HSRP Number Plate | ಹೊಸ ನಂಬರ್ ಪ್ಲೇಟ್ ಗಡುವು: ಸಾರಿಗೆ ಸಚಿವರು ಹೇಳಿದ್ದೇನು?
ಮತ್ತೊಂದು ಬೆಳವಣಿಗೆಯಲ್ಲಿ ಈವರೆಗೆ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಹಾಕಿಸದೇ ಇರುವ ವಾಹನ ಮಾಲೀಕರಿಗೆ ಸಮಾಧಾನಕರ ಸುದ್ದಿ ಬಂದಿದ್ದು, ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, ಈ ಬಾರಿ ಮತ್ತೊಮ್ಮೆ ಗಡುವು ವಿಸ್ತರಿಸುವ ಹೇಳಿಕೆ ನೀಡಿದ್ದಾರೆ.
ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ (HSRP Number Plate) ಸಾರಿಗೆ ಇಲಾಖೆ, ಸಂಚಾರಿ ಪೊಲೀಸ್ ಮತ್ತು ವಾಹನ ಸವಾರರ ಪಾಲಿಗೆ ತಲೆನೋವಾಗಿ ಪರಿಣಮಿಸಿದ್ದು, ಸರ್ಕಾರದ ಕೋರಿಕೆ, ಸೂಚನೆಗಳ ಹೊರತಾಗಿಯೂ ರಾಜ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಹೊಸ ನಂಬರ್ ಪ್ಲೇಟ್ ಅಳವಡಿಕೆ ಆಗಿಲ್ಲ.
ಈಗಾಗಲೇ ಹಲವು ಬಾರಿ ಗಡುವು ನೀಡಿದ್ದರೂ ವಾಹನ ಚಾಲಕರು ಮತ್ತು ಮಾಲೀಕರು ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಹಾಕಿಸುವ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ. ಈ ನಡುವೆ ಕೋರ್ಟ್ ಕೇಸು, ನಂಬರ್ ಪ್ಲೇಟ್ ನೋಂದಣಿಯ ಆನ್ಲೈನ್ ಪೋರ್ಟಲ್‌ಗಳ ತಾಂತ್ರಿಕ ಸಮಸ್ಯೆಗಳು ಮತ್ತಿತರ ಕಾರಣಗಳಿಂದಾಗಿ ವಾಹನ ಚಾಲಕರು ಮತ್ತು ಮಾಲೀಕರಿಗೂ ಸಾಕಷ್ಟು ಸಮಸ್ಯೆಗಳು ಎದುರಾಗಿವೆ.
ಈಗಾಗಲೇ ಕೆಲವು ಕಡೆ ಪೊಲೀಸರು ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಇಲ್ಲದ ವಾಹನಗಳನ್ನು ನಿಲ್ಲಿಸಿ ಚಾಲಕರಿಗೆ ಹೊಸ ಪ್ಲೇಟ್ ಹಾಕಿಸುವಂತೆ ಎಚ್ಚರಿಕೆ ನೀಡಿ ಬಿಡುತ್ತಿದ್ದಾರೆ. ಇದೀಗ ಮೇ 31, ಜೂನ್ 12ರ ಗಡುವುಗಳೂ ಮುಗಿದಿದ್ದು, ಹೈಕೋರ್ಟ್ ಸೂಚನೆಯಂತೆ ಜುಲೈ 4ರವರೆಗೆ ವಾಹನಗಳಿಗೆ ದಂಡ ವಿಧಿಸದೇ ಇರಲು ಸಾರಿಗೆ ಇಲಾಖೆ, ಪೊಲೀಸ್ ಮತ್ತು ಆರ್‌ಟಿಒ ಅಧಿಕಾರಿಗಳಿಗೆ ಸೂಚಿಸಿತ್ತು.
