Download Ayushman Card on your mobile: Complete information on eligibility and benefits
x

ಎಐ ಆಧಾರಿತ ಚಿತ್ರ

ಮೊಬೈಲ್‌ನಲ್ಲೇ ಆಯುಷ್ಮಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿ: ಅರ್ಹತೆ ಮತ್ತಿತರ ಸಂಪೂರ್ಣ ಮಾಹಿತಿ ಇಲ್ಲಿದೆ

ಬಿಪಿಎಲ್ ಕಾರ್ಡ್ ಹೊಂದಿರುವ, ಒಂದು ಕುಟುಂಬಕ್ಕೆ ವರ್ಷಕ್ಕೆ ಗರಿಷ್ಠ 5 ಲಕ್ಷದವರೆಗೆ ಸರ್ಕಾರಿ ಮತ್ತು ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ.


Click the Play button to hear this message in audio format

ಬಡ ಅಥವಾ ಮಧ್ಯಮ ವರ್ಗದ ಕುಟುಂಬಗಳಲ್ಲಿ ಯಾರಾದರೂ ಗಂಭೀರ ಕಾಯಿಲೆಗೆ ತುತ್ತಾದರೆ, ಆಸ್ಪತ್ರೆಯ ವೆಚ್ಚ ಭರಿಸಲು ಆಸ್ತಿ ಮಾರಾಟ ಮಾಡುವುದು ಅಥವಾ ಸಾಲದ ಸುಳಿಗೆ ಸಿಲುಕುವುದು ಇಂದಿಗೂ ಸಾಮಾನ್ಯ ಸಂಗತಿ. ಇಂತಹ ಕಷ್ಟದ ಸಮಯದಲ್ಲಿ "ಹಣದ ಕೊರತೆಯಿಂದ ಯಾರೂ ಚಿಕಿತ್ಸೆಯಿಂದ ವಂಚಿತರಾಗಬಾರದು ಮತ್ತು ಜೀವ ಕಳೆದುಕೊಳ್ಳಬಾರದು" ಎಂಬ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆಯೇ 'ಆಯುಷ್ಮಾನ್ ಭಾರತ್'. ಕರ್ನಾಟಕದಲ್ಲಿ 'ಆಯುಷ್ಮಾನ್ ಭಾರತ್ - ಆರೋಗ್ಯ ಕರ್ನಾಟಕ' (AB-ARK) ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಯೋಜನೆ ಕೋಟ್ಯಂತರ ಜನರಿಗೆ ಶ್ರೀರಕ್ಷೆಯಾಗಿದೆ. ಹಾಗಾದರೆ ಈ ಯೋಜನೆಯ ಲಾಭ ಪಡೆಯುವುದು ಹೇಗೆ? ಆಯುಷ್ಮಾನ್ ಕಾರ್ಡ್ ಮಾಡಿಸಿಕೊಳ್ಳಲು ಇರುವ ಸುಲಭ ಹಾದಿಗಳಾವುವು? ಇಲ್ಲಿದೆ ಸಂಪೂರ್ಣ ಮಾಹಿತಿ.

ಏನಿದು ಆಯುಷ್ಮಾನ್‌ ಯೋಜನೆ ?

ಜನರ ಆರೋಗ್ಯದ ದೃಷ್ಟಿಯಿಂದ 2018ರ ಫೆಬ್ರವರಿಯಲ್ಲಿ ಕೇಂದ್ರ ಬಜೆಟ್‌ನಲ್ಲಿ ಅಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಈ ಯೋಜನೆಯನ್ನು ಘೋಷಿಸಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2018ರ ಸೆಪ್ಟೆಂಬರ್ 23ರಂದು ಜಾರ್ಖಂಡ್‌ನ ರಾಂಚಿಯಲ್ಲಿ ಅಧಿಕೃತವಾಗಿ ಉದ್ಘಾಟಿಸಿದ್ದರು. ಇದನ್ನು 'ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ' (PM-JAY) ಎಂದೂ ಕರೆಯಲಾಗುತ್ತದೆ. ರಾಜ್ಯದಲ್ಲಿ ಈ ಯೋಜನೆಯು ರಾಜ್ಯದ ಹಳೆಯ ಆರೋಗ್ಯ ಯೋಜನೆಗಳೊಂದಿಗೆ ವಿಲೀನಗೊಂಡು 'ಆಯುಷ್ಮಾನ್ ಭಾರತ್ - ಆರೋಗ್ಯ ಕರ್ನಾಟಕ' (AB-ARK) ಎಂಬ ಹೆಸರಿನಲ್ಲಿ 2018ರ ಅಕ್ಟೋಬರ್ 30ರಂದು ಜಾರಿಗೆ ಬಂದಿತು. ಯೋಜನೆಯ ಭಾಗವಾಗಿ ಮೊದಲ 'ಆರೋಗ್ಯ ಮತ್ತು ಕ್ಷೇಮ ಕೇಂದ್ರ'ವನ್ನು ಏಪ್ರಿಲ್ 14, 2018 ರಂದು ಛತ್ತೀಸ್‌ಗಢದ ಬಿಜಾಪುರದಲ್ಲಿ ಉದ್ಘಾಟಿಸಲಾಯಿತು.

