The Federal Exclusive |ನಕ್ಸಲ್‌ ನಾಯಕ ವಿಕ್ರಂ ಗೌಡ ಎನ್‌ಕೌಂಟರ್‌ ಹೇಗಾಯ್ತು? ಗುಂಡಿನ ದಾಳಿಯಿಂದ ಪ್ರಾಣ ಉಳಿಸಿಕೊಂಡವರಾರು?
x
ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಹತನಾದ ವಿಕ್ರಂ ಗೌಡ ಮತ್ತು ತಪ್ಪಿಸಿಕೊಂಡಿದ್ದ ಅತನ ಸಹಚರರಾದ ಸುಂದರಿ ಮತ್ತು ವನಜಾಕ್ಷಿ

The Federal Exclusive |ನಕ್ಸಲ್‌ ನಾಯಕ ವಿಕ್ರಂ ಗೌಡ ಎನ್‌ಕೌಂಟರ್‌ ಹೇಗಾಯ್ತು? ಗುಂಡಿನ ದಾಳಿಯಿಂದ ಪ್ರಾಣ ಉಳಿಸಿಕೊಂಡವರಾರು?

ಮಾವನಿಗೆ 500 ರೂ. ಕೊಟ್ಟು, ಚಹಾ ಪುಡಿ, ಪೇಸ್ಟ್‌, ದಿನಸಿ ತಂದಿಡಲು ವಿಕ್ರಂಗೌಡ ಹೇಳಿದ್ದ. ವಾರದ ಬಳಿಕ ಸುಂದರಿ ಮತ್ತು ವನಜಾಕ್ಷಿ ಜತೆ ಬಂದಿದ್ದಾಗ ಪೊಲೀಸ್‌ ಗುಂಡಿನ ದಾಳಿ ನಡೆಯಿತು.


ನವೆಂಬರ್‌ 18 ರಂದು ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಪೀತ್‌ ಬೈಲ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ನಕ್ಸಲ್‌ ನಾಯಕ ವಿಕ್ರಂ ಗೌಡನ ಹತ್ಯೆಯಾಗಿತ್ತು. ಈ ಹತ್ಯೆ ಹೇಗಾಯ್ತು ಎಂಬ ಬಗ್ಗೆ ಸಾಕಷ್ಟು ಅನುಮಾನಗಳಿದ್ದವು.

"ಧರ್ಮಸ್ಥಳದಲ್ಲಿ ಮೂವರನ್ನು ಸೆರೆಹಿಡಿಯಲಾಗಿತ್ತು. ಅದರಲ್ಲಿ ವಿಕ್ರಂ ಗೌಡನೂ ಒಬ್ಬ. ಪೊಲೀಸರು ಚಿತ್ರ ಹಿಂಸೆ ನೀಡಿ ಗನ್‌ಪಾಯಿಂಟ್‌ನಲ್ಲಿ ಹೊಡೆದು ಹಾಕಿದ್ದಾರೆ. ಇದೊಂದು ಕೊಲೆ," ಎಂಬ ಸುದ್ದಿಗಳು ಹರಿದಾಡಿದ್ದವು. ಮಾನವ ಹಕ್ಕು ಕಾರ್ಯಕರ್ತರು ಪೀತ್‌ಬೈಲ್‌ಗೆ ಭೇಟಿ ನೀಡಿ ಅಲ್ಲಿ ಗುಂಡಿನ ಚಕಮಕಿ ಆಗಿಲ್ಲ. ಇದೊಂದು ಕೊಲೆ ಎಂಬುದಾಗಿ ಷರಾ ಬರೆದಿದ್ದರು. ವಿಕ್ರಂ ಗೌಡನನ್ನು ಸೆರೆ ಹಿಡಿಯಲು ಎಲ್ಲಾ ಅವಕಾಶಗಳಿದ್ದಾಗಲೂ ಪೊಲೀಸರು ಆತನನ್ನು ಹತ್ಯೆ ಮಾಡಿದ್ದರು ಎಂಬ ಅನುಮಾನಗಳು ಕಂಡುಬಂದಿದ್ದವು. ಆದರೆ ಅಂದು ನಡೆದ ಘಟನೆ ಏನು ಎತ್ತ ಎಂಬುದು ಈಗ ಶರಣಾಗಿರುವ ನಕ್ಸಲರಿಂದ ಬಹಿರಂಗವಾಗಿದೆ ಎನ್ನಲಾಗಿದೆ.

