
Honey Trap | ಬಯಲಾದವರು ಬಚಾವಾದರು? ಬಟ್ಟೆ ತೊಟ್ಟವರು ಬೆತ್ತಲಾದರು?
ವಿಪರ್ಯಾಸವೆಂದರೆ ʼಮಧು ಜಾಲʼದಲ್ಲಿ ಸಿಲುಕಿರುವ 48 ಮಂದಿ ಶಾಸಕರ ಬದಲು ಆ ಷಢ್ಯಂತ್ರದ ರೂವಾರಿಗಳು ಮತ್ತು ಅಂತಹದ್ದೊಂದು ಅನೈತಿಕ, ಅಪರಾಧಿ ಕೃತ್ಯದ ಆರೋಪವನ್ನು ಸರ್ಕಾರದ ವಿರುದ್ಧ ಪ್ರಬಲಾಸ್ತ್ರವಾಗಿ ಪ್ರಯೋಗಿಸುವಲ್ಲಿ ಸೋತ ಪ್ರತಿಪಕ್ಷಗಳ ʼಮಾನʼ ಮತದಾರರ ಎದುರು ಬಯಲಾಯಿತು!
ರಾಜ್ಯ ರಾಜಕಾರಣದಲ್ಲಿ ಇದೀಗ ʼಮಧುʼರ ಚೈತ್ರಕಾಲ..! ಹೌದು, ವಿಧಾನಮಂಡಲದ ಬಜೆಟ್ ಅಧಿವೇಶನದಲ್ಲಿ ಮತ್ತು ಸದನದ ಹೊರಗೂ ಸದ್ಯ ಭರ್ಜರಿ ಸದ್ದು ಮಾಡುತ್ತಿರುವುದು ʼಮಧು ಜಾಲʼ ಅಲಿಯಾಸ್ ಹನಿಟ್ರ್ಯಾಪ್.
ರಾಜ್ಯದ ಮುಂದಿನ ಹನ್ನೆರಡು ತಿಂಗಳ ಅವಧಿಯ ಹಣಕಾಸು ಆಯವ್ಯಯದ ಕುರಿತ ಮೌಲಿಕ ಚರ್ಚೆಯ ಮೂಲಕ ತಮಗೆ ಮತ ನೀಡಿ ವಿಧಾನಸೌಧದ ಮೂರನೇ ಮಹಡಿಗೆ ಕಳಿಸಿರುವ ಮತದಾರರ ಹಿತ ಕಾಯಬೇಕಾದ ಶಾಸಕರು, ಸಚಿವರುಗಳು ಪ್ರತಿಬಾರಿಯಂತೆ ಈ ಬಾರಿಯೂ ಅಭಿವೃದ್ಧಿಗಿಂತ ರಾಜಕೀಯ ಮೇಲಾಟದ ವಿಷಯದಲ್ಲೇ ಕಲಾಪದ ಸಮಯ ಕಳೆದರು. ಅಂತಿಮವಾಗಿ ಹಣಕಾಸು ವಿಧೇಯಕಕ್ಕೆ ಅನುಮೋದನೆ ನೀಡುವ ಮೂಲಕ ಅಧಿವೇಶನಕ್ಕೆ ತೆರೆ ಬೀಳುವ ಕೊನೆಯ ಎರಡು ದಿನ ಉಭಯ ಸದನಗಳ ಸಂಪೂರ್ಣ ಸಮಯವನ್ನು ಹನಿಟ್ರ್ಯಾಪ್ ಹಗರಣವೇ ಬಲಿತೆಗೆದುಕೊಂಡಿತು.
ಆಡಳಿತ ಪಕ್ಷದ ಪ್ರಭಾವಿ ಶಾಸಕರಲ್ಲಿ ಒಬ್ಬರೂ, ಮುಖ್ಯಮಂತ್ರಿಗಳ ಆಪ್ತರೂ ಆದ ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರ ವಿರುದ್ಧ ಅವರದೇ ಪಕ್ಷದ ಪ್ರಭಾವಿ ನಾಯಕರೊಬ್ಬರು ಹನಿಟ್ರ್ಯಾಪ್ ಅಸ್ತ್ರ ಪ್ರಯೋಗಿಸಿದ್ದಾರೆ ಎಂಬ ನಾಚಿಕೆಗೇಡಿನ ಸಂಗತಿ ವಿಧಾನಸಭೆ ಮತ್ತು ಲೋಕಸಭೆಗಳಲ್ಲಿ ಕೋಲಾಹಲಕ್ಕೆ ಕಾರಣವಾಯಿತು.