ಯಾರಿಗೆ ಎಷ್ಟು ರಿಯಾಯಿತಿ ?

ಬಿಪಿಎಲ್ ಕಾರ್ಡ್ ಹೊಂದಿರುವ, ಒಂದು ಕುಟುಂಬಕ್ಕೆ ವರ್ಷಕ್ಕೆ ಗರಿಷ್ಠ 5 ಲಕ್ಷದವರೆಗೆ ಸರ್ಕಾರಿ ಮತ್ತು ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ. ಎಪಿಎಲ್ ಕಾರ್ಡ್ ಹೊಂದಿರುವ ಫಲಾನುಭವಿಗಳ ಚಿಕಿತ್ಸಾ ವೆಚ್ಚದ ಶೇ. 30 ರಷ್ಟು ರಿಯಾಯಿತಿ (ವರ್ಷಕ್ಕೆ ಗರಿಷ್ಠ 1.5 ಲಕ್ಷದವರೆಗೆ ) ಚಿಕಿತ್ಸೆ ಪಡೆಯಬಹುದಾಗಿದೆ.

ಆಯುಷ್ಮಾನ್‌ ಕಾರ್ಡ್‌ ಮಾಡಿಸುವುದು ಹೇಗೆ ?

ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಒನ್‌ ಹಾಗೂ ನಗರ ಪ್ರದೇಶದಲ್ಲಿ ಬೆಂಗಳೂರು ಒನ್‌ ಹಾಗೂ ಬಾಪೂಜಿ ಸೇವಾ ಕೇಂದ್ರದಲ್ಲಿ, ತಾಲ್ಲೂಕು ಅಥವಾ ಜಿಲ್ಲಾ ಆಸ್ಪತ್ರೆಗಳಲ್ಲಿರುವ 'ಆಯುಶ್ಮಾನ್ ಮಿತ್ರ' ಕೌಂಟರ್‌ಗಳಲ್ಲಿಯೂ ಆಯುಶ್ಮಾನ್‌ ಕಾರ್ಡ್‌ ಮಾಡಿಸಿಕೊಳ್ಳಬಹುದು. ಪ್ರಮುಖವಾಗಿ ಮೊಬೈಲ್ ಸಂಖ್ಯೆ ಲಿಂಕ್ ಆಗಿರುವ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಇದ್ದರೆ ನೋಂದಣಿ ಮಾಡಿಕೊಳ್ಳಬಹುದು.

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವವರು beneficiary.nha.gov.in ಪೋರ್ಟಲ್ ಅಥವಾ ʼಆಯುಷ್ಮಾನ್‌ ಆಪ್‌ʼ ಡೌನ್‌ಲೋಡ್ ಮಾಡಿ ನಿಮ್ಮ ಆಧಾರ್ ಸಂಖ್ಯೆ ಬಳಸಿ ನೋಂದಾಯಿಸಿಕೊಳ್ಳಬಹುದು. ಈ ಯೋಜನೆಯಡಿ ಸೌಲಭ್ಯ ಪಡೆಯಲು ಮೊದಲು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಬೇಕು. ಅಲ್ಲಿ ಚಿಕಿತ್ಸೆ ಸಾಧ್ಯವಿಲ್ಲದಿದ್ದರೆ ಮಾತ್ರ ಖಾಸಗಿ ಆಸ್ಪತ್ರೆಗೆ 'ರೆಫರಲ್' ನೀಡಲಾಗುತ್ತದೆ. ತುರ್ತು ಪರಿಸ್ಥಿತಿಗಳಲ್ಲಿ ನೇರವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಲು ಅವಕಾಶವಿರುತ್ತದೆ.