ಶರಣಾಗುತ್ತಿರುವ ನಕ್ಸಲರು

ನಕ್ಸಲ್‌ ನಾಯಕಿ ಮುಂಡಗಾರು ಲತಾ ನೇತೃತ್ವದ ತಂಡದ ಸದಸ್ಯರಾದ ಸುಂದರಿ, ವಸಂತ್‌, ಜಯಣ್ಣ, ಜಿಶಾ, ವನಜಾಕ್ಷಿ ಇತ್ತೀಚೆಗೆ ನಕ್ಸಲ್‌ ಶರಣಾಗತಿ ಸಮಿತಿ ಸದಸ್ಯರಾದ ಡಾ. ಬಂಜಗೆರೆ ಜಯಪ್ರಕಾಶ್‌ ಮತ್ತು ಇತರ ಸದಸ್ಯರ ಮುಂದೆ ಹಾಜರಾಗಿ, ಸಿಎಂ ಸಿದ್ದರಾಮಯ್ಯ ಎದುರು ಶರಣಾಗಿದ್ದರು. ಅವರಲ್ಲಿ ಸುಂದರಿ ಮತ್ತು ವನಜಾಕ್ಷಿ ವಿಕ್ರಂ ಗೌಡನ ನೇತ್ರಾವತಿ ದಳದ ಸಹವರ್ತಿಗಳು. ವಿಕ್ರಂ ಗೌಡನ ಎನ್‌ಕೌಂಟರ್‌ ಸಂದರ್ಭದಲ್ಲಿ ಹೇಗೋ ತಪ್ಪಿಸಿಕೊಂಡ ವನಜಾಕ್ಷಿ ಮತ್ತು ಸುಂದರಿ ಘಟನೆ ಬಗ್ಗೆ ಸಂಧಾನಕಾರರಲ್ಲಿ ವಿವರ ನೀಡಿದ್ದರು ಎಂದು ಹೇಳಲಾಗಿದೆ.

ನಕ್ಸಲರಿಗೆ ಬೆಂಬಲ ಸಿಗಲಿಲ್ಲ

ಕೇರಳದಲ್ಲಿ ಮಾವೋವಾದಿ ಕಮ್ಯುನಿಸ್ಟ್‌ ಪಕ್ಷ ಸಂಘಟನೆ ಸಾಧ್ಯವೇ ಇಲ್ಲ ಎಂಬ ವಾತಾವರಣ ನಿರ್ಮಾಣವಾದ ಮೇಲೆ ಕರ್ನಾಟಕದವರೇ ಹೆಚ್ಚಿದ್ದ ನಕ್ಸಲರ ತಂಡ ಮತ್ತೆ ತಾಯ್ನಾಡಿಗೆ ಹಿಂದಿರುಗಿತ್ತು. ಇರುವ ಎಂಟು ಮಂದಿಯಲ್ಲಿ ಇಬ್ಬರು ಮಾತ್ರ ಹೊರ ರಾಜ್ಯದವರು. ಕರ್ನಾಟಕದ ಕಾಡನ್ನು ಬಲ್ಲ ಇವರು ಇಲ್ಲಿಯೇ ಮತ್ತೆ ಸಂಘಟನೆ ಮಾಡಬಹುದೇ ಎಂಬ ವಿಶ್ವಾಸದಿಂದ ಮರಳಿದ್ದರು.

