ಹುಬ್ಬಳ್ಳಿ ಫ್ಲೈಓವರ್ ಕಾಮಗಾರಿ ದುರಂತ | ಎಎಸ್‌ಐ ಸಾವು; 11 ಮಂದಿ ಬಂಧನ
ಹುಬ್ಬಳ್ಳಿಯಲ್ಲಿ ಫ್ಲೈಓವರ್ ಕಾಮಗಾರಿಯ ಕಬ್ಬಣದ ರಾಡು ಬಿದ್ದು ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಾವು ಕಂಡ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾರ ಪೊಲೀಸರು, ಕಾಮಗಾರಿಯ ನಡೆಸುತ್ತಿದ್ದ ಮಹಾರಾಷ್ಟ್ರ ಮೂಲದ ಝಂಡು ಕನ್ಸ್ಟ್ರಕ್ಷನ್ ಕಂಪನಿಯ 11 ಮಂದಿಯನ್ನು ಬಂಧಿಸಿದ್ದಾರೆ.
ಹುಬ್ಬಳ್ಳಿ ಉಪನಗರ ಠಾಣೆಯ ಎಎಸ್ಐ ನಾಭಿರಾಜ್ ದಯಣ್ಣವರ (59) ಅವರು ಕಳೆದ ವಾರ ಹುಬ್ಬಳ್ಳಿಯ ಹಳೆ ಕೋರ್ಟ್ ಬಳಿ ತೆರಳುತ್ತಿದ್ದಾಗ ಫ್ಲೈಓವರ್ ಕಾಮಗಾರಿಯ ಭಾರೀ ಗಾತ್ರದ ರಾಡು ತಲೆ ಮೇಲೆ ಬಿದ್ದು ತೀವ್ರ ಗಾಯಗೊಂಡಿದ್ದರು. ಇದೀಗ ಅವರು ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾರೆ.
ಆ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ತಗೆದುಕೊಂಡಿರುವ ಹುಬ್ಬಳ್ಳಿ-ಧಾರವಾಡ ಪೊಲೀಸರು, ಇದೀಗ ಮಹಾರಾಷ್ಟ್ರ ಮೂಲದ ಝಂಡು ಕನ್ಸ್ಟ್ರಕ್ಷನ್ ಕಂಪನಿಯ 11 ಮಂದಿ ನೌಕರರನ್ನು ಸೋಮವಾರ ಬಂಧಿಸಿದ್ದಾರೆ.
ಝಂಡು ಕನ್ಸ್ಟ್ರಕ್ಷನ್ ಕಂಪನಿಯ ಸೂಪರ್ ವೈಸರ್ ಹರ್ಷ ಹೊಸಗಾಣಿಗೇರ, ಲೈಸನಿಂಗ್ ಇಂಜಿನಿಯರ್ ಜಿತೇಂದ್ರ ಪಾಲ್, ಇಂಜನಿಯರ್ ಭೂಪೇಂದರ್, ನೌಕರರಾದ ಮಹಮ್ಮದ್ ಮಿಯಾ, ಅಸ್ಲಂ, ಮೊಹಮ್ಮದ್ ಹಾಜಿ, ಸಬೀಬ್, ರಿಜಾವುಲ್, ಶಮೀಮ್ ಅಲಿಯಾಸ್ ಪಿಂಟು ಶೇಕ್, ಮೊಹಮ್ಮದ್ ಆರೀಫ್ ಹಾಗೂ ಕಾರ್ಮಿಕ ಗುತ್ತಿಗೆದಾರ ಮೊಹಮ್ಮದ್ ರಬಿವುಲ್ ಹಕ್ ಬಂಧಿತರು.
ಹುಬ್ಬಳ್ಳಿಯ ಕಿಮ್ಸ್ನಲ್ಲಿ ಕಳೆದ ಆರು ದಿನಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ನಾಭಿರಾಜ್ ಭಾನುವಾರಕೊನೆಯುಸಿರೆಳೆದಿದ್ದಾರೆ. ಘಟನೆ ನಡೆದ ದಿನವೇ 19 ಜನರ ಮೇಲೆ ಉಪನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಹುಬ್ಬಳ್ಳಿಯ ಹೃದಯ ಭಾಗದ ಚೆನ್ನಮ್ಮ ವೃತ್ತದಲ್ಲಿ ನಡೆಯುತ್ತಿರುವ ಫ್ಲೈ ಓವರ್ ಕಾಮಗಾರಿ ಸ್ಥಳದಲ್ಲಿ ಕಳೆದ ಮಂಗಳವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಕೆಲಸಕ್ಕೆ ಹೋಗುವ ವೇಳೆ ಕಾಮಗಾರಿಯ ರಾಡ್ ನಾಭಿರಾಜ್ ದಯಣ್ಣವರ ತಲೆ ಮೇಲೆ ಬಿದ್ದಿತ್ತು. ಹೆಲ್ಮೆಟ್ ಹಾಕಿದ್ದರೂ ಹೆಲ್ಮೆಟ್ ಸೀಳಿ ನಾಭಿರಾಜ್ ತಲೆಗೆ ಗಂಭೀರ ಗಾಯವಾಗಿತ್ತು.
ಕೂಡಲೇ ನಾಭಿರಾಜ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ನಿನ್ನೆ ಬೆಳಗಿನ ಜಾವ 3.45 ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇದೇ ಸ್ಥಳದಲ್ಲಿ ಹಿಂದೆ ಎರಡು ಬಾರಿ ಅವಘಡ ಸಂಭವಿಸಿದಾಗಲೂ ಗುತ್ತಿಗೆದಾದರರು ಎಚ್ಚೆತ್ತುಕೊಂಡಿಲ್ಲ. ಅದರ ಪರಿಣಾಮ ಹತ್ತು ತಿಂಗಳಲ್ಲಿ ನಿವೃತ್ತಿಯಾಗಬೇಕಿದ್ದ ನಾಭಿರಾಜ್ ಪ್ರಾಣ ಕಳೆದುಕೊಂಡಿದ್ದಾರೆ. ಇತ್ತ ದೂರು ದಾಖಲಾಗುತ್ತಲೇ ಝಂಡು ಕನ್ಸ್ಟ್ರಕ್ಷನ್ ಕಂಪನಿ ಹುಬ್ಬಳ್ಳಿಯ ಎರಡು ಕಚೇರಿಗಳನ್ನೂ ಬಂದ್ ಮಾಡಿಕೊಂಡು ಹೋಗಿದೆ.