HPPL Project | ಹೊನ್ನಾವರ ಬಂದರು ಯೋಜನೆ; ಸತ್ಯ ಶೋಧನಾ ಸಮಿತಿಯ ಶಿಫಾರಸುಗಳೇನು?
x
Source : Google Image

HPPL Project | ಹೊನ್ನಾವರ ಬಂದರು ಯೋಜನೆ; ಸತ್ಯ ಶೋಧನಾ ಸಮಿತಿಯ ಶಿಫಾರಸುಗಳೇನು?

ಹೊನ್ನಾವರ ಬಂದರು ಯೋಜನೆ ಕುರಿತು ಇಬ್ಬರು ಹಿರಿಯ ಪತ್ರಕರ್ತರು ಮತ್ತು ಒಬ್ಬರು ಹಿರಿಯ ವಕೀಲರನ್ನು ಒಳಗೊಂಡ ಸತ್ಯಶೋಧನಾ ಸಮತಿ ತಯಾರಿಸಿದ ವರದಿಯಲ್ಲಿ ಇರುವ ಶಿಫಾರಸುಗಳು ಏನು? ವಿವರ ಇಲ್ಲಿದೆ..


ಹೊನ್ನಾವರದಲ್ಲಿ ಖಾಸಗಿ ಕಂಪೆನಿ ನಿರ್ಮಿಸುತ್ತಿರುವ ಬಂದರು ಯೋಜನೆ ಸ್ಥಳೀಯ ಮೀನುಗಾರರ ಜೀವನೋಪಾಯಕ್ಕೆ, ಕಡಲ ಜೀವ ಸಂಕುಲಕ್ಕೆ ಕುತ್ತು ತಂದಿದೆ.

ಸಾಗರ್ ಮಾಲಾ ಅಭಿವೃದ್ಧಿ ಯೋಜನೆಯ ಭಾಗವಾಗಿ ಹೈದರಾಬಾದ್ ಮೂಲದ ಖಾಸಗಿ ಕಂಪನಿ ಹೊನ್ನಾವರದ ಕಾಸರಕೋಡು ಶರಾವತಿ ನದಿ ಅಳಿವೆಯ ಸುತ್ತಮುತ್ತ ಬೃಹತ್ ಬಂದರು ನಿರ್ಮಾಣ ಕೈಗೆತ್ತಿಕೊಂಡಿದ್ದು, ಇದು ಕಾಸರಕೋಡು ಪಂಚಾಯ್ತಿ ವ್ಯಾಪ್ತಿಯ ಕಾಸರಕೋಡು, ಟೋಂಕಾ 1, ಟೋಂಕಾ 2, ಪಾವಿನಕುರ್ವೆ, ಮಲ್ಲುಕುರ್ವೆ ಮತ್ತು ಹೊನ್ನಾವರ ಗ್ರಾಮೀಣ ಎಂಬ ಐದು ಮೀನುಗಾರಿಕಾ ಗ್ರಾಮಗಳ 44 ಹೆಕ್ಟೇರ್ ವ್ಯಾಪ್ತಿಯಲ್ಲಿ ವಿಸ್ತರಿಸಿಕೊಂಡಿದೆ.

ಇದನ್ನೂ ಓದಿ: ಹೊನ್ನಾವರದ ಕಡಲಮಕ್ಕಳ ಬದುಕನ್ನೇ ಮುಳುಗಿಸಿದ ಬಂದರು ಯೋಜನೆ

ಈ ಯೋಜನೆಯು ಸ್ಥಳೀಯ ಜನರ, ಪರಿಸರದ ಮೇಲೆ ತೀವ್ರ ಪರಿಣಾಮ ಉಂಟು ಮಾಡುತ್ತಿದ್ದು, ಯೋಜನೆ ವಿರುದ್ಧ ಇರುವ ಸ್ಥಳೀಯ ಮೀನುಗಾರರ ಮೇಲೆ ಸರ್ಕಾರ ಮತ್ತು ಕಂಪನಿಯ ಸೂಚನೆ ಮೇರೆಗೆ ಸ್ಥಳೀಯ ಪೊಲೀಸರು ಮತ್ತು ಕಂದಾಯ ಅಧಿಕಾರಿಗಳು ಬಲಪ್ರಯೋಗ, ದಬ್ಬಾಳಿಕೆ, ಸುಳ್ಳು ಕೇಸು, ಮುಂತಾದ ಅಕ್ರಮವನ್ನು ಎಸಗುತ್ತಿದ್ದಾರೆ.