ಮೊಬೈಲ್‌ನಲ್ಲೂ ಅರ್ಜಿ ಸಲ್ಲಿಸಿ

ಆಯುಷ್ಮಾನ್‌ ಕಾರ್ಡ್‌ನ್ನು ನಿಮ್ಮ ಮೊಬೈಲ್ ಮೂಲಕವೇ ಸುಲಭವಾಗಿ ಅರ್ಜಿಸಲ್ಲಿಸಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಮೊದಲು ಅಧಿಕೃತ ಪೋರ್ಟಲ್ beneficiary.nha.gov.in ಗೆ ಭೇಟಿ ನೀಡಿ ಅಥವಾ ಮೊಬೈಲ್‌ನಲ್ಲಿ 'ಆಯುಷ್ಮಾನ್‌ ಆಪ್‌' ಡೌನ್‌ಲೋಡ್ ಮಾಡಿಕೊಂಡು ಲಾಗಿನ್ ಆಗಿ ಅಲ್ಲಿ 'ಫಲಾನುಭವಿ' ಆಯ್ಕೆಯನ್ನು ಆರಿಸಿ.

* ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಬರುವ OTP ಹಾಕಿ ಲಾಗಿನ್ ಆಗಿ.

* ರಾಜ್ಯ ಕರ್ನಾಟಕ ಎಂದು ಆರಿಸಿ.

* ಸ್ಕೀಮ್ PM-JAY ಆರಿಸಿ.

* ನಿಮ್ಮ ಜಿಲ್ಲೆಯನ್ನು ಆರಿಸಿ.

* ಪಡಿತರ ಚೀಟಿ ಅಥವಾ ಆಯ್ಕೆ ಮಾಡಿ ಸಂಖ್ಯೆಯನ್ನು ನಮೂದಿಸಿ.

* ಇ-ಕೆವೈಸಿ ಮಾಡಿ

* ನಿಮ್ಮ ಕುಟುಂಬದ ಸದಸ್ಯರ ಹೆಸರುಗಳು ಪರದೆಯ ಮೇಲೆ ಕಾಣಿಸುತ್ತವೆ.

* ಯಾರ ಹೆಸರಿನ ಮುಂದೆ ʼನಾಟ್‌ ಜನರೇಟೆಡ್‌' ಎಂದಿದೆಯೋ, ಅಲ್ಲಿ 'ಇ-ಕೆವೈಸಿ' ಬಟನ್ ಕ್ಲಿಕ್ ಮಾಡಿ.

* ಆಧಾರ್ ಒಟಿಪಿ ಆಯ್ಕೆ ಮಾಡಿ, ನಿಮ್ಮ ಮೊಬೈಲ್‌ಗೆ ಬರುವ ಕೋಡ್ ನಮೂದಿಸಿ.

* ನಿಮ್ಮ ಮೊಬೈಲ್ ಕ್ಯಾಮೆರಾ ಮೂಲಕ ಆ ಕ್ಷಣದ ಲೈವ್ ಫೋಟೋವನ್ನು ತೆಗೆದು ಅಪ್‌ಲೋಡ್ ಮಾಡಿ.

ವಿವರಗಳು ಸರಿಯಾಗಿದ್ದರೆ ಸ್ವಲ್ಪ ಸಮಯದಲ್ಲೇ ಅಥವಾ 24 ಗಂಟೆಯೊಳಗೆ 'Approved' ಎಂದು ಬರುತ್ತದೆ. ನಂತರ ನೀವು ಅದೇ ವೆಬ್‌ಸೈಟ್‌ನಲ್ಲಿ ಕಾರ್ಡ್‌ನ್ನು ಡೌನ್‌ಲೋಡ್‌ ಮಾಡಿ ಪ್ರಿಂಟ್ ತೆಗೆದುಕೊಳ್ಳಬಹುದು.

