ಇನ್‌ಸ್ಟಾಗ್ರಾಂ ಸ್ನೇಹ ಗೃಹಿಣಿಯ ಕೊಲೆಯಲ್ಲಿ ಅಂತ್ಯ
ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಗೃಹಿಣಿಯನ್ನು ಆಕೆಯ ಪ್ರಿಯಕರ ಮಕ್ಕಳ ಎದುರೇ ಚಾಕುವಿನಿಂದ ಇರಿದು ಹತ್ಯೆ ಮಾಡಿ, ಕೆರೆಗೆ ಎಸೆದಿರುವ ಘಟನೆ ಬಾಳೆಹೊನ್ನೂರು ಸಮೀಪ ನಡೆದಿದೆ.
ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಸ್ನೇಹ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಕಿಚ್ಚಬ್ಬಿ ಗ್ರಾಮದಲ್ಲಿ ನಡೆದಿದೆ.
ಬೆಂಗಳೂರಿನ ಚಿರಂಜೀವಿ ಎಂಬಾತನಿಗೆ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದ ಕಿಚ್ಚಬ್ಬಿ ಗ್ರಾಮದ ಗೃಹಿಣಿ ತೃಪ್ತಿ ಕೊಲೆಗೀಡಾದ ದುರ್ದೈವಿ. ಇಬ್ಬರು ಮಕ್ಕಳ ಎದುರೇ ತೃಪ್ತಿಯನ್ನು ಪ್ರಿಯಕರ ಚಿರಂಜೀವಿ ಚಾಕುವಿನಿಂದ ತಿವಿದು ಹತ್ಯೆ ಮಾಡಿ, ಬಳಿಕ ಕೆರೆಗೆ ಎಸೆದಿದ್ದಾನೆ.
ಘಟನೆ ಹಿನ್ನೆಲೆ ಏನು?
ಬೆಂಗಳೂರಿನಲ್ಲಿ ಗ್ಯಾಸ್ ಏಜೆನ್ಸಿ ನಡೆಸುತ್ತಿದ್ದ ಚಿರಂಜೀವಿ ಇನ್‌ಸ್ಟಾಗ್ರಾಂನಲ್ಲಿ ತೃಪ್ತಿಗೆ ಪರಿಚಯವಾಗಿದ್ದ. ಇಬ್ಬರ ನಡುವಿನ ಪರಿಚಯ ಪ್ರೀತಿಗೆ ತಿರುಗಿತ್ತು. ಕೊಪ್ಪ ತಾಲೂಕಿನ ಹೇರೂರು ಗ್ರಾಮದ ತೃಪ್ತಿ, ಕಿಚ್ಚಬ್ಬಿ ಗ್ರಾಮದ ರಾಜೇಶ್ ಎಂಬುವರನ್ನು ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದರು.
ಪ್ರೀತಿಯಲ್ಲಿ ಬಿದ್ದ ತೃಪ್ತಿ ತಿಂಗಳ ಹಿಂದೆ ಪ್ರಿಯಕರ ಚಿರಂಜೀವಿ ಜೊತೆ ಮಕ್ಕಳನ್ನು ಬಿಟ್ಟು ಹೋಗಿದ್ದಳು. ಈ ಕುರಿತು ಪತಿ ರಾಜೇಶ್ ಬಾಳೆಹೊನ್ನೂರು ಪೊಲೀಸರಿಗೆ ದೂರು ನೀಡಿದ್ದರು. ತೃಪ್ತಿ ಹಾಗೂ ಚಿರಂಜೀವಿಯನ್ನು ಪೊಲೀಸರು ವಿಜಯಪುರದಲ್ಲಿ ಪತ್ತೆ ಮಾಡಿ, ಕರೆತಂದಿದ್ದರು. ತೃಪ್ತಿ ಜೊತೆ ಯಾವುದೇ ಸಂಪರ್ಕ ಇಟ್ಟುಕೊಳ್ಳದಂತೆ ಆರೋಪಿ ಚಿರಂಜೀವಿಗೆ ಪೊಲೀಸರು ಎಚ್ಚರಿಕೆ ಕೊಟ್ಟು ಕಳುಹಿಸಿದ್ದರು. ಅದರಂತೆ ತೃಪ್ತಿ ಕೂಡ ಸುಮ್ಮನಾಗಿದ್ದರು.
ಶನಿವಾರ ತೃಪ್ತಿ ಪತಿ ರಾಜೇಶ್ ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಮನೆಗೆ ಬಂದ ಪ್ರಿಯಕರ ಚಿರಂಜೀವಿ, ತನ್ನನ್ನು ನಿರ್ಲಕ್ಷಿಸುತ್ತಿರುವ ಕುರಿತು ಜಗಳ ಮಾಡಿದ್ದಾನೆ. ಈ ವೇಳೆ ತಾಳ್ಮೆ ಕಳೆದುಕೊಂಡ ಚಿರಂಜೀವಿ, ಎರಡೂವರೆ ವರ್ಷದ ಮಗಳ ಎದುರೇ ತೃಪ್ತಿಗೆ ಚಾಕುವಿನಿಂದ ಇರಿದಿದ್ದಾನೆ. ಆಕೆ ಜೋರಾಗಿ ಕೂಗಿಕೊಂಡರೂ ಬಿಡದೆ 500 ಮೀಟರ್ ದೂರದ ಕಾಫಿ ತೋಟಕ್ಕೆ ಎಳೆದೊಯ್ದು ಮನಸೋಇಚ್ಛೆ ತಿವಿದು, ಕೆರೆಗೆ ಎಸೆದು ಪರಾರಿಯಾಗಿದ್ದಾನೆ.
ಪ್ರಕರಣ ದಾಖಲಿಸಿಕೊಂಡ ಬಾಳೊಹೊನ್ನೂರು ಪೊಲೀಸರು ಆರೋಪಿ ಚಿರಂಜೀವಿಯನ್ನು ಬಂಧಿಸಿದ್ದಾರೆ.