ಹೊನ್ನಾವರ ತಾಲೂಕಿನ ಕಾಸರಕೋಡ ಗ್ರಾಮದ ಸ್ಥಳೀಯ ಮೀನುಗಾರಿಕಾ ಸಮುದಾಯವು ಆ ಪ್ರದೇಶದ ಮೂಲ ನಿವಾಸಿಗಳಾಗಿದ್ದು ಅಲ್ಲಿ ಅವರು ಹಲವಾರು ತಲೆಮಾರುಗಳಿಂದ ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ ನಿರತರಾಗಿದ್ದಾರೆ. ಬಂದರು ಯೋಜನೆಯು ಸ್ಥಳೀಯ ನಿವಾಸಿಗಳ ಬದುಕು ಮತ್ತು ಜೀವನೋಪಾಯಗಳಿಗೆ ಕುತ್ತು ತರುವುದು ಮಾತ್ರವಲ್ಲದೇ ಅಳಿವಿನಂಚಿನಲ್ಲಿರುವ ಜೀವಿಗಳಾಗಿರುವ ಆಲಿವ್ ರಿಡ್ಲೆ ಆಮೆಗಳ ಸಂತಾನಾಭಿವೃದ್ಧಿ ಜಾಗಗಳನ್ನು ನಾಶಪಡಿಸುತ್ತಿವೆ.

ಇದನ್ನೂ ಓದಿ: HPPL Project | ಆಲಿವ್‌ ರಿಡ್ಲೆ ಕಡಲಾಮೆ ಸಂತತಿಗೆ ಮಾರಕವಾದ ಯೋಜನೆ

“ತಲಾತಲಾಂತರದಿಂದ ಬಂದ ತಮ್ಮ ಜಾಗ, ಮೀನುಗಾರಿಕಾ ಪ್ರದೇಶವನ್ನು ಉಳಿಸಿಕೊಳ್ಳುವ ಹಕ್ಕು ಇಲ್ಲಿನ ಸ್ಥಳೀಯ ಜನರಿಗಿದೆ. ಆದರೆ, ಅದಕ್ಕಾಗಿ ಶಾಂತಿಯುತ ಪ್ರತಿಭಟನೆ ಮಾಡಿದ ಜನರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದು, ಅವರ ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ. ಪದೇಪದೆ ಸುಳ್ಳು ಪ್ರಕರಣಗಳನ್ನು ದಾಖಲಿಸುವ ಮೂಲಕ ಅವರನ್ನು ಕೋರ್ಟು-ಕಚೇರಿಗಳಿಗೆ ಅಲೆದಾಡಿಸಲಾಗುತ್ತಿದೆ. ಕರ್ನಾಟಕದಲ್ಲಿ ಈಗಾಗಲೇ ಇರುವ 3 ಬಂದರುಗಳು ಅವುಗಳ ಸಾಮರ್ಥ್ಯದ 30% ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಹೀಗಿರುವಾಗ ಸ್ಥಳೀಯರ ಒಪ್ಪಿಗೆಯಿಲ್ಲದೆ ಹೊಸ ಬಂದರು ನಿರ್ಮಾಣ ಮಾಡುವ ಉದ್ದೇಶ ಏನು” ಎಂದು ಯೋಜನೆಯ ಸಾಧಕ- ಬಾಧಕಗಳ ಕುರಿತು ಸತ್ಯ ಶೋಧನಾ ವರದಿ ತಯಾರಿಸಿದ ಸಮಿತಿಯು ಪ್ರಶ್ನಿಸಿದೆ.

ಇದನ್ನೂ ಓದಿ: HPPL PROJECT | ಹೊನ್ನಾವರ ಒಣಮೀನು ಉದ್ಯಮಕ್ಕೆ ಬೆಂಕಿ ಇಟ್ಟ ಬಂದರು

ಮುಂಬೈನ ಹಿರಿಯ ಪತ್ರಕರ್ತೆ ಪಮೇಲಾ ಪಿಲಿಪೋಸ್, ಮತ್ತೊಬ್ಬ ಹಿರಿಯ ಪತ್ರಕರ್ತ ಅಮಿತ್ ಸೇನ್ ಗುಪ್ತಾ ಮತ್ತು ಬಾಂಬೆ ಹೈಕೋರ್ಟ್ ವಕೀಲೆ ಲಾರಾ ಜೆಸಾನಿ ಅವರ ತಂಡ ಹೊನ್ನಾವರ ಬಂದರು ಯೋಜನೆ ಕುರಿತು ನಡೆಸಿದ ಸತ್ಯಶೋಧನಾ ವರದಿ ಇತ್ತೀಚೆಗೆ ಬಿಡುಗಡೆಯಾಗಿದ್ದು, ಬಂದರು ಯೋಜನೆಯನ್ನು ಸ್ಥಗಿತಗೊಳಿಸುವಂತೆ ಸಮತಿಯು ಶಿಫಾರಸು ಮಾಡಿದೆ.