ಈ ನಡುವೆ, ಮತ್ತೊಂದು ಬೆಳವಣಿಗೆಯಲ್ಲಿ ಈವರೆಗೆ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಹಾಕಿಸದೇ ಇರುವ ವಾಹನ ಮಾಲೀಕರಿಗೆ ಸಮಾಧಾನಕರ ಸುದ್ದಿ ಬಂದಿದ್ದು, ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, ಈ ಬಾರಿ ಮತ್ತೊಮ್ಮೆ ಗಡುವು ವಿಸ್ತರಿಸುವ ಹೇಳಿಕೆ ನೀಡಿದ್ದಾರೆ. ಆ ಪ್ರಕಾರ ಸದ್ಯ ಸೆಪ್ಟೆಂಬರ್ 15ರ ವರೆಗೆ ಕಾಲಾವಕಾಶ ನೀಡಲಾಗಿದ್ದು, ಅದಕ್ಕೂ ಮುನ್ನ ಎಲ್ಲಾ ವಾಹನಗಳಿಗೆ ಎಚ್ಎಸ್ಆರ್‌ಪಿ ಅಳವಡಿಸಲು ಸೂಚನೆ ನೀಡಿದ್ದಾರೆ. ಈ ಕುರಿತು ಸದ್ಯದಲ್ಲೇ ಸರ್ಕಾರ ಅಧಿಕೃತ ಆದೇಶ ಹೊರಡಿಸುವುದಾಗಿ ಸಚಿವರು ಹೇಳಿದ್ದು, ಸೆಪ್ಟೆಂಬರ್ 15ರ ಬಳಿಕ ಯಾವುದೇ ಕಾರಣಕ್ಕೂ ಗಡುವು ವಿಸ್ತರಣೆ ಸಾಧ್ಯವಿಲ್ಲ. ಆ ನಂತರ ದಂಡ ಬೀಳುವುದರಲ್ಲಿ ಅನುಮಾನವಿಲ್ಲ. ಮತ್ತೆ ಗಡುವು ಮುಂದುವರಿಯಬಹುದು ಎಂಬ ಉದಾಸೀನ ಬಿಟ್ಟು ವಾಹನ ಮಾಲೀಕರು ಕೂಡಲೇ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳಬೇಕು ಎಂದೂ ಸಚಿವರು ಎಚ್ಚರಿಕೆ ನೀಡಿದ್ದಾರೆ.
ಏನಿದು ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್?
ಎಚ್ಎಸ್ಆರ್‌ಪಿ ಎಂಬುದು ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಎಂಬುದರ ಸಂಕ್ಷಿಪ್ತ ರೂಪ. ಇದು ನಿಮ್ಮ ಕಾರಿನ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿರುವ ಕೋಡ್ ಮತ್ತು ಕ್ರೋಮಿಯಂ ಹಾಲೋಗ್ರಾಮ್ ಸ್ಟಿಕರ್ ಕೂಡ ಇರುತ್ತದೆ. ಜೊತೆಗೆ ಒಂದೇ ಮಾದರಿ, ಅಳತೆಯ ನಂಬರನ್ನು ಆ ಪ್ಲೇಟ್ ಮೇಲೆ ಉಬ್ಬು ಅಚ್ಚಿನಲ್ಲಿರುತ್ತವೆ. ಜೊತೆಗೆ ಲಾಕ್ ಪಿನ್ ಮೂಲಕ ಈ ಪ್ಲೇಟನ್ನು ವಾಹನಕ್ಕೆ ಕೂರಿಸಲಾಗುತ್ತದೆ.
ಯಾವ ವಾಹನಗಳಿಗೆ ಈ ಪ್ಲೇಟ್ ಕಡ್ಡಾಯ?
ಕೇಂದ್ರ ಸರ್ಕಾರ 2019ರಲ್ಲಿ ಈ ಎಚ್ಎಸ್ಆರ್‌ಪಿಯನ್ನು ಹೊಸ ವಾಹನಗಳಿಗೆ ಕಡ್ಡಾಯಗೊಳಿಸಿತ್ತು. ಆ ಬಳಿಕ ನೋಂದಣಿಯಾಗಿರುವ ಎಲ್ಲಾ ವಾಹನಗಳಿಗೆ ವಾಹನ ಮಾರಾಟಗಾರರೇ ಎಚ್ಎಸ್ಆರ್‌ಪಿಯನ್ನು ಅಳವಡಿಸುತ್ತಾರೆ. ಅಂದರೆ, 2019ರ ಏಪ್ರಿಲ್ 1ರ ನಂತರ ನೋಂದಣಿಯಾಗಿರುವ ವಾಹನಗಳಿಗೆ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಪ್ರತ್ಯೇಕವಾಗಿ ಅಳಡಿಸುವ ಅಗತ್ಯವಿರುವುದಿಲ್ಲ. ಅದಕ್ಕೂ ಮುನ್ನ ನೋಂದಣಿಯಾಗಿರುವ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳಿಗೆ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಹಾಕುವುದು ಕಡ್ಡಾಯ.
ಗುಡುವಿನೊಳಗೆ ಹಾಕಿಸದೇ ಇದ್ದರೆ ದಂಡ ಎಷ್ಟು?
