
ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್‌ಗಳಿಗೆ ಖಡಕ್ ಎಚ್ಚರಿಕೆ ರವಾನಿಸಿದ ಗೃಹ ಸಚಿವ; ಏನದು ಸಂದೇಶ?
ಧರ್ಮಸ್ಥಳ ಪ್ರಕರಣಕ್ಕೆ ಎಸ್‌ಐಟಿ ತನಿಖೆಯಿಂದಲೇ ಉತ್ತರ ಸಿಗಲಿದೆ. ಅದನ್ನು ಬಿಟ್ಟು ನಾನಾಗಲಿ, ಸಿಎಂ ಅವರಾಗಲಿ ಉತ್ತರ ಕೊಡಲಾಗದು. ಸದಸ್ಯರು ಎತ್ತಿರುವ ಅನೇಕ ಪ್ರಶ್ನೆಗಳಿಗೆ ಇಂದು ಉತ್ತರ ಕೊಡಲಾಗದು, ಕೊಡುವುದೂ ಇಲ್ಲ ಪರಮೇಶ್ವರ್ ಹೇಳಿದರು.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆ ಅಧಿವೇಶನದಲ್ಲಿ ಗದ್ದಲ, ಕೋಲಾಹಲದೊಂದಿಗೆ ಸುದೀರ್ಘ ಚರ್ಚೆ ನಡೆಯಿತು. ಶ್ರೀಕ್ಷೇತ್ರದ ಬಗ್ಗೆ ಅಪಪ್ರಚಾರ ನಡೆಸುತ್ತಿರುವ ಯೂಟ್ಯೂಬರ್, ಮಾಧ್ಯಮಗಳ ಮೇಲೆ ನಿಯಂತ್ರಣ ಹೇರುವಂತೆ ಬಿಜೆಪಿ ಸದಸ್ಯರು ಒತ್ತಾಯಿಸಿದ್ದರು. 13ಮಂದಿ ಸದಸ್ಯರು ತಮ್ಮ ಅಭಿಪ್ರಾಯ ಹಂಚಿಕೊಂಡ ಬಳಿಕ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಉತ್ತರ ನೀಡಿದರು.
"ನಾನು ಜವಾಬ್ದಾರಿಯಿಂದ ಉತ್ತರ ಕೊಟ್ಟಿದ್ದೇನೆ. ಧರ್ಮಸ್ಥಳ ಪ್ರಕರಣ ಕುರಿತಂತೆ ತಮ್ಮಿಂದ ಅನೇಕ ವಿಷಯಗಳನ್ನು ಸದಸ್ಯರು ನಿರೀಕ್ಷೆ ಮಾಡಿದ್ದರು. ಆದರೆ, ತನಿಖೆ ನಡೆಯುವಾಗ, ಸತ್ಯ ಹೊರತರಬೇಕು ಎಂದು ಹೊರಟಿರುವಾಗ ಕೆಲ ವಿಚಾರಗಳನ್ನು ಸಾರ್ವಜನಿಕವಾಗಿ ಚರ್ಚೆ ಮಾಡುವಂತಿಲ್ಲ. ಹಾಗಾಗಿ ನಾನು ಎಚ್ಚರಿಕೆಯಿಂದಲೇ ಉತ್ತರ ಕೊಟ್ಟಿದ್ದೇನೆ. ಆಡಳಿತದಲ್ಲಿ ಲಕ್ಷ್ಮಣ ರೇಖೆಯ ಬಗ್ಗೆ ವಿರೋಧ ಪಕ್ಷಗಳ ಸದಸ್ಯರಿಗೂ ಅರಿವಿದೆ ಎಂದು ಭಾವಿಸಿದ್ದೇನೆ. ಗೌಪ್ಯತೆ ಬಗ್ಗೆ ನಾವೆಲ್ಲರೂ ಪ್ರಮಾಣ ಸ್ವೀಕರಿಸಿದ್ದೇವೆ. ಹಾಗಾಗಿ ಎಸ್‌ಐಟಿ ತನಿಖೆಯ ಕೆಲ ವಿಚಾರಗಳನ್ನು ಬಹಿರಂಗಪಡಿಸಿಲ್ಲ ಎಂದು ಹೇಳಿದರು.
ವಿಪಕ್ಷಗಳ ಸದಸ್ಯರ ಭಾವನೆಯನ್ನು ಅರ್ಥ ಮಾಡಿಕೊಂಡಿದ್ದೇನೆ. ಎಸ್ಐಟಿ ರಚನೆಯಲ್ಲಿ ಅಥವಾ ತನಿಖೆಯಲ್ಲಿ ನೂನ್ಯತೆಗಳಿದ್ದರೆ ಸರಿಪಡಿಸಬಹುದು. ಆದರೆ, ತನಿಖೆ ಮುಗಿಯುವವರೆಗೂ ಯಾರೂ ಹೇಳಿಕೆ ನೀಡದಿದ್ದರೆ ನಿಷ್ಪಕ್ಷಪಾತ ತನಿಖೆಗೆ ಸಹಾಯವಾಗಲಿದೆ. ಎಸ್ಐಟಿ ತನಿಖೆ ಶೀಘ್ರವಾಗಿ ಮುಗಿದು, ವರದಿ ಬರಬಹುದು. ಅಲ್ಲಿಯವರೆಗೆ ಯಾರೂ ಕೂಡ ಪ್ರತಿಕ್ರಿಯೆ ಕೊಡುವುದು ಬೇಡ ಎಂದು ಮನವಿ ಮಾಡಿದರು.
