
ಅಂಗನವಾಡಿ ಕೇಂದ್ರದ ಮೇಲೆ ಮರ ಬಿದ್ದು ಕಟ್ಟಡಕ್ಕೆ ಹಾನಿ
ಕೊಡಗಿನಲ್ಲಿ ಮಳೆ : ಅಂಗನವಾಡಿ ಮೇಲೆ ಬಿದ್ದ ಬೃಹತ್ ಮರ
ಮರ ಬಿದ್ದ ವೇಳೆ ಮಕ್ಕಳು ಲಸಿಕೆ ಹಾಕಿಸಿಕೊಳ್ಳಲು ಪಕ್ಕದ ಪಂಚಾಯತ್ ಕಚೇರಿ ಸಮೀಪ ತೆರಳಿದ್ದರು. ಹೀಗಾಗಿ ಅದೃಷ್ಟವಶಾತ್ ಮಕ್ಕಳು ಪಾರಾಗಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಮಳೆಯಿಂದಾಗಿ ಅಂಗನವಾಡಿ ಕಟ್ಟಡದ ಮೇಲೆ ಬೃಹತ್ ಮರ ಬಿದ್ದಿದೆ. ಘಟನೆಯಲ್ಲಿ ಅಂಗನವಾಡಿ ಸಹಾಯಕಿ ಬೇಬಿ (45) ಎಂಬುವವರಿಗೆ ಗಂಭೀರ ಗಾಯಗಳಾಗಿವೆ.
ಸೋಮವಾರಪೇಟೆ ತಾಲೂಕಿನ ಗರ್ವಾಲಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದ್ದು, ಬೇಬಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮರ ಬಿದ್ದ ವೇಳೆ ಮಕ್ಕಳು ಲಸಿಕೆ ಹಾಕಿಸಿಕೊಳ್ಳಲು ಪಕ್ಕದ ಪಂಚಾಯತ್ ಕಚೇರಿ ಬಳಿ ಮಕ್ಕಳು ತೆರಳಿದ್ದರು. ಹೀಗಾಗಿ ಅದೃಷ್ಟವಶಾತ್ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.
ಮರ ಬಿದ್ದ ರಭಸಕ್ಕೆ ಅಂಗನವಾಡಿ ಕಟ್ಟಡದ ಮೇಲ್ಛಾವಣಿ ಸಂಪೂರ್ಣ ಹಾನಿಯಾಗಿದೆ. ಘಟನೆ ನಡೆದ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಟ್ಟಡದ ಹಾನಿ ಮತ್ತು ಸಹಾಯಕಿ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರವಾಹ ಮತ್ತು ಭೂಕುಸಿತದ ಆತಂಕ ಮುಂದುವರಿದಿದೆ. ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳಲ್ಲಿನ ನೂರಾರು ಎಕರೆ ಕೃಷಿ ಭೂಮಿ ಜಲಾವೃತವಾಗಿದೆ. ಕಳೆದ ಜೂನ್ ತಿಂಗಳಿನಲ್ಲಿ ಭಾರೀ ಮಳೆಯಿಂದಾಗಿ ಕಾನ್ ಬೈಲು, ಬೈಚನಹಳ್ಳಿ ಗ್ರಾಮದಲ್ಲಿ ಮನೆಯ ಹಿಂಬದಿ ಗೋಡೆ ಕುಸಿದಿತ್ತು. ಸಂಪಾಜೆ ಹೋಬಳಿ ಕಾಟಕೇರಿ ಗ್ರಾಮದ ಮನೆಯ ಗೋಡೆಯೂ ಮಳೆಗೆ ಉರುಳಿದೆ.