ಕಲಾಪದಲ್ಲೇ ಸಹಕಾರ ಸಚಿವರು ಸ್ವತಃ ತಮ್ಮ ಮೇಲೆಯೇ ಹನಿಟ್ರ್ಯಾಪ್ ಪ್ರಯೋಗವಾಗಿದೆ. ತಾವು ಮಾತ್ರವಲ್ಲ ಹಾಲಿ ವಿಧಾನಸಭೆಯ 48 ಶಾಸಕರ ಮೇಲೆಯೂ ಹನಿಟ್ರ್ಯಾಪ್ ಪ್ರಯೋಗ ನಡೆದಿದೆ ಎಂದೂ ಅವರು ಅಧಿಕೃತವಾಗಿಯೇ ಸದನದಲ್ಲಿ ಹೇಳಿದ್ದಾರೆ. ಆ ಮೂಲಕ ತಮ್ಮದೇ ಪಕ್ಷದ ಸಚಿವರ ವಿರುದ್ಧ ಪಕ್ಷದ ನಾಯಕರೇ ಹನಿಟ್ರ್ಯಾಪ್ ನಡೆಸಿದ ಆರೋಪದಂತಹ ಕರ್ನಾಟಕದ ವಿಧಾನಮಂಡಲದ ಇತಿಹಾಸದಲ್ಲೇ ಕಂಡರಿಯದ ಹೇಯ ಸ್ಥಿತಿಗೆ ಸದನ ಸಾಕ್ಷಿಯಾಯಿತು.
ಬಯಲಾಗಿದ್ದು ಶಾಸಕರು, ಬೆತ್ತಲಾಗಿದ್ದು ರೂವಾರಿಗಳು!
ಸ್ವಾರಸ್ಯಕರ ಸಂಗತಿ ಎಂದರೆ; ನಿರ್ದಿಷ್ಟವಾಗಿ ಈ ಪ್ರಕರಣದಲ್ಲಿ ಹನಿಟ್ರ್ಯಾಪ್ ಗೆ ಒಳಗಾದೆ ಎಂದು ಹೇಳಿಕೊಂಡಿರುವ ಸಚಿವರ ಆರೋಪದಂತೆ ಅವರದೇ ಪಕ್ಷದ ನಾಯಕರು ಹೀನಾಯ ರಾಜಕಾರಣದ ಷಢ್ಯಂತ್ರ ಮಾಡಿದ್ದಾರೆ ಎನ್ನಲಾಗಿದೆ. ಹಾಗಾಗಿ ಪ್ರಕರಣದಲ್ಲಿ ಷಢ್ಯಂತ್ರ ನಡೆದ ಸಹಕಾರ ಸಚಿವರ ಬದಲಾಗಿ ಅದನ್ನು ನಡೆಸಿದ ತೆರೆಮರೆಯ ಸೂತ್ರದಾರರೇ ಇಡೀ ರಾಜ್ಯದ ಜನರ ಮುಂದೆ ಬಟ್ಟೆತೊಟ್ಟೂ ಬೆತ್ತಲಾದರು.
ಅಷ್ಟೇ ಅಲ್ಲ; ಸದನದಲ್ಲಿ ಆ ಪ್ರಕರಣ ಕೋಲಾಹಲವೆಬ್ಬಿಸಿದಾಗ ಪ್ರತಿಪಕ್ಷ ನಾಯಕರು ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್‌ನ ಒಂದಿಬ್ಬರು ಶಾಸಕರನ್ನು ಹೊರತುಪಡಿಸಿ ಉಳಿದವರು ತಬ್ಬಿಬ್ಬಾಗಿ ಕುಳಿತು, ಸರ್ಕಾರವನ್ನು ಕಟ್ಟಿಹಾಕುವ ಅವಕಾಶವನ್ನು ಕೈಚೆಲ್ಲಿದರು. ಆ ಮೂಲಕ ಹೊಂದಾಣಿಕೆ ರಾಜಕಾರಣದ ಆರೋಪವನ್ನು ತಮ್ಮದೇ ಪಕ್ಷದ ಶಾಸಕರಿಂದಲೇ ಎದುರಿಸಿದ ಪ್ರತಿಪಕ್ಷ ಪಾಳೆಯ ಕೂಡ ಒಂದರ್ಥದಲ್ಲಿ ಬೆತ್ತಲಾಯಿತು.
ಮೊದಲ ದಿನ ಗುರುವಾರ ಸದನದಲ್ಲಿ ಪ್ರಕರಣವನ್ನು ಪ್ರಸ್ತಾಪಿಸಿದ ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಸಚಿವ ರಾಜಣ್ಣ ಅವರ ವಿವರದ ಬಳಿಕ ನ್ಯಾಯಾಂಗ ಅಥವಾ ಸಿಬಿಐ ತನಿಖೆಗೆ ಪಟ್ಟು ಹಿಡಿದ ಶಾಸಕ ಸುನೀಲ್ ಕುಮಾರ್ ಹೊರತುಪಡಿಸಿ ಪ್ರತಿಪಕ್ಷ ನಾಯಕ ಆರ್ ಅಶೋಕ್ ಸೇರಿದಂತೆ ಬಹುತೇಕ ಹಿರಿಯ ನಾಯಕರು ಗಟ್ಟಿಯಾಗಿ ದನಿ ಎತ್ತದೇ ಇರುವುದನ್ನು ಸುನೀಲ್ಕುಮಾರ್ ಸೇರಿದಂತೆ ಹಲವರು ಸದನದಲ್ಲೇ ಆಕ್ಷೇಪಿಸಿದರು. ಒಂದು ಹಂತದಲ್ಲಿ ಸುನೀಲ್ ಕುಮಾರ್ ಅವರು ಆರ್ ಅಶೋಕ್ ವಿರುದ್ಧ ಏರು ದನಿಯಲ್ಲೇ ಅಸಮಾಧಾನ ವ್ಯಕ್ತಪಡಿಸಿ ಇನ್ನು ಈ ಸದನಕ್ಕೆ ಕಾಲಿಡುವುದೇ ಇಲ್ಲ ಎಂದು ಹೊರನಡೆದರು.
