ಹುಬ್ಬಳ್ಳಿ | ಹತ್ಯೆಯಾದ ಅಂಜಲಿ ಸಹೋದರಿ ಆತ್ಮಹತ್ಯೆಗೆ ಯತ್ನ
x

ಹುಬ್ಬಳ್ಳಿ | ಹತ್ಯೆಯಾದ ಅಂಜಲಿ ಸಹೋದರಿ ಆತ್ಮಹತ್ಯೆಗೆ ಯತ್ನ


ಪ್ರೀತಿ ನಿರಾಕರಿಸಿದಳು ಎನ್ನುವ ಕಾರಣಕ್ಕೆ ಯುವಕನಿಂದ ಕೊಲೆಯಾದ ಯುವತಿ ಅಂಜಲಿ ಅಂಬಿಗೇರ ಅವರ ಸಹೋದರಿ ಯಶೋಧ ತನ್ನ ಅಕ್ಕನ ಸಾವಿನಿಂದ ಮನನೊಂದು ಪಿನಾಯಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. ಕೂಡಲೆ ಅವರನ್ನು ಹುಬ್ಬಳ್ಳಿಯ ಕಿಮ್ಸ್​ (KIMS) ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಯಶೋಧ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಶನಿವಾರ (ಮೇ 18) ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ ಅಂಬಿಗರ ಚೌಡಯ್ಯ ಪೀಠದ ಶ್ರೀ ಶಾಂತಭೀಷ್ಮ ಸ್ವಾಮೀಜಿ, ದಿಂಗಾಲೇಶ್ವರ ಶ್ರೀ, ಮನಸೂರಿನ ಬಸವರಾಜ ದೇವರು ಶ್ರೀ ಸೇರಿದಂತೆ ವಿವಿಧ ಮಠಾಧೀಶರು ಮತ್ತು ಸಾರ್ವಜನಿಕರು ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯಲ್ಲಿ ಯಶೋಧ ಕೂಡ ಭಾಗಿಯಾಗಿದ್ದಳು. ಪ್ರತಿಭಟನೆ ವೇಳೆ ಯಶೋಧ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಕೂಡಲೆ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿತ್ತು, ಆದರೆ ಮನೆಗೆ ಹೋದ ಬಳಿಕ ಯಶೋಧ ರಾತ್ರಿ ಪಿನಾಯಲ್​ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ.

ಇಂಥ ಮಗ ನನಗೆ ಬೇಡ

ಹತ್ಯೆ ಪ್ರಕರಣದ ಆರೋಪಿ ವಿಶ್ವನ ತಾಯಿ ಸವಿತಾ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ್ದು, ʻʻಇಂತಹ ಪಾಪಿ ಮಗ ಯಾರಿಗೂ ಬೇಡ. ನನಗೆ ಇವನೊಬ್ಬನೇ ಮಗ, ಏನು ಕೆಲಸ ಮಾಡುತ್ತಿದ್ದ ಗೊತ್ತಿಲ್ಲ. ನ್ಯಾಯಾಲಯ ಅವನಿಗೆ ಏನು ಶಿಕ್ಷೆ ಕೊಡುತ್ತದೆ ಕೊಡಲಿ. ನನ್ನ ಮಗ ವಿಶ್ವ ಮಾಡಿದ ತಪ್ಪಿಗೆ ನಾವೆಲ್ಲ ಶಿಕ್ಷೆ ಅನುಭವಿಸುತ್ತಿದ್ದೇವೆ. ಮೊದಲು ವಿಶ್ವ ಚೆನ್ನಾಗಿದ್ದ, ನಾಲ್ಕು ವರ್ಷದ ನಂತರ ಹೀಗೆ ಆಗಿದ್ದಾನೆ. ಅಂತಹ ಮಗ ನನಗೆ ಬೇಡ, ಅವನನ್ನು ನೋಡಲು ಹೋಗುವುದಿಲ್ಲʼʼ ಎಂದು ಹೇಳಿದ್ದಾರೆ.

Read More
Next Story