ದಾಖಲೆಗಳನ್ನು ಪರೀಕ್ಷಿಸಿ

ನಿಮ್ಮ ಆಧಾರ್ ಕಾರ್ಡ್‌ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿದ್ದರೆ ಮಾತ್ರ ನೀವು ಮನೆಯಲ್ಲೇ ಕುಳಿತು ಅರ್ಜಿ ಸಲ್ಲಿಸಲು ಸಾಧ್ಯ. ಪಡಿತರ ಚೀಟಿಯಲ್ಲಿ ನಿಮ್ಮ ಹೆಸರು ಕಡ್ಡಾಯವಾಗಿ ಇರಲೇಬೇಕು. ಒಂದು ವೇಳೆ ನಿಮಗೆ ಆನ್‌ಲೈನ್‌ನಲ್ಲಿ ಮಾಡಲು ಕಷ್ಟವಾದರೆ, ಹತ್ತಿರದ 'ಗ್ರಾಮ ಒನ್' ಅಥವಾ 'ಬೆಂಗಳೂರು ಒನ್' ಕೇಂದ್ರಕ್ಕೆ ನಿಮ್ಮ ಆಧಾರ್ ಮತ್ತು ರೇಷನ್ ಕಾರ್ಡ್ ತೆಗೆದುಕೊಂಡು ಹೋದರೆ ಕಡಿಮೆ ಶುಲ್ಕದಲ್ಲಿ ಆಯುಷ್ಮಾನ್‌ ಕಾರ್ಡ್‌ ಮಾಡಿಸಬಹುದಾಗಿದೆ.

ಆಯುಷ್ಮಾನ್ ಭಾರತ್ ಯೋಜನೆಯನ್ನು ಆರಂಭಿಸಿದ ಮುಖ್ಯ ಉದ್ದೇಶವೇ 'ಸಾರ್ವತ್ರಿಕ ಆರೋಗ್ಯ ರಕ್ಷಣೆ' ಒದಗಿಸುವುದಾಗಿದೆ. ಅನೇಕ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಗಂಭೀರ ಕಾಯಿಲೆಗಳು ಬಂದಾಗ ಚಿಕಿತ್ಸೆಗಾಗಿ ಆಸ್ತಿ ಮಾರಿಕೊಳ್ಳುವುದು ಅಥವಾ ಸಾಲ ಮಾಡುವುದು ಸಾಮಾನ್ಯವಾಗಿತ್ತು. ಇದನ್ನು ತಪ್ಪಿಸಲು, ವಾರ್ಷಿಕವಾಗಿ ಪ್ರತಿ ಕುಟುಂಬಕ್ಕೆ 5 ಲಕ್ಷದವರೆಗೆ ಉಚಿತ ವೈದ್ಯಕೀಯ ವಿಮೆ ನೀಡಿ ಅವರನ್ನು ಆರ್ಥಿಕ ಸಂಕಷ್ಟದಿಂದ ರಕ್ಷಿಸುವುದು ಇದರ ಮೊದಲ ಗುರಿಯಾಗಿದೆ. ಕೇವಲ ಸರ್ಕಾರಿ ಆಸ್ಪತ್ರೆಗಳಲ್ಲದೆ, ನೋಂದಾಯಿತ ಉತ್ತಮ ಖಾಸಗಿ ಆಸ್ಪತ್ರೆಗಳಲ್ಲೂ ಬಡವರಿಗೆ ಉಚಿತವಾಗಿ ಚಿಕಿತ್ಸೆ ಸಿಗುವಂತೆ ಮಾಡುವುದು. ಇದರಿಂದ ಸಾಮಾನ್ಯ ಜನರಿಗೂ ಕಾರ್ಪೊರೇಟ್ ಮಾದರಿಯ ಗುಣಮಟ್ಟದ ವೈದ್ಯಕೀಯ ಸೌಲಭ್ಯ ಸಿಗುತ್ತದೆ.

ಯೋಜನೆ ವ್ಯಾಪ್ತಿಯಲ್ಲಿನ ಆಸ್ಪತ್ರೆಗಳು

ಕರ್ನಾಟಕದಲ್ಲಿ ಆಯುಷ್ಮಾನ್ ಭಾರತ್ - ಆರೋಗ್ಯ ಕರ್ನಾಟಕ ಯೋಜನೆಯಡಿ 700ಕ್ಕೂ ಹೆಚ್ಚು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ನೋಂದಾಯಿಸಲ್ಪಟ್ಟಿವೆ. ಪ್ರಮುಖವಾಗಿ ವಿಕ್ಟೋರಿಯಾ ಆಸ್ಪತ್ರೆ, ವಾಣಿ ವಿಲಾಸ ಆಸ್ಪತ್ರೆ, ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ, ಕೆ.ಸಿ. ಜನರಲ್ ಆಸ್ಪತ್ರೆ ಮತ್ತು ಜಯದೇವ ಹೃದ್ರೋಗ ಸಂಸ್ಥೆಗಳು, ಮೈಸೂರಿನ ಕೆ.ಆರ್. ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆ, ಕಿಮ್ಸ್ ಆಸ್ಪತ್ರೆ, ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆ, ಲೇಡಿ ಗೋಶನ್ ಆಸ್ಪತ್ರೆ ಸೇರಿದಂತೆ ಹಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಸೌಲಭ್ಯವಿದೆ.

