Huge rally in Bengaluru tomorrow demanding justice for Saujanyas death
x

ನ್ಯಾಯ ಸಮಾವೇಶ

ಧರ್ಮಸ್ಥಳ: ನ್ಯಾಯಕ್ಕಾಗಿ ಬೆಂಗಳೂರಿನಲ್ಲಿ ನಾಳೆ ಬೃಹತ್ ಸಮಾವೇಶ

ಸಮಾವೇಶದಲ್ಲಿ ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ಅಸಹಜ ಸಾವುಗಳು, ಭೂ ಅಕ್ರಮ, ಭೂ ಕಬಳಿಕೆ, ಮೈಕ್ರೋ ಫೈನಾನ್ಸ್‌ ದೌರ್ಜನ್ಯ, ಪದ್ಮಲತಾ, ವೇದವಲ್ಲಿ, ನಾರಾಯಣ ಮಾವುತ, ಯಮುನಾ, ಸೌಜನ್ಯ ಅವರ ಸಾವಿಗೆ ನ್ಯಾಯಕ್ಕೆ ಆಗ್ರಹಿಸಲಾಗುತ್ತದೆ.


Click the Play button to hear this message in audio format

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ದೌರ್ಜನ್ಯಗಳು, ಅಸಹಜ ಸಾವುಗಳು ಮತ್ತು ಭೂ ಅಕ್ರಮಗಳಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ, 'ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ'ಯು ನಾಳೆ (ಸೆಪ್ಟೆಂಬರ್ 26) ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ 'ನ್ಯಾಯ ಸಮಾವೇಶ' ಹಮ್ಮಿಕೊಂಡಿದೆ. ಬೆಳಗ್ಗೆ 10.30ಕ್ಕೆ ಆರಂಭವಾಗಲಿರುವ ಈ ಸಮಾವೇಶದಲ್ಲಿ ರಾಜ್ಯದ ಪ್ರಮುಖ ಗಣ್ಯರು, ಹೋರಾಟಗಾರರು ಮತ್ತು ಸಂತ್ರಸ್ತ ಕುಟುಂಬಗಳು ಭಾಗವಹಿಸಿ, ಸರ್ಕಾರದ ಮೇಲೆ ಒತ್ತಡ ಹೇರಲಿವೆ.

ಈ ಸಮಾವೇಶದ ಮೂಲಕ ವೇದಿಕೆಯು ಹಲವು ಗಂಭೀರ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಿದೆ. ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿರುವ ನೂರಾರು ಅಸಹಜ ಸಾವುಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಇದಲ್ಲದೆ, ಆ ಭಾಗದಲ್ಲಿ ನಡೆದಿರುವ ಭೂ ಕಬಳಿಕೆ, ಭೂ ಅಕ್ರಮ ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಆಗುತ್ತಿರುವ ದೌರ್ಜನ್ಯಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಆಗ್ರಹಿಸಲಾಗುತ್ತಿದೆ. ನಿರ್ದಿಷ್ಟವಾಗಿ, ಹತ್ಯೆಗೀಡಾದ ಪದ್ಮಲತಾ, ವೇದವಲ್ಲಿ, ನಾರಾಯಣ ಮಾವುತ, ಯಮುನಾ ಹಾಗೂ ಸೌಜನ್ಯ ಅವರ ಸಾವಿಗೆ ನ್ಯಾಯ ಒದಗಿಸಬೇಕೆಂಬುದು ಪ್ರಮುಖ ಬೇಡಿಕೆಯಾಗಿದೆ. ಜೊತೆಗೆ, ಧರ್ಮಸ್ಥಳದ ಅಶೋಕನಗರ ಮತ್ತು ಮುಂಡ್ರುಪಾಡಿಯ ದಲಿತ ಕುಟುಂಬಗಳಿಗೆ ಹಕ್ಕುಪತ್ರ ನೀಡಿ, ತಲಾ ಒಂದು ಎಕರೆ ಜಮೀನನ್ನು ಹಂಚಿಕೆ ಮಾಡಬೇಕೆಂಬ ಒತ್ತಾಯವೂ ಇದೆ. ಪ್ರಸ್ತುತ ನಡೆಯುತ್ತಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖೆಯ ವಿರುದ್ಧ ಷಡ್ಯಂತ್ರಗಳನ್ನು ನಿಲ್ಲಿಸಿ, ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕೆಂದು ಸಮಾವೇಶದಲ್ಲಿ ಆಗ್ರಹಿಸಲಾಗುವುದು.

ಸಿಪಿಎಂ ಬೆಂಬಲ

ಈ ಹೋರಾಟಕ್ಕೆ ಸಿಪಿಐ(ಎಂ) ಪಕ್ಷವು ತನ್ನ ಸಂಪೂರ್ಣ ಬೆಂಬಲವನ್ನು ಘೋಷಿಸಿದೆ. ಪಕ್ಷದ ರಾಜ್ಯ ಕಾರ್ಯದರ್ಶಿಡಾ. ಕೆ. ಪ್ರಕಾಶ್ ಮಾತನಾಡಿ, "ಧರ್ಮಸ್ಥಳದ ಊಳಿಗಮಾನ್ಯ ಮತ್ತು ಅಪ್ರಜಾಸತ್ತಾತ್ಮಕ ಧೋರಣೆಯ ವಿರುದ್ಧ ಸಿಪಿಐ(ಎಂ) ಪಕ್ಷವು 80ರ ದಶಕದಿಂದಲೂ ಹೋರಾಡುತ್ತಾ ಬಂದಿದೆ. ಈ ಹೋರಾಟದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಹಲ್ಲೆಗೊಳಗಾಗಿದ್ದಾರೆ ಮತ್ತು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಈ ದೀರ್ಘಕಾಲೀನ ಹೋರಾಟಕ್ಕೆ ನಾವು ಬದ್ಧರಾಗಿದ್ದು, ನ್ಯಾಯ ಸಮಾವೇಶದ ಜೊತೆ ದೃಢವಾಗಿ ನಿಲ್ಲುತ್ತೇವೆ," ಎಂದು ತಿಳಿಸಿದ್ದಾರೆ.

ಇದೇ ವೇಳೆ, ಬಿಗ್ ಬಾಸ್ ಖ್ಯಾತಿಯ ರಜತ್ ಕುಮಾರ್ ಅವರು ಕೂಡ ಸಮಾವೇಶದಲ್ಲಿ ಪಾಲ್ಗೊಳ್ಳುವುದಾಗಿ ಖಚಿತಪಡಿಸಿದ್ದಾರೆ. "ಸೌಜನ್ಯ ಹತ್ಯೆ ಸೇರಿದಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಲ್ಲಾ ಅಮಾಯಕರ ಸಾವು ಮತ್ತು ನಾಪತ್ತೆ ಪ್ರಕರಣಗಳಿಗೆ ನ್ಯಾಯ ಕೇಳುವುದು ನನ್ನ ಜವಾಬ್ದಾರಿಯಾಗಿದೆ. ನಾನೂ ಈ ಹೋರಾಟದಲ್ಲಿ ಖಂಡಿತ ಭಾಗಿಯಾಗುತ್ತೇನೆ," ಎಂದು ಅವರು ಅಭಯ ನೀಡಿದ್ದಾರೆ.

ಈ ಮಹತ್ವದ ಸಮಾವೇಶದಲ್ಲಿ ಹತ್ಯೆಯಾದ ಪದ್ಮಲತಾ ಅವರ ಸಹೋದರಿ ಇಂದ್ರಾವತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ, ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್, ಕಾರ್ಮಿಕ ಮುಖಂಡ ಮೀನಾಕ್ಷಿ ಸುಂದರಂ, ರಂಗಕರ್ಮಿ ಹಾಗೂ ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಮತ್ತು ಹೋರಾಟಗಾರ್ತಿ ಇಂದಿರಾ ಕೃಷ್ಣಪ್ಪ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದು, ಧರ್ಮಸ್ಥಳ ಪ್ರಕರಣಗಳ ತನಿಖೆಗೆ ಹೊಸ ಚೈತನ್ಯ ನೀಡುವ ನಿರೀಕ್ಷೆ ಇದೆ.

Read More
Next Story