ಇದನ್ನೂ ಓದಿ: HPPL PROJECT | ಹೋರಾಟಗಾರರ ಮೇಲೆ ಪೊಲೀಸ್‌ ದೌರ್ಜನ್ಯ ಸರಣಿಗೆ ಕೊನೆ ಇಲ್ಲ!

ಸತ್ಯ ಶೋಧನಾ ವರದಿ ಶಿಫಾರಸುಗಳು

  1. ಬಂದರು ಯೋಜನೆಯ ವಿರುದ್ಧ ಪ್ರತಿಭಟನೆ ನಡೆಸಿದ ಹೊನ್ನಾವರದ ಗ್ರಾಮಸ್ಥರ ಮೇಲೆ ದಾಖಲಾಗಿರುವ ಎಲ್ಲಾ ಕ್ರಿಮಿನಲ್ ಪ್ರಕರಣಗಳನ್ನು ತಕ್ಷಣ ಯಾವುದೇ ಷರತ್ತುಗಳಿಲ್ಲದೆ ಹಿಂತೆಗೆದುಕೊಳ್ಳಲು ಕರ್ನಾಟಕ ಸರ್ಕಾರವು ಸೂಕ್ತ ನಿರ್ದೇಶನ ನೀಡಬೇಕು.
  2. ಹೊನ್ನಾವರದ ಗ್ರಾಮಸ್ಥರು ಶಾಂತಿಯುತವಾಗಿ ತಮ್ಮ ಹಕ್ಕುಗಳನ್ನು ಚಲಾಯಿಸಿದಾಗ ಅವರ ವಿರುದ್ಧ ಪೊಲೀಸರು ನಡೆಸಿದ ಅತಿರೇಕಗಳನ್ನು ಸಮಗ್ರವಾಗಿ ತನಿಖೆ ನಡೆಸಬೇಕು. ಮಾನವ ಹಕ್ಕುಗಳನ್ನು ಉಲ್ಲಂಘಿಸಿದ, ಪ್ರತಿಭಟಿಸುವ ಹಕ್ಕುಗಳನ್ನು ನಾಗರಿಕರಿಗೆ ನಿರಾಕರಿಸಿದ ಮತ್ತು ಬಲಪ್ರಯೋಗದಿಂದ ಬೆದರಿಸುವ ತಂತ್ರಗಳನ್ನು ಅನುಸರಿಸಿದ ಪೊಲೀಸ್ ಅಧಿಕಾರಿಗಳ ಮೇಲೆ ಮತ್ತು HPPL ಅಧಿಕಾರಿಗಳ ಮೇಲೆ ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು.
  3. ಗ್ರಾಮಸ್ಥರ ಪರವಾಗಿ ಸಲ್ಲಿಸಲಾದ ದೂರನ್ನು ಮುಚ್ಚುವ ಮೂಲಕ NHRCಯು ಅವರ ಹಕ್ಕುಗಳನ್ನು ರಕ್ಷಿಸುವ ತನ್ನ ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ಹಿಂದೇಟು ಹಾಕಿದೆ. ಮಾನವ ಹಕ್ಕುಗಳ ಸಂರಕ್ಷಣೆಗಾಗಿ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಪರಿಸರ ಮತ್ತು ವಾತಾವರಣದ ರಕ್ಷಕರಾದ ಗ್ರಾಮಸ್ಥರು ಎದುರಿಸಿರುವ ಪ್ರತೀಕಾರದ ಕ್ರಮಗಳನ್ನು NHRC ತಕ್ಷಣ ಪರಿಗಣನೆಗೆ ತೆಗೆದುಕೊಳ್ಳಬೇಕು, ಮತ್ತು ತನಿಖೆಗೆ ಆದೇಶಿಸಬೇಕು. ಮಾತ್ರವಲ್ಲದೇ ಅವರ ವಿರುದ್ಧ ಹಾಕಲಾಗಿರುವ ಪ್ರಕರಣಗಳನ್ನು ಹಿಂದೆಗೆದುಕೊಳ್ಳಲು ಸೂಕ್ತ ನಿರ್ದೇಶನಗಳನ್ನು ಹೊರಡಿಸಬೇಕಲ್ಲದೇ ಉತ್ತರದಾಯಿತ್ವವನ್ನು ಖಚಿತಪಡಿಸಬೇಕು.

