ಹೊನ್ನಾವರ | ಬಂದರು ನಿರ್ಮಾಣ ಪ್ರದೇಶದಲ್ಲಿ ಆಲಿವ್‌ ರಿಡ್ಲೆ ಮೊಟ್ಟೆ ಪತ್ತೆ
x
ಹೊನ್ನಾವರದ ಮೀನುಗಾರರು ಆಲಿವ್‌ ರಿಡ್ಲೆ ಮೊಟ್ಟೆಗೂಡುಗಳನ್ನು ರಕ್ಷಿಸುತ್ತಿರುವುದು

ಹೊನ್ನಾವರ | ಬಂದರು ನಿರ್ಮಾಣ ಪ್ರದೇಶದಲ್ಲಿ ಆಲಿವ್‌ ರಿಡ್ಲೆ ಮೊಟ್ಟೆ ಪತ್ತೆ

ಹೊನ್ನಾವರದ HPPL ಖಾಸಗಿ ಬಂದರು ಯೋಜನೆ ಕಾಮಗಾರಿ ನಡೆಯುವ ಪ್ರದೇಶದಲ್ಲಿ ಆಲಿವ್ ರಿಡ್ಲೆ ಆಮೆಗಳು ಮೊಟ್ಟೆ- ಗೂಡು ಪತ್ತೆಯಾಗಿದ್ದು, ಈ ಪ್ರದೇಶದಲ್ಲಿ ಈ ಬಾರಿ ಇದುವರೆಗೂ 32 ಆಮೆಗಳ ಮೊಟ್ಟೆಗೂಡುಗಳು ಪತ್ತೆಯಾಗಿವೆ.


ಹೊನ್ನಾವರದ ಕಾಸರಕೋಡು ಟೊಂಕ ಪ್ರದೇಶದಲ್ಲಿ ಸೋಮವಾರ ರಾತ್ರಿ ಆಲಿವ್‌ ರಿಡ್ಲೆ ಆಮೆಯೊಂದು ಮೊಟ್ಟೆ ಇಟ್ಟಿರುವುದು ಪತ್ತೆಯಾಗಿದ್ದು, ಇದರೊಂದಿಗೆ ಈ ಬಾರಿ ಅಲ್ಲಿ ಮೊಟ್ಟೆ ಇಟ್ಟ ಆಲಿವ್‌ ರಿಡ್ಲೆ ಆಮೆಗಳ ಸಂಖ್ಯೆ 32 ಕ್ಕೇರಿದೆ.

ಈ ವಿಶೇಷ ತಳಿಯ ಆಮೆಗಳ ಮೊಟ್ಟೆಗಳ ರಕ್ಷಣೆಯಲ್ಲಿ ಕಳೆದ ಏಳೆಂಟು ವರ್ಷಗಳಿಂದ ತೊಡಗಿಸಿಕೊಂಡಿರುವ ಜೈನ್‌ ಜಟಕ ಯುವಕ ಸಂಘದ ಸ್ವಯಂ ಸೇವಕರ ಗಮನಕ್ಕೆ ಆಮೆ ಮೊಟ್ಟೆ ಇಟ್ಟಿರುವ ಸಂಗತಿ ತಿಳಿದುಬಂದಿದ್ದು, ಅವರು ತಕ್ಷಣವೇ ಅರಣ್ಯ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ, ಸೂಕ್ತ ರಕ್ಷಣೆ ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: HPPL Project | ಆಲಿವ್‌ ರಿಡ್ಲೆ ಕಡಲಾಮೆ ಸಂತತಿಗೆ ಮಾರಕವಾದ ಯೋಜನೆ

ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯೊಂದಿಗೆ ಸ್ವಯಂ ಸೇವಕರ ತಂಡವು ಆಮೆ ಮೊಟ್ಟೆ ಇಟ್ಟ ಸ್ಥಳದಲ್ಲಿ ನೆಟ್‌ ಬ್ಯಾರಿಕೇಡ್ ಕಟ್ಟಿ ರಕ್ಷಣೆ ನೀಡಿದ್ದಾರೆ.

ಆದರೆ, ಹೊನ್ನಾವರ ಪ್ರದೇಶದಲ್ಲಿ ನಡೆಯುತ್ತಿರುವ HPPL ಖಾಸಗಿ ಬಂದರು ಯೋಜನೆಯು ಈ ಆಮೆಗಳ ಸಂತತಿ ಬೆಳೆಯಲು ತೊಡಕಾಗಿದೆ. ಈ ಬಗ್ಗೆ ಪರಿಸರ ಪ್ರೇಮಿಗಳು ಮತ್ತು ಸ್ಥಳೀಯ ಮೀನುಗಾರರು, ಹೋರಾಟಗಾರರು ದನಿಯೆತ್ತುತ್ತಲೇ ಬಂದಿದ್ದಾರೆ.

ಇದನ್ನೂ ಓದಿ: HPPL PROJECT | ಹೊನ್ನಾವರದ ಕಡಲಮಕ್ಕಳ ಬದುಕನ್ನೇ ಮುಳುಗಿಸಿದ ಬಂದರು ಯೋಜನೆ

“ಬಂದರು ಯೋಜನೆಯ ಅಧಿಕಾರಿಗಳು ಇಲ್ಲಿ ರಿಡ್ಲೆ ಆಮೆಗಳು ಮೊಟ್ಟೆ ಇಡಲು ಬರುತ್ತಿಲ್ಲ ಎಂದು ಬಿಂಬಿಸಲು ಶತಪ್ರಯತ್ನ ಮಾಡುತ್ತಿದ್ದು, ಆಮೆಗಳು ಮೊಟ್ಟೆ ಇಡಬಾರದೆಂದು ಮರಳಿನ ಮೇಲೆ ಕೆಮ್ಮಣ್ಣು ಸುರಿಯುವುದು, ಬಾಲ್ಡರ್ಸ್‌ ಕಲ್ಲುಗಳನ್ನು ರಾಶಿ ಹಾಕುವುದು ಮೊದಲಾದ ಕೃತ್ಯಗಳನ್ನು ಎಗ್ಗಿಲ್ಲದೆ ನಡೆಸುತ್ತಿದ್ದಾರೆ. ಅಲ್ಲದೆ, ಈ ಆಮೆಗಳು ಇಲ್ಲಿ ಮೊಟ್ಟೆ ಇಡುತ್ತಿಲ್ಲ ಎಂದು ಸಾಬೀತುಪಡಿಸಲು ಬಂದರು ಕಂಪೆನಿ ಪ್ರಯತ್ನ ಪಡುತ್ತಿದೆ. ಇದೀಗ ಆಮೆಗಳು ಬಂದು ಮೊಟ್ಟೆ ಇಡುತ್ತಿರುವುದರಿಂದ ನಮ್ಮ ವಾದಕ್ಕೆ ಸಾಕ್ಷ್ಯ ದೊರೆತಂತಾಗಿದೆ” ಎಂದು ಸ್ಥಳೀಯ ಹೋರಾಟಗಾರ ಮತ್ತು ಆಮೆಯ ಸಂರಕ್ಷಣೆಯಲ್ಲಿ ತೊಡಗಿಸಿರುವ ವ್ಯಕ್ತಿಯೊಬ್ಬರು ದಿ ಫೆಡೆರಲ್‌ ಕರ್ನಾಟಕಕ್ಕೆ ತಿಳಿಸಿದ್ದಾರೆ.

Read More
Next Story