ಖಾಸಗಿ ಆಸ್ಪತ್ರೆಗಳ ಪೈಕಿ ಬೆಂಗಳೂರಿನ ನಾರಾಯಣ ಹೃದಯಾಲಯ, ಎಂ.ಎಸ್. ರಾಮಯ್ಯ ಮೆಮೋರಿಯಲ್ ಆಸ್ಪತ್ರೆ, ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಬಿಜಿಎಸ್ ಗ್ಲೋಬಲ್ ಆಸ್ಪತ್ರೆ, ಸಾಗರ್ ಆಸ್ಪತ್ರೆ, ಶಂಕರ ಕ್ಯಾನ್ಸರ್ ಆಸ್ಪತ್ರೆ, ವೈದೇಹಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮೈಸೂರಿನ ಅಪೋಲೋ ಬಿಜಿಎಸ್, ಜೆಎಸ್ಎಸ್ ಆಸ್ಪತ್ರೆ, ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಮತ್ತು ಕಾವೇರಿ ಆಸ್ಪತ್ರೆ. ಹುಬ್ಬಳ್ಳಿ-ಧಾರವಾಡದ ಎಸ್‌ಡಿಎಂ ವೈದ್ಯಕೀಯ ಆಸ್ಪತ್ರೆ, ಸುಶ್ರುತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಕರ್ನಾಟಕ ಕ್ಯಾನ್ಸರ್ ಥೆರಪಿ ಮತ್ತು ರಿಸರ್ಚ್ ಇನ್ಸ್ಟಿಟ್ಯೂಟ್. ಮಂಗಳೂರಿನ ಎ.ಜೆ. ಆಸ್ಪತ್ರೆ, ಕೆಎಂಸಿ ಆಸ್ಪತ್ರೆ, ಯೆನೆಪೋಯ ಆಸ್ಪತ್ರೆ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ಸೇರಿದಂತೆ ಹಲವು ಆಸ್ಪತ್ರೆಗಳಲ್ಲಿ ಯೋಜನೆಯ ಮೂಲಕ ಚಿಕಿತ್ಸೆ ಪಡೆಯಬಹುದಾಗಿದೆ.

ರೆಫರಲ್ ಕಡ್ಡಾಯ

ತುರ್ತು ಪರಿಸ್ಥಿತಿಯನ್ನು ಹೊರತುಪಡಿಸಿ, ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯಲು ಮೊದಲು ಸರ್ಕಾರಿ ಆಸ್ಪತ್ರೆಯಿಂದ ರೆಫರಲ್ ಪಡೆಯುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ ಖಾಸಗಿ ಆಸ್ಪತ್ರೆಗೆ ಸಂಪೂರ್ಣ ಹಣ ಪಾವತಿಸಬೇಕಾಗುತ್ತದೆ.

ಯಾವೆಲ್ಲಾ ಚಿಕಿತ್ಸೆ ಪಡೆಯಬಹುದು ?

ಆಯುಷ್ಮಾನ್ ಭಾರತ್ - ಆರೋಗ್ಯ ಕರ್ನಾಟಕ ಯೋಜನೆಯಡಿ ಒಟ್ಟು 1,650ಕ್ಕೂ ಹೆಚ್ಚು ವಿವಿಧ ವೈದ್ಯಕೀಯ ಚಿಕಿತ್ಸೆಗಳು ಮತ್ತು ಶಸ್ತ್ರಚಿಕಿತ್ಸೆಗಳಿಗೆ ಅವಕಾಶವಿದೆ.