ಆದರೆ ಇಲ್ಲಿನ ಪರಿಸ್ಥಿತಿ ಮತ್ತು ಪರಿಸರ ಅದಕ್ಕೆ ಪೂರಕವಾಗಿಲ್ಲ ಎಂಬುದು ಬಹುಬೇಗನೇ ಗೊತ್ತಾಗಿದೆ. ಕಾಡಂಚಿನ ಗ್ರಾಮಗಳಲ್ಲಿ ನಕ್ಸಲರಿಗೆ ಹಿಂದೆ ತೋರುತಿದ್ದ ಪ್ರೀತಿ ಈ ಬಾರಿ ಸಿಗಲಿಲ್ಲ. ಅವರಿಗೆ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಸನ್ನಿವೇಶದಲ್ಲಿ ಮುಖ್ಯವಾಹಿನಿಗೆ ಬರಬೇಕೆಂಬ ಚಿಂತನೆ ಅವರಲ್ಲಿ ಸಹಜವಾಗಿಯೇ ಮೂಡಿತ್ತು. ಈಗಾಗಲೇ ಮುಖ್ಯವಾಹಿನಿಗೆ ಬಂದು ಜನಪರ ಕೆಲಸ ಮತ್ತು ಹೋರಾಟ ಮಾಡಿದ್ದ ಕೆಲವರನ್ನು ಸಂಪರ್ಕಿಸುವ ಪ್ರಯತ್ನ ಮಾಡಿದ್ದರು. ಆ ಕಡೆಯಿಂದಲೂ ಅನ್ಯಾಯವಾಗಿ ಸಾಯಬೇಡಿ. ನಮ್ಮೊಂದಿಗೆ ಬನ್ನಿ ಮುಖ್ಯವಾಹಿನಿಯಲ್ಲಿದ್ದುಕೊಂಡೇ ಪ್ರಜಾಸತ್ತಾತ್ಮಕ ನೆಲೆಯಲ್ಲಿಯೇ ಹೋರಾಟ ಮಾಡೋಣ ಎಂಬ ಸಲಹೆಗಳೂ ಬಂದಿದ್ದವು ಎನ್ನಲಾಗಿದೆ.

ಶರಣಾಗತ ನಕ್ಸಲರಾದ ಜಯಣ್ದ, ವಸಂತ್‌, ಜೀಶಾ, ವನಜಾಕ್ಷಿ, ಸುಂದರಿ, ಮುಂಡಗಾರು ಲತಾ (ಎಡದಿಂದ ಬಲಕ್ಕೆ)

ಮಾವನ ಮನೆಯಂಗಳದಲ್ಲಿ ಅಳಿಯನ ಹತ್ಯೆ

ಮುಖ್ಯವಾಹಿನಿಗೆ ಮರಳಬೇಕೆಂಬ ಚಿಂತನೆ ಮೂಡಿದ್ದು ನಿಜ. ಆದರೆ ಅದಕ್ಕೆ ಸಮಯ ಕೂಡಿ ಬರಬೇಕಲ್ಲ. ಅದಕ್ಕೊಂದು ವೇದಿಕೆ ನಿರ್ಮಾಣವಾಗಬೇಕಿತ್ತು. ಅಲ್ಲೀತನಕ ಕಾಡಲ್ಲಿಯೇ ಈ ತಂಡ ಅಡ್ಡಾಡಿಕೊಂಡಿತ್ತು. ವಿಕ್ರಂಗೌಡನ ನೇತೃತ್ವದಲ್ಲಿ ನಾಲ್ಕು ಮಂದಿ ಘಟ್ಟದ ಕೆಳಗೆ ಮತ್ತು ಮುಂಡಗಾರು ಲತಾ ನೇತೃತ್ವದ ನಾಲ್ಕು ಮಂದಿ ಘಟ್ಟದ ಮೇಲೆ ಅಡ್ಡಾಡಲಾರಂಭಿಸಿದ್ದರು.