ಸರ್ಕಾರದ ಸದ್ಯದ ಗಡುವಿನ ಪ್ರಕಾರ, ಸೆಪ್ಟೆಂಬರ್ 15 ರಿಂದ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಇಲ್ಲದ ವಾಹನಗಳಿಗೆ ದಂಡ ಬೀಳಲಿದೆ. ಮೊದಲ ಬಾರಿಗೆ ₹ 500, ಎರಡನೇ ಬಾರಿಗೆ ₹1000 ದಂಡ ಬೀಳಲಿದೆ. ಆ ಬಳಿಕ ಪ್ರತಿ ಬಾರಿ ಸಿಕ್ಕಿಬಿದ್ದಾಗಲೂ ತಲಾ ₹1000 ದಂಡ ತೆರಬೇಕಾಗುತ್ತದೆ ಎಂದು ಇಲಾಖೆಯ ಮಾಹಿತಿ. ಆ ಹಿನ್ನೆಲೆಯಲ್ಲಿ ದಂಡ ಕಟ್ಟುವುದನ್ನು ತಪ್ಪಿಸಿಕೊಳ್ಳಲು ಆದಷ್ಟು ಬೇಗ ಎಚ್ಎಸ್ಆರ್‌ಪಿ ನೋಂದಣಿಯಾದರೂ ಮಾಡಿಸಿಕೊಳ್ಳಿ ಎಂದು ಇಲಾಖೆ ವಾಹನ ಮಾಲೀಕರಿಗೆ ಕರೆ ನೀಡಿದೆ.
ದಂಡ ತಪ್ಪಿಸಿಕೊಳ್ಳಲು ಏನು ಮಾಡಬಹುದು?
ಈಗ ವಾಹನಕ್ಕೆ ಎಚ್ಎಸ್ಆರ್‌ಪಿ ಅಳವಡಿಸಿಕೊಳ್ಳದೇ ಹೋದರೆ ದಂಡ ಪಕ್ಕಾ. ಆದರೆ, ದಂಡ ತಪ್ಪಿಸಿಕೊಳ್ಳಲು ಒಂದು ಅವಕಾಶವಿದೆ. ಕೂಡಲೇ ರಾಜ್ಯ ಸಾರಿಗೆ ಇಲಾಖೆಯ http//transport.karnataka.gov.in ಅಥವಾ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮಾನುಫ್ಯಾಕ್ಚರರ್ಸ್ ನ www.siam.in ನಲ್ಲಿ ನಿಮ್ಮ ವಾಹನದ ವಿವರ ತುಂಬಿ ಎಚ್ಎಸ್ಆರ್‌ಪಿ ಪ್ಲೇಟ್ ಗಾಗಿ ನೋಂದಣಿ ಮಾಡಿಕೊಳ್ಳಬಹುದು. ಹಾಗೆ ನೋಂದಣಿ ಮಾಡಿದ ಬಳಿಕ ಒಂದು ತಿಂಗಳ ಕಾಲ ನಿಮ್ಮ ವಾಹನಕ್ಕೆ ಯಾವುದೇ ದಂಡ ವಿಧಿಸುವುದಿಲ್ಲ. ಆ ಒಂದು ತಿಂಗಳ ಕಾಲಾವಧಿಯಲ್ಲಿ ಹೊಸ ನಂಬರ್ ಪ್ಲೇಟ್ ಅಳಡಿಸಿಕೊಂಡರೆ ನಿಮ್ಮ ಜೇಬು ಸೇಫ್ ಆಗಲಿದೆ.
ಎಚ್ಎಸ್ಆರ್‌ಪಿ ಅಳವಡಿಸಲು ಎಷ್ಟು ಶುಲ್ಕ?
ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಲು ದ್ವಿಚಕ್ರ ಮತ್ತು ತ್ರಿಚಕ್ರ ವಾಹನಕ್ಕೆ ₹450 -550, ಕಾರು ಅಥವಾ 4 ಚಕ್ರದ ವಾಹನಗಳಿಗೆ ರೂಪಾಯಿ ₹650-780. ಭಾರೀ ವಾಹನಗಳಾದ ಟ್ರಕ್, ಬಸ್ ಸೇರಿದಂತೆ 10 ಚಕ್ರದ ವಾಹನಗಳಿಗೆ ₹650- 800 ಶುಲ್ಕವನ್ನು ಸರ್ಕಾರ ನಿಗದಿಪಡಿಸಿದೆ.