ಸಾಮಾನ್ಯ ಚಿಕಿತ್ಸೆಗಳು

ದೈನಂದಿನ ಜೀವನದಲ್ಲಿ ಎದುರಾಗುವ ಸಾಮಾನ್ಯ ಆರೋಗ್ಯ ಸಮಸ್ಯೆಗಳು ಮತ್ತು ಸಣ್ಣ ಶಸ್ತ್ರಚಿಕಿತ್ಸೆಗಳು ಇದರಲ್ಲಿ ಸೇರಿವೆ. ಪ್ರಮುಖವಾಗಿ ಅಪೆಂಡಿಕ್ಸ್ , ಹರ್ನಿಯಾ , ಪೈಲ್ಸ್ ಶಸ್ತ್ರಚಿಕಿತ್ಸೆ, ಮೂಳೆ ಮುರಿತದ ಚಿಕಿತ್ಸೆಗಳು ಮತ್ತು ಕೀಲು ನೋವಿನ ಶಸ್ತ್ರಚಿಕಿತ್ಸೆ. ಗರ್ಭಕೋಶದ ಶಸ್ತ್ರಚಿಕಿತ್ಸೆ , ಹೆರಿಗೆ ಸೌಲಭ್ಯ, ಕಿವಿ, ಮೂಗು ಮತ್ತು ಗಂಟಲಿಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗಳನ್ನು ಪಡೆಯಬಹುದು.

ಗಂಭೀರ ರೋಗಗಳು

ಹೃದ್ರೋಗಕ್ಕೆ ಸಂಬಂಧಿಸಿದಂತೆ ಆಂಜಿಯೋಪ್ಲಾಸ್ಟಿ, ಸ್ಟಂಟ್ ಅಳವಡಿಕೆ, ಬೈಪಾಸ್ ಸರ್ಜರಿ ಮತ್ತು ಹಾರ್ಟ್ ವಾಲ್ವ್ ಬದಲಾವಣೆ, ಕ್ಯಾನ್ಸರ್, ಕೀಮೋಥೆರಪಿ, ರೇಡಿಯೋಥೆರಪಿ ಮತ್ತು ಕ್ಯಾನ್ಸರ್ ಗೆಡ್ಡೆಗಳನ್ನು ತೆಗೆಯುವ ಶಸ್ತ್ರಚಿಕಿತ್ಸೆಗಳು, ಕಿಡ್ನಿ ವೈಫಲ್ಯಕ್ಕೆ ಸಂಬಂಧಿಸಿದ ಚಿಕಿತ್ಸೆಗಳು, ಡಯಾಲಿಸಿಸ್ ಮತ್ತು ಕಿಡ್ನಿ ಕಲ್ಲು ತೆಗೆಯುವಿಕೆ, ಮಿದುಳಿನ ಶಸ್ತ್ರಚಿಕಿತ್ಸೆಗಳು ಮತ್ತು ಬೆನ್ನುಮೂಳೆಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಬುದಾಗಿದೆ.

ತುರ್ತು ಚಿಕಿತ್ಸೆಗಳು

ಅಪಘಾತ ಅಥವಾ ಜೀವಕ್ಕೆ ಅಪಾಯವಿರುವ ಸಂದರ್ಭದಲ್ಲಿ ನೇರವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬುದಾಗಿದೆ. ರಸ್ತೆ ಅಪಘಾತಗಳು, ಹೃದಯಾಘಾತ, ವಿಷ ಸೇವನೆ ಅಥವಾ ಹಾವು ಕಡಿತ ಹಾಗೂ ಸುಟ್ಟ ಗಾಯಗಳಿಗೆ ಯಾವುದೇ ರೆಫರೆನ್ಸ್‌ ಇಲ್ಲದೆ ಚಿಕಿತ್ಸೆ ಪಡೆಯಬಹುದಾಗಿದೆ.

ಯೋಜನೆಯಲ್ಲಿ ಲಭ್ಯವಿಲ್ಲದ ಚಿಕಿತ್ಸೆಗಳು

ಹೊರರೋಗಿ ಚಿಕಿತ್ಸೆ ಅಂದರೆ ಆಸ್ಪತ್ರೆಗೆ ದಾಖಲಾಗದೆ ಕೇವಲ ಮಾತ್ರೆ ತೆಗೆದುಕೊಳ್ಳುವುದು, ಕಾಸ್ಮೆಟಿಕ್ ಸರ್ಜರಿ, ಹಲ್ಲಿನ ಶುಚಿಗೊಳಿಸುವಿಕೆ ಅಥವಾ ಸಾಮಾನ್ಯ ತಪಾಸಣೆಗಳಿಗೆ ಈ ಯೋಜನೆಯಡಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲ.

Read More
Next Story