ನಕ್ಸಲ್‌ ವಿಕ್ರಮ್‌ ಗೌಡ ಗುಂಡೇಟಿನಿಂದ ಹತನಾದ್ದು, ಆತನ ಮಾವನ ಮನೆ ಬಳಿ

ತಿಂಗಳುಗಳ ಕಾಲ ಅಲೆಮಾರಿಗಳಂತೆ ಊರಿಂದ ಊರಿಗೆ ಅಲೆಯುತಿದ್ದ ನಕ್ಸಲರು ದಿನಸಿ ಸಾಮಾನು ಮತ್ತು ಔಷಧಗಳಿಗಾಗಿ ಕಾಡಂಚಿನ ಗ್ರಾಮಗಳಿಗೆ ಬರುತಿದ್ದರು. ಅಂತೆಯೇ ʼನೇತ್ರಾವಳಿ ದಳʼದ ನೇತೃತ್ವ ಹೊತ್ತಿದ್ದ ವಿಕ್ರಂ ಗೌಡ ತನ್ನೂರಿನ ಸುತ್ತಮುತ್ತಲೇ ಸಂಚರಿಸುತ್ತಿದ್ದ. ಕಬ್ಬಿನಾಲೆ ಗ್ರಾಮ ಪಂಚಾಯಿತಿಯ ಪೀತ್‌ ಬೈಲ್‌ ಸುತ್ತ ದುರ್ಗಮ ಅರಣ್ಯವಿತ್ತು. ಪೀತ್‌ಬೈಲ್‌ ಎಂಬ ಹಾಡಿಯಲ್ಲಿ ಆದಿವಾಸಿ ಮಲೆಕುಡಿಯ ಸಮುದಾಯದ ಜಯಂತ್‌ ಗೌಡ, ನಾರಾಯಣ ಗೌಡ ಹಾಗೂ ಸುಧಾಕರ್‌ ಗೌಡ ಎಂಬ ಸಂಬಂಧಿಕರ ಮನೆಗೆ ಆಗಾಗ ವಿಕ್ರಂಗೌಡ ನೇತೃತ್ವದ ತಂಡ ಬಂದು ಹೋಗುತಿತ್ತು. ಜಯಂತ್‌ಗೌಡ ವಿಕ್ರಂ ಗೌಡನಿಗೆ ಸಂಬಂಧದಲ್ಲಿ ಮಾವನಾಗಬೇಕು. ಕಾಡಿನಿಂದ ಬಂದು ಮಾವನ ಮನೆಯಲ್ಲಿ ಆಗಾಗ ಊಟ ಕೂಡ ಮಾಡಿಹೋಗುತಿದ್ದುದು ಮಾಮೂಲಿಯಾಗಿತ್ತು ಎಂದು ಹೇಳಲಾಗಿದೆ..

ವಿಕ್ರಂ ಗೌಡ

ಕುತ್ತು ತಂದ ಆ 500 ರೂಪಾಯಿ

2024 ರ ನವೆಂಬರ್‌ 18 ಕ್ಕೂ ಒಂದು ವಾರ ಮೊದಲು ಪೀತ್‌ಬೈಲ್‌ನ ಜಯಂತ್‌ ಗೌಡರ ಮನೆಗೆ ಬಂದಿದ್ದ ವಿಕ್ರಂಗೌಡ ನೇತೃತ್ವದ ನಕ್ಸಲರ ತಂಡ ಊಟ ಮಾಡಿ, ಮಾವನ ಕೈಲಿ 500 ರೂ. ಹಣ ಕೊಟ್ಟು "ವಾರದ ಬಳಿಕ ಬರುತ್ತೇವೆ. ಚಹಾ ಪುಡಿ, ಪೇಸ್ಟ್‌, ಬಿಸ್ಕೆಟ್‌ ಇತ್ಯಾದಿ ದಿನಸಿ ತಂದಿಡಿ," ಎಂದು ಹೇಳಿದ್ದನು. ನಿಗದಿಯಂತೆ ಮಾವನ ಮನೆಯಿಂದ ದಿನಸಿ ವಸ್ತು ಕೊಂಡೊಯ್ಯಲು ವಿಕ್ರಂಗೌಡನ ತಂಡ ಇಳಿಸಂಜೆ ಹೊತ್ತಿಗೆ ಪೀತ್‌ಬೈಲಿಗೆ ಬಂದಿದೆ. ದುರ್ಗಮ ಕಾಡಿನಲ್ಲಿರುವ ಪೀತ್‌ ಬೈಲ್‌ನ ಸೇತುವೆ ದಾಟಿ ಮುಂದೆ ವಿಕ್ರಂ ಗೌಡ , ಅನತಿ ಅಂತರದಲ್ಲಿ ಸುಂದರಿ ಮತ್ತು ವನಜಾಕ್ಷಿ ಆತನನ್ನು ಹಿಂಬಾಲಿಸುತ್ತಾರೆ.

ತುಳು ಭಾಷೆಯಲ್ಲಿ ʼಬಲ.. ಬಲ...ʼ ಎಂದು ಆಹ್ವಾನ

ಹೇಳಿ ಕೇಳಿ ಮಾವನ ಮನೆ ಎಂಬ ಬಲವಾದ ನಂಬಿಕೆಯಿಂದ ವಿಕ್ರಂಗೌಡನಿಗೆ ಮಾವ ʼಬಲ .. ಬಲ.. (ಬಾ.. ಬಾ..) ಎಂದು ಕರೆಯುತ್ತಾರೆ. ಮನೆಯಿಂದ ಕೊಂಚ ದೂರದಲ್ಲಿಯೇ ಇದ್ದ ಗೇಟಿನ ಉಣಗೋಲು ತೆಗೆದುಕೊಂಡು ವಿಕ್ರಂ ಗೌಡ ಒಳಬರುತ್ತಾನೆ.