ಬಿಜೆಪಿಗೆ ತಿರುಗುಬಾಣವಾಯ್ತು ನಿಷ್ಕ್ರಿಯತೆ
ಬಳಿಕ ವಿಧಾನಸೌಧದ ಪಡಸಾಲೆಯಲ್ಲಿ ಕೂಡ ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರ ನಿಷ್ಕ್ರಿಯತೆ ವಿರುದ್ಧ ಸುನೀಲ್ ಕುಮಾರ್ ಸೇರಿದಂತೆ ಬಿಜೆಪಿಯ ಕೆಲವು ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅದರ ಪರಿಣಾಮವಾಗಿ ಮಾರನೇ ದಿನ, ಶುಕ್ರವಾರ ಅಧಿವೇಶನದ ಕೊನೆಯ ದಿನ ಬಿಜೆಪಿಯ ಹಿರಿಯ ನಾಯಕರು ಚುರುಕಾದರು. ಆದರೆ, ಅಷ್ಟರಲ್ಲಿ ಸರ್ಕಾರ ಪ್ರಕರಣದ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚಿಸುವುದಾಗಿ ಘೋಷಿಸಿ, ಪ್ರತಿಪಕ್ಷಗಳ ಕೈಗೆ ಪ್ರತ್ಯಾಸ್ತ್ರ ಸಿಗದಂತೆ ಮುಂಜಾಗ್ರತೆ ವಹಿಸಿತ್ತು. ಹಾಗಾಗಿ ಅಂತಿಮವಾಗಿ ಬಿಜೆಪಿಯ 18 ಶಾಸಕರ ಅಮಾನತು ಮೂಲಕ ಅಂತಿಮ ದಿನದ ಹೋರಾಟ ಬಿಜೆಪಿಗೇ ತಿರುಗುಬಾಣವಾಯಿತು.
ಒಟ್ಟಾರೆ, ಪ್ರಕರಣ ಆಡಳಿತರೂಢ ಕಾಂಗ್ರೆಸ್ನ ಕುರ್ಚಿ ಕಾದಾಟ ಹನಿಟ್ರ್ಯಾಪ್ ಷಢ್ಯಂತ್ರದ ಮೂಲಕ ಪರಸ್ಪರ ರಾಜಕೀಯ ಬದುಕನ್ನೇ ಬುಡಮೇಲು ಮಾಡುವ ಮಟ್ಟಕ್ಕೆ ವಿಸ್ತರಿಸುವ ಮೂಲಕ ಆ ಪಕ್ಷ, ತನ್ನನ್ನು ಅಭೂತಪೂರ್ವ ಜನಾದೇಶದ ಮೂಲಕ ಅಧಿಕಾರಕ್ಕೆ ತಂದ ಮತದಾರರ ಮುಂದೆ ಸಂಪೂರ್ಣ ಬೆತ್ತಲಾಯಿತು. ಅದೇ ಹೊತ್ತಿಗೆ ಅಂತಹದ್ದೊಂದು ಗಂಭೀರ ಪ್ರಕರಣವನ್ನು ಸರ್ಕಾರದ ವಿರುದ್ಧ ಪರಿಣಾಮಕಾರಿಯಾಗಿ ಬಳಸುವ ಅವಕಾಶವನ್ನು ಕೈಚೆಲ್ಲುವ ಮೂಲಕ ಆ ಷಢ್ಯಂತ್ರದಲ್ಲಿ ಪಾಲುದಾರರು ಎಂಬ ಆರೋಪವನ್ನು ಹೊತ್ತು ಪ್ರತಿಪಕ್ಷಗಳು ಕೂಡ ಜನರ ಮುಂದೆ ಬೆತ್ತಲಾದವು.
ವಿಪರ್ಯಾಸವೆಂದರೆ ʼಮಧು ಜಾಲʼದಲ್ಲಿ ಸಿಲುಕಿರುವ 48 ಮಂದಿ ಶಾಸಕರ ಬದಲು ಆ ಷಢ್ಯಂತ್ರದ ರೂವಾರಿಗಳು ಮತ್ತು ಅಂತಹದ್ದೊಂದು ಅನೈತಿಕ, ಅಪರಾಧಿ ಕೃತ್ಯದ ಆರೋಪವನ್ನು ಸರ್ಕಾರದ ವಿರುದ್ಧ ಪ್ರಬಲಾಸ್ತ್ರವಾಗಿ ಪ್ರಯೋಗಿಸುವಲ್ಲಿ ಸೋತ ಪ್ರತಿಪಕ್ಷಗಳ ʼಮಾನʼ ಮತದಾರರ ಎದುರು ಬಯಲಾಯಿತು!