯ ನಡೆಯುತ್ತಿದೆ. ಅನನ್ಯ ಭಟ್ ಇರುವುದೇ ಸುಳ್ಳು ಎಂದು ತಿಳಿದುಬಂದಿದೆ. ಆ ವ್ಯಕ್ತಿಗೆ ಮಾಸ್ಕ್ ಹಾಕಿಸಿದ್ದೇ ಸಿಎಂ ಸಿದ್ದರಾಮಯ್ಯನವರ ಸರ್ಕಾರ. ಪ್ರಗತಿಪರರು ಸಿಎಂ ಕಚೇರಿಗೆ ಹೋಗಿ ನೂರಾರು ಕೊಲೆಯಾಗಿದೆ ಎಂದು ಹೇಳಿದ್ದರು. ಕೆಲವರ ಮಾತು ಕೇಳಿ ಸಿಎಂ ಸುಮಾರು 2 ಕೋಟಿ ರೂ. ಖರ್ಚು ಮಾಡಿದ್ದಾರೆ. ಧರ್ಮಸ್ಥಳ ಕ್ಷೇತ್ರವನ್ನು ಮುಜರಾಯಿ ಇಲಾಖೆಗೆ ಸೇರಿಸಲು ಇಷ್ಟೆಲ್ಲ ಮಾಡಲಾಗಿದೆ ಎಂದು ಆರೋಪಿಸಿದರು.
ಮಸೀದಿ, ಚರ್ಚ್ ವಿಷಯಕ್ಕೆ ಈ ಹೋರಾಟಗಾರರು ಹೋಗುವುದಿಲ್ಲ. ಕೇವಲ ಹಿಂದೂ ದೇವಸ್ಥಾನಗಳ ಬಗ್ಗೆ ಮಾತ್ರ ಟೀಕೆ ಮಾಡುತ್ತಾರೆ. ಬುರುಡೆ ತಂದ ವ್ಯಕ್ತಿಯ ಪೂರ್ವಾಪರವನ್ನು ಮೊದಲೇ ವಿಚಾರಿಸಬೇಕಿತ್ತು. ಮಾಸ್ಕ್ ಹಾಕಿ ಆತನ ಗುರುತನ್ನು ಮರೆಮಾಚಲಾಗಿದೆ. ಮಾಸ್ಕ್ ಹಾಕದೇ ಇದ್ದಿದ್ದರೆ ಆತನ ಊರಿನವರು ಅವನೆಂತಹ ಕಳ್ಳ ಎಂದು ವಿವರಿಸುತ್ತಿದ್ದರು ಎಂದರು.
ನವಂಬರ್ ಕ್ರಾಂತಿಯಾಗಿ ಸರ್ಕಾರ ತೊಲಗಲಿ
ಭಾರತದ ಭಾಗವನ್ನು ಪಾಕಿಸ್ತಾನ ಮಾಡಿದ್ದು ಇದೇ ಕಾಂಗ್ರೆಸ್‌ನವರು. ಆರ್‌ಎಸ್‌ಎಸ್ ಇರುವುದರಿಂದಲೇ ಭಾರತ ಪಾಕಿಸ್ತಾನವಾಗದೆಯೇ ಹಾಗೆಯೇ ಉಳಿದಿದೆ. ಆರ್‌ಎಸ್‌ಎಸ್ ಇಲ್ಲದಿದ್ದರೆ ಸಚಿವ ಪ್ರಿಯಾಂಕ ಖರ್ಗೆ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಇರುವ ಜಾಗ ಪಾಕಿಸ್ತಾನವಾಗುತ್ತಿತ್ತು. ಪ್ರಧಾನಿ ನರೇಂದ್ರ ಮೋದಿ ಕೂಡ ಆರ್‌ಎಸ್‌ಎಸ್ ಹಿನ್ನೆಲೆಯಿಂದಲೇ ಬಂದಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಆರ್‌ಎಸ್‌ಎಸ್ ಗೀತೆಯನ್ನು ಚೆನ್ನಾಗಿ ಹಾಡುತ್ತಾರೆ. ನವಂಬರ್‌ನಲ್ಲಿ ಕ್ರಾಂತಿಯಾಗಿ ಕಾಂಗ್ರೆಸ್ ಸರ್ಕಾರ ತೊಲಗಲಿ ಎಂದು ತಿಳಿಸಿದರು.