ನಕ್ಸಲ್‌ ವಿಕ್ರಂ ಗೌಡ ಪೊಲೀಸ್‌ ಗುಂಡಿಗೆ ಬಲಿಯಾದ ಪೀತ್‌ಬೈಲಿನ ಅರಣ್ಯ ಪ್ರದೇಶ

ಅಷ್ಟೊತ್ತಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ಸಜ್ಜಾಗಿದ್ದ ನಕ್ಸಲ್‌ ನಿಗ್ರಹದಳದ ಪೊಲೀಸರು ಗುಂಡಿನ ಮಳೆಗರೆಯುತ್ತಾರೆ. (ಯಾವ ತಯಾರಿಯೂ ಇಲ್ಲದೆ ಮಾವನ ಮನೆಗೆ ಬಂದ ಅಳಿಯ ಸ್ಥಳದಲ್ಲಿಯೇ ಕುಸಿದು ಕೊನೆಯುಸಿರೆಳೆಯುತ್ತಾನೆ. ಅಪಾಯ ಅರಿತ ಸುಂದರಿ ಮತ್ತು ವನಜಾಕ್ಷಿ ತಪ್ಪಿಸಿಕೊಂಡು ಪರಾರಿಯಾಗುತ್ತಾರೆ ಎಂದು ಶರಣಾಗತ ನಕ್ಸಲರು ಸಂಧಾನಕಾರರ ಬಳಿ ವಿವರಿಸಿದ್ದರು ಎನ್ನಲಾಗಿದೆ. (ಆದರೆ ಪೊಲೀಸರ ಪ್ರಕಾರ, ವಿಕ್ರಂ ಗೌಡ ಗುಂಡಿನ ದಾಳಿಗೆ ಸಜ್ಜಾದಾಗ ಪೊಲೀಸರು ಅನಿವಾರ್ಯವಾಗಿ ಗುಂಡಿನ ಪ್ರತಿದಾಳಿ ನಡೆಸಿದರು.)

ಪೊಲೀಸರಿಗೆ ಮಾಹಿತಿ ನೀಡಿದವರಾರು?

ಜಯಂತ್‌ಗೌಡರ ಮನೆಗೆ ನಕ್ಸಲರು ಬರುವ ವಿಚಾರ ಪೊಲೀಸರಿಗೆ ಹೇಗೆ ತಿಳಿಯಿತು ಎಂಬುದು ಮಾತ್ರ ನಿಗೂಢವಾಗಿದೆ. ಕಬ್ಬಿನಾಲೆಯಲ್ಲಿ ಒಮ್ಮೆಲೇ ಹೆಚ್ಚು ದಿನಸಿ ಸಾಮಾನುಗಳನ್ನು ಖರೀದಿ ಮಾಡಿದ್ದರಿಂದ ಅನುಮಾನಗೊಂಡು ಯಾರಾದರೂ ಪೊಲೀಸರಿಗೆ ಮಾಹಿತಿ ನೀಡಿದ್ದರೊ, ಪೀತ್‌ ಬೈಲಿನವರೇ ಪೊಲೀಸರಿಗೆ ಮಾಹಿತಿ ನೀಡಿದ್ದರಾ ?, ನಕ್ಸಲ್‌ ನಿಗ್ರಹದಳದ ಆಮಿಷಕ್ಕೆ ಸಂಬಂಧಿಕರೇ ಮಾಹಿತಿ ನೀಡಿದ್ದಾರೆಯೇ? ಜೀವಕ್ಕೇನೂ ಮಾಡುವುದಿಲ್ಲ ಎಂದು ಪೊಲೀಸರೇ ಮೋಸ ಮಾಡಿದರಾ ಎಂಬ ಪ್ರಶ್ನೆಗಳು ಪೀತ್‌ ಬೈಲಿನ ವಾಸಿಗಳ ಮನಸ್ಸಲ್ಲಿ ಎದ್ದಿವೆ.

Read More
Next Story