ಹುಬ್ಬಳ್ಳಿ ಅಂಜಲಿ ಹತ್ಯೆ ಪ್ರಕರಣ | ಕರ್ತವ್ಯ ಲೋಪದಡಿ ಡಿಸಿಪಿ ಅಮಾನತು
x

ಹುಬ್ಬಳ್ಳಿ ಅಂಜಲಿ ಹತ್ಯೆ ಪ್ರಕರಣ | ಕರ್ತವ್ಯ ಲೋಪದಡಿ ಡಿಸಿಪಿ ಅಮಾನತು


ನೇಹಾ ಹಿರೇಮಠ ಹಾಗೂ ಅಂಜಲಿ ಹತ್ಯೆ ಪ್ರಕರಣವು ಹುಬ್ಬಳ್ಳಿ-ಧಾರವಾಡ ಅವಳಿ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಲೋಪ ಎಸಗಿದ ಆರೋಪದಲ್ಲಿ ಹುಬ್ಬಳ್ಳಿ-ಧಾರವಾಡ ಡಿಸಿಪಿಯನ್ನು ಅಮಾನತು ಮಾಡಲಾಗಿದೆ.

ಅಂಜಲಿ ಕೊಲೆ ಹಿನ್ನೆಲೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದ ಆರೋಪದ ಮೇಲೆ ಈ ಹಿಂದೆ ಪೊಲೀಸ್ ಇನ್ಸ್​ಪೆಕ್ಟರ್ ಹಾಗೂ ಮಹಿಳಾ ಹೆಡ್‌ಕಾನ್ಸ್​ಟೆಬಲ್ ಅವರನ್ನು ಅಮಾನತು ಮಾಡಲಾಗಿತ್ತು. ಶನಿವಾರ ಹುಬ್ಬಳ್ಳಿ-ಧಾರವಾಡ ಕಾನೂನು ಸುವ್ಯವಸ್ಥೆ ಡಿಸಿಪಿ ಪಿ.ರಾಜೀವ್ ಅವರನ್ನು ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹುಬ್ಬಳ್ಳಿಗೆ ಗೃಹ ಸಚಿವರ ಭೇಟಿಗೂ ಮುನ್ನ ಅಮಾನತು ಆದೇಶ ಹೊರಬಿದ್ದಿದೆ. ಸೋಮವಾರ ಹುಬ್ಬಳ್ಳಿಗೆ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಭೇಟಿ ನೀಡಲಿದ್ದಾರೆ.

ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಗೆ ಅಂಜಲಿ ಕುಟುಂಬದವರು ಹೋಗಿ ಮಾಹಿತಿ ನೀಡಿದ ಬಳಿಕವೂ ಪೊಲೀಸರು ಕ್ರಮ ಜರುಗಿಸಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಹುಬ್ಬಳ್ಳಿ - ಧಾರವಾಡ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್​​ ಅವರು ಇನ್ಸ್​ಪೆಕ್ಟರ್ ಚಂದ್ರಶೇಖರ ಚಿಕ್ಕೋಡಿ ಹಾಗೂ ರೇಖಾ ಹಾವರಡ್ಡಿ ಅವರನ್ನು ಅಮಾನತು ಮಾಡಿದ್ದರು.

ಪ್ರಕರಣದ ಹಿನ್ನೆಲೆ

ಹುಬ್ಬಳ್ಳಿ ವೀರಾಪುರ ಓಣಿಯ 21 ವರ್ಷ ಅಂಜಲಿ ಎಂಬ ಯುವತಿಯನ್ನು ಬುಧವಾರ (ಮೇ 15) ಬೆಳಗಿನ ಜಾವ ವಿಶ್ವ ಅಲಿಯಾಸ್ ಗೀರಿಶ್ ಎಂಬ ಯುವಕ ಭೀಕರವಾಗಿ ಹತ್ಯೆ ಮಾಡಿದ್ದನು.

ಹತ್ಯೆಯಾದ ಅಂಜಲಿ ಮತ್ತು ಆರೋಪಿ ವಿಶ್ವ ಸಹಪಾಠಿಗಳಾಗಿದ್ದು, ಅಂಜಲಿ ಜೊತೆಗೆ ಒಡನಾಟ ಹೊಂದಿದ್ದ ಎನ್ನಲಾಗಿದೆ. ಆದರೆ, ಇತ್ತೀಚೆಗೆ ಇಬ್ಬರ ನಡುವೆ ಮನಸ್ತಾಪವಾಗಿತ್ತು ಎನ್ನಲಾಗಿದೆ. ಆ ವಿಷಯದಲ್ಲೇ ಕಳೆದ ವಾರ ಆತ ಆಕೆಗೆ ಬೆದರಿಕೆ ಹಾಕಿದ್ದನು. ತನ್ನ ಜೊತೆ ಬರದೇ ಇದ್ದರೆ ನೇಹಾ ಹತ್ಯೆಯ ರೀತಿಯೇ ಕೊಲೆ ಮಾಡುವುದಾಗಿ ಹೇಳಿದ್ದ ಎಂದು ಅಂಜಲಿ ಮನೆಯವರು ತಮ್ಮ ವ್ಯಾಪ್ತಿಯ ಬೆಂಡಿಗೇರಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ ಪೊಲೀಸರು ಅವರನ್ನು ಸುಮ್ಮನೆ ನಿಮ್ಮ ಭ್ರಮೆ ಎಂದು ಸಾಗಹಾಕಿದ್ದರು ಎನ್ನುವ ಆರೋಪ ಕೇಳಿಬಂದಿದೆ.

ಬುಧವಾರ ಬೆಳಗಿನ ಜಾವ ಆರೋಪಿ ವಿಶ್ವ ಏಕಾಏಕಿ ಅಂಜಲಿ ಮನೆಯ ಬಾಗಿಲು ಬಡಿದ್ದಾನೆ. ಅಂಜಲಿಯೇ ಬಾಗಿಲು ತೆರೆದ್ದಾಳೆ. ಮೊದಲಿಗೆ ಅಂಜಲಿ ಅಜ್ಜಿ ಮತ್ತು ಸಹೋದರಿಯರ ಜೊತೆಗೆ ಮಾತನಾಡಿದ ವಿಶ್ವ, ಬಳಿಕ ಸ್ವಲ್ಪ ಪರ್ಸನಲ್ ಮಾತನಾಡಬೇಕು ಎಂದು ಅಂಜಲಿಯನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ ಏಕಾಏಕಿ ಚಾಕು ಹಾಕಲು ಶುರು ಮಾಡಿದ್ದಾನೆ. ಆರೋಪಿ ವಿಶ್ವನ ಈ ಕೃತ್ಯವನ್ನು ತಡೆಯಲು ಅಂಜಲಿ ಕುಟುಂಬಸ್ಥರು ಮುಂದಾದಾಗ, ಅಂಜಲಿಯನ್ನು ಮನೆಯ ತುಂಬೆಲ್ಲಾ ಎಳೆದಾಡಿ ಚಾಕುವಿನಿಂದ ಮನಬಂದಂತೆ ಚುಚ್ಚಿದ್ದಾನೆ. ಅಂಜಲಿ ಸತ್ತ ಬಳಿಕ ಅಲ್ಲಿಂದ ಪರಾರಿಯಾಗಿದ್ದನು. ಸಧ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Read More
Next Story