    HPPL ಬಂದರು ಯೋಜನೆಗೆ ನೀಡಲಾಗಿರುವ ಪರಿಸರ ಅನುಮತಿಯು ಈ ಹಂತದಲ್ಲೀಗ ವಾಯಿದೆ ತೀರಿದೆ. ಹೊನ್ನಾವರದ ಗ್ರಾಮಸ್ಥರು ಅಲ್ಲಿ ಬಂದರು ನಿರ್ಮಾಣದ ಯೋಜನೆಯ ಕುರಿತು ಎತ್ತಿರುವ ಆಕ್ಷೇಪಗಳನ್ನು ಕರ್ನಾಟಕ ಸರ್ಕಾರ ತಕ್ಷಣ ಗಂಭೀರವಾಗಿ ಪರಿಗಣಿಸಬೇಕು. HPPL ಬಂದರು ಯೋಜನೆಯ ಬಗ್ಗೆ ಹೊನ್ನಾವರದ ಕಾಸರಕೋಡಿನ ಸ್ಥಳೀಯ ಮೀನುಗಾರ ಸಮುದಾಯದ ಸಂತ್ರಸ್ತ ವ್ಯಕ್ತಿಗಳು ಗಂಭೀರವಾದ ಕಳವಳಗಳನ್ನು ಎತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರವು ಯೋಜನೆ ಮುಂದುವರಿಸುವ ತನ್ನ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು ಮತ್ತು ನೈಸರ್ಗಿಕ ಪರಿಸರವನ್ನು ಹೇಗಿದೆಯೋ ಹಾಗೆ, ಅದರ ಮೂಲ ಸ್ಥಿತಿಗೆ ಮರಳಿಸಬೇಕು.