ಕೆಲ ಸದಸ್ಯರು ಯುಟ್ಯೂಬರ್‌ಗಳ ಬಗ್ಗೆ ಪ್ರಸ್ತಾಪ ಮಾಡಿದ್ದೀರಿ. ವ್ಯಕ್ತಿ, ಸಂಸ್ಥೆ, ಸರ್ಕಾರಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ನೀಡುತ್ತಿರುವುದನ್ನು ನಾವೂ ಗಮನಿಸಿದ್ದೇವೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಸಮಾಜದ ಸ್ವಾಸ್ಥ್ಯ ಹಾಳಾಗಲಿದೆ ಎಂಬುದು ಸರ್ಕಾರಕ್ಕೂ ಅರ್ಥವಾಗಿದೆ. ತನಿಖೆ ಪ್ರಾರಂಭದಿಂದಲೂ ಏನೆಲ್ಲಾ ಆಗಿದೆ ಎಂಬುದನ್ನು ಗಮನಿಸಿದ್ದೇವೆ. ಇಷ್ಟು ದಿನ ಏನಾಗಿದೆಯೋ ಅದನ್ನು ಇಲ್ಲಿಗೇ ನಿಲ್ಲಿಸಿ, ಮುಂದುವರಿಸಿದರೆ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದು ಗೃಹ ಸಚಿವರು ಎಚ್ಚರಿಕೆ ನೀಡಿದರು.
ಧರ್ಮಸ್ಥಳದಲ್ಲಿ ಇಬ್ಬರು ಯೂಟ್ಯೂಬರ್ ಗಳ ಜಗಳದ ಬಳಿಕ ಪರಸ್ಪರ ಪ್ರಕರಣ ದಾಖಲಾಗಿ, ಕೆಲವರನ್ನು ಬಂಧಿಸಲಾಗಿದೆ. ಸಾಮಾಜಿಕ ಮಾಧ್ಯಮಗಳು ಹಾಕುವ ಒಂದು ಪೋಸ್ಟ್ ಲಕ್ಷಾಂತರ ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡಲಿದೆ. ಹಾಗಾಗಿ ನೀವು ಮಾಡುವ ಪೋಸ್ಟ್ ಹಾಕುವ ಮೊದಲು ಸ್ವಯಂ ನಿಯಂತ್ರಣ ಹಾಕಿಕೊಳ್ಳಬೇಕು. ಇಲ್ಲವೇ ಸರ್ಕಾರ ಅದನ್ನು ನಿಯಂತ್ರಿಸಬೇಕಾಗುತ್ತದೆ. ಈಗಾಗಲೇ ನಕಲಿ ಸುದ್ದಿಗಳ ನಿಯಂತ್ರಣಕ್ಕೆ ಮಸೂದೆ ತರಲು ಮುಂದಾಗಿದೆ. ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುವುದು ಎಂದು ಪರಮೇಶ್ವರ್ ಹೇಳಿದರು.
ಧರ್ಮಸ್ಥಳ ಪ್ರಕರಣಕ್ಕೆ ಎಸ್‌ಐಟಿ ತನಿಖೆಯಿಂದಲೇ ಉತ್ತರ ಸಿಗಲಿದೆ. ಅದನ್ನು ಬಿಟ್ಟು ನಾನಾಗಲಿ, ಸಿಎಂ ಅವರಾಗಲಿ ಉತ್ತರ ಕೊಡಲಾಗದು. ಸದಸ್ಯರು ಎತ್ತಿರುವ ಅನೇಕ ಪ್ರಶ್ನೆಗಳಿಗೆ ಇಂದು ಉತ್ತರ ಕೊಡಲಾಗದು, ಕೊಡುವುದೂ ಇಲ್ಲ ಎಂದು ಹೇಳಿದರು.
ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುವುದಿಲ್ಲ ಎಂದು ಹೇಳಿರುವುದನ್ನು ನಾನು ಸ್ವಾಗತಿಸುತ್ತೇನೆ. ನಿಮ್ಮ ಮಾತಿಗೆ ಬದ್ಧವಾಗಿರಬೇಕು. ನಾವು ಎಲ್ಲದರಲ್ಲೂ ರಾಜಕೀಯ, ಧರ್ಮ ತರುವುದಾದರೆ ಕಾನೂನಿದೆ. ಅದೇ ತನ್ನ ಕೆಲಸ ಮಾಡಲಿದೆ ಎಂದು ಹೇಳಿದರು.
ಧರ್ಮಸ್ಥಳಕ್ಕೆ ಸಿಎಂ, ಡಿಸಿಎಂ ಎಲ್ಲರೂ ಹೋಗಬೇಕು ಎಂಬ ಸಲಹೆ ನೀಡಿದ್ದೀರಿ, ನಾವೆಲ್ಲರೂ ಹೋಗಿದ್ದೇವೆ. ನಾವೇನು ಹಿಂದುಗಳಲ್ವಾ? ಎಂದು ಪ್ರಶ್ನಿಸಿದರು. ಆಗ ಪ್ರತಿಪಕ್ಷ ನಾಯಕ ಅಶೋಕ್ ಎದ್ದುನಿಂತು, ನಿಮ್ಮ ