ಹುಬ್ಬಳ್ಳಿ ವಿದ್ಯಾರ್ಥಿನಿ ಹತ್ಯೆ ಪ್ರಕರಣ: ಆರೋಪಿ ಫಯಾಜ್‌ ತಂದೆ-ತಾಯಿ ಹೇಳಿದ್ದೇನು?
x

ಹುಬ್ಬಳ್ಳಿ ವಿದ್ಯಾರ್ಥಿನಿ ಹತ್ಯೆ ಪ್ರಕರಣ: ಆರೋಪಿ ಫಯಾಜ್‌ ತಂದೆ-ತಾಯಿ ಹೇಳಿದ್ದೇನು?


ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ಗುರುವಾರ ಮಧ್ಯಾಹ್ನ ನಡೆದ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ ನೇಹಾ ಕೊಲೆ ರಾಜ್ಯವನ್ನು ಬೆಚ್ಚಿ ಬೀಳಿಸಿದೆ. ಈ ಕೊಲೆ ವೈಯಕ್ತಿಕ ಕಾರಣಕ್ಕೆ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರೇ, ಗೃಹ ಸಚಿವ ಜಿ ಪರಮೇಶ್ವರ ಅವರು “ಫಯಾಜ್​ ಮತ್ತು ನೇಹಾ ಪ್ರೀತಿಸುತ್ತಿದ್ದರು. ನಂತರ ನೇಹಾ ಫಯಾಜ್‌ನಿಂದ ದೂರವಾಗಲು ಯತ್ನಿಸಿದ್ದಾಳೆ. ಹೀಗಾಗಿ ಕೊಲೆ ನಡೆದಿದೆ” ಎಂದು ಹೇಳಿದ್ದರು. ಇದೀಗ ಆರೋಪಿಯ ತಂದೆ-ತಾಯಿ ಮಾಧ್ಯಮದ ಎದುರು ಪ್ರಕರಣ ಕುರಿತು ಮಾತನಾಡಿದ್ದಾರೆ.

ಕೊಲೆ ಆರೋಪಿ ಫಯಾಜ್​ ತಾಯಿ ಮುಮ್ತಾಜ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ʻʻನನ್ನ ಮಗ ಮಾಡಿರುವ ತಪ್ಪಿಗೆ ರಾಜ್ಯದ ಜನರ ಮುಂದೆ ಕ್ಷಮೆಯಾಚಿಸುತ್ತೇನೆ. ನನ್ನ ಮಗ ಫಯಾಜ್‌ಗೆ ನೇಹಾ ಪ್ರಪೋಸ್​ ಮಾಡಿದ್ದಳು. ನನ್ನ ಬಳಿ ಅವನು ಹೇಳಿದಾಗ ಈ ಪ್ರೀತಿ-ಪ್ರೇಮ ಬೇಡ ಎಂದು ಹೇಳಿದ್ದೆ. ನನ್ನ ಮಗನಿಗೆ ತಕ್ಕ ಶಿಕ್ಷೆ ಆಗಬೇಕುʼʼ ಎಂದಿದ್ದಾರೆ. ​​

ʻʻಮಗ ಕೆಎಎಸ್​ ಅಧಿಕಾರಿ ಆಗಬೇಕೆಂದು ಕನಸು ಕಂಡಿದ್ದೆ. ಆದರೆ, ಈ ರೀತಿ ಆಗಿದ್ದಕ್ಕೆ ಬಹಳ ಸಂಕಟ ಆಗುತ್ತೆ. ನೇಹಾ ಸಹ ತುಂಬಾ ಒಳ್ಳೆಯ ಹುಡುಗಿ. ಫಯಾಜ್​-ನೇಹಾ ಮದುವೆ ಆಗಬೇಕು ಅಂತ ಇದ್ದರು. ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕುʼʼ ಎಂದು ಹೇಳಿದ್ದಾರೆ.

ಇನ್ನು ಫಯಾಜ್​ ತಂದೆ ಬಾಬಾ ಸಾಹೇಬ್‌ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ʻʻಮಗನಿಗೆ ಯಾವುದೇ ದೊಡ್ಡ ಶಿಕ್ಷೆ ನೀಡಿದರು ಸ್ವಾಗತ. ಹೆಣ್ಣುಮಕ್ಕಳು ಎಂದರೆ ದೇವರೆಂದು ಭಾವಿಸುವ ದೇಶ ನಮ್ಮದು. ಹೆಣ್ಣು ಮಕ್ಕಳು ಎಂದರೆ ಪೂಜಿಸುತ್ತೇವೆ. ಈ ಘಟನೆಯಿಂದ ನಮ್ಮ ಊರಿಗೆ (ಮುನವಳ್ಳಿ) ಕಪ್ಪು ಚುಕ್ಕೆ ಬಂದಿದೆ. ರಾಜ್ಯದ ಜನತೆ ಹಾಗೂ ಮುನವಳ್ಳಿ ಯುವಕರು ಶಾಂತಿ ಕಾಪಾಡುಬೇಕು ʼʼ ಎಂದು ಮನವಿ ಮಾಡಿದ್ದಾರೆ.

ʻʻಎರಡು ವರ್ಷದಿಂದ ನಮ್ಮ ಮಗ ನಮ್ಮ ಬಳಿ ಇಲ್ಲ. ಓದಲೆಂದು ಹುಬ್ಬಳ್ಳಿ ನಗರ ಪ್ರದೇಶಕ್ಕೆ ಹೋಗಿದ್ದನು. ನೇಹಾ ನನ್ನ ಮಗಳಿದ್ದ ಹಾಗೆ. ಅವರ ಮಗಳಿಗೆ ಆದ ಕೃತ್ಯ ನಮ್ಮ ಮಗಳ ಮೇಲೆಯೂ ಆಗಬಹುದು. ಘಟನೆ ಖಂಡಿಸಿ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸೋದು ತಪ್ಪಲ್ಲ. ಯಾವ ಹೆಣ್ಣು ಮಕ್ಕಳ ಮೇಲೆ ಯಾರೂ ಕಣ್ಣು ಹಾಕಬಾರದು ʼʼ ಎಂದು ಕೃತ್ಯವನ್ನು ಖಂಡಿಸಿದ್ದಾರೆ.

ʻʻಕರ್ನಾಟಕ ಜನತೆಗೆ ನಾನು ಕ್ಷಮೆ ಕೇಳುತ್ತೇನೆ. ಕಾನೂನು ಯಾವ ಶಿಕ್ಷೆ ಕೊಟ್ಟರೂ ಅದನ್ನು ನಾನು ಸ್ವಾಗತಿಸುತ್ತೇನೆ. ದಯವಿಟ್ಟು ನೇಹಾ ಕುಟುಂಬದವರು, ರಾಜ್ಯದ ಜನ ಹಾಗೂ ಮುನವಳ್ಳಿ ಜನತೆ ನನ್ನನ್ನು ಕ್ಷಮಿಸಬೇಕುʼʼ ಎಂದು ಕಣ್ಣೀರು ಹಾಕುತ್ತಲೇ ಬಾಬಾ ಸಾಹೇಬ್‌ ಮನವಿ ಮಾಡಿದರು.

Read More
Next Story