  4. ಬಂದರು ಕಾಮಗಾರಿಯ ವೇಗ ಹೆಚ್ಚಿಸಲು ರಚಿಸಲಾಗಿರುವ ತಾತ್ಕಾಲಿಕ ಅಕ್ರಮ ರಸ್ತೆ ಸ್ಥಳೀಯ ಪರಿಸರಕ್ಕೆ ಅಪಾರ ಹಾನಿಗಳನ್ನು ಮಾಡಿದೆ ಮತ್ತು ಸ್ಥಳೀಯ ಸಮುದಾಯದ ಜಾಗಗಳನ್ನು ಅತಿಕ್ರಮಣ ಮಾಡಿದೆ. ಅಲ್ಲಿ ಬಂದರು ಮತ್ತು ರಸ್ತೆಗಳೆರಡೂ ಕೂಡ ಈಗಾಗಲೇ ಅಳಿವಿನಂಚಿನಲ್ಲಿರುವ ಆಲಿವ್ ರಿಡ್ಲೆ ಆಮೆಗಳ ತಂಗುದಾಣಗಳನ್ನು ನಾಶಮಾಡುವ ಅಪಾಯವಿದೆ. ಈ ವಾಸ್ತವವನ್ನು ಅಧಿಕಾರಿಗಳು ಪರಿಗಣಿಸಬೇಕು ಮತ್ತು ಸ್ಥಳೀಯ ಪರಿಸರಕ್ಕೆ ಮಾಡಿರುವ ಹಾನಿಯನ್ನು ದುರಸ್ತಿಪಡಿಸಬೇಕು. ಪ್ರಾಧಿಕಾರಗಳು ಅಕ್ರಮವಾಗಿ ನಿರ್ಮಿಸಿರುವ ರಸ್ತೆಯನ್ನು ತೆಗೆದುಹಾಕುವುದನ್ನು ಅಧಿಕಾರಿಗಳು ಖಚಿತಪಡಿಸಬೇಕು.
  5. ಯಾವುದೇ ಸಂದರ್ಭದಲ್ಲಿ ಬಂದರು ಮತ್ತು ಆ ಬಂದರಿಗೆ ಪ್ರಸ್ತಾವಿತವಾದ ರಸ್ತೆ/ ರೈಲ್ವೇ ಲೈನನ್ನು ತೀವ್ರವಾಗಿ ಮರುಪರಿಶೀಲನೆಗೆ ಒಳಪಡಿಸಬೇಕು ಮತ್ತು ಎಲ್ಲ ನಿರ್ಧಾರಗಳನ್ನು ಎಲ್ಲರನ್ನೂ ಒಳಗೊಂಡು, ಚರ್ಚೆಯ ಬಳಿಕ ತೆಗೆದುಕೊಳ್ಳಬೇಕು, ಈ ವಿಚಾರದಲ್ಲಿ ಸಂತ್ರಸ್ತರಾಗಿರುವ ಸಮುದಾಯಗಳ ಕಳವಳಗಳನ್ನು ಪರಿಗಣನೆಗೆ ತೆಗೆದುಕೊಂಡು ಮುಂದುವರಿಯಬೇಕು. ಸತತವಾದ ಮರಳು ಶೇಖರಣೆ ಮತ್ತು ಸವೆತಗಳು ಸಂಭವಿಸುವ ಈ ಪ್ರದೇಶದಲ್ಲಿ, ಅವಧಿ ತೀರಿದ ಹಳೆಯ ನಕಾಶೆಗಳನ್ನು ಇಟ್ಟುಕೊಂಡು ಬಂದರು ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. ಹಾಗಾಗಿ, ಈ ವಿಚಾರವನ್ನು ಅಧಿಕಾರಿಗಳು ಮರುಪರಿಶೀಲಿಸಬೇಕು ಮತ್ತು ಹಾಲೀ ಇರುವ ಭೂಸಂರಚನೆಯನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು.
  6. ಹೊನ್ನಾವರದ ಒಣಮೀನು ವ್ಯಾಪಾರದ ಚಾರಿತ್ರಿಕ ಹಿನ್ನೆಲೆಯನ್ನು ಉಳಿಸಿಕೊಳ್ಳಲು ಎಲ್ಲ ಪ್ರಯತ್ನಗಳನ್ನೂ ಮಾಡಬೇಕು. ಅದು ಅಲ್ಲಿನ ಸಾವಿರಾರು ಮಂದಿಗೆ, ಅದರಲ್ಲೂ ಮೀನುಗಾರ ಸಮುದಾಯದ ಮಹಿಳೆಯರಿಗೆ ಜೀವನೋಪಾಯವಾಗಿತ್ತು. ಕರ್ನಾಟಕ ಸರ್ಕಾರವು ಭಾರತ ಸರ್ಕಾರದ ಸಾಗರಮಾಲಾ ಯೋಜನೆಯಡಿ 8000 ಕೋಟಿ ರೂ.ಗಳಲ್ಲಿ ಬಂದರು ಅಭಿವೃದ್ಧಿಪಡಿಸಲು ಮಾಡಿರುವ ನಿರ್ಧಾರವನ್ನು ಅದಕ್ಕೆ ದೇಶದ ಎಲ್ಲ ಕಡೆಗಳಲ್ಲಿ ಅಪಾರ ಪ್ರತಿರೋಧ ಬರುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಅದನ್ನು ಸಂತ್ರಸ್ತ ಜನಸಮುದಾಯಗಳು ಮತ್ತು ಸ್ಥಳೀಯ ಸಮುದಾಯಗಳಿಗೆ ಪೂರ್ವಭಾವಿಯಾಗಿ ಗಮನಕ್ಕೆ ತರದೆ ಅವರ ಕಳವಳಗಳನ್ನು ಪರಿಗಣಿಸದೆ ಘೋಷಿಸಲಾಗಿರುವುದರಿಂದ ಅವನ್ನೆಲ್ಲ ಮರುಪರಿಶೀಲಿಸಬೇಕು. ಪರಿಸರದ ಕಾನೂನುಗಳ ಪಾಲನೆ ಆಗುವುದನ್ನು ಸರ್ಕಾರ ಖಚಿತಪಡಿಸಿಕೊಳ್ಳಬೇಕು ಮತ್ತು ಸಮುದಾಯದ ಸಾರ್ವತ್ರಿಕ ಸೊತ್ತುಗಳು ಸಂರಕ್ಷಿತವಾಗಬೇಕು, ಅದಕ್ಕೆ ಪರಿಸರ ಬದಲಾವಣೆಗಳನ್ನು ಗಮನದಲ್ಲಿ ಇರಿಸಿಕೊಂಡು ಮುಂದುವರಿಯಬೇಕು ಮತ್ತು ತಲೆಮಾರುಗಳ ನಡುವೆ ಸಮಾನತೆಯನ್ನು ಖಚಿತಪಡಿಸಿಕೊಳ್ಳಬೇಕು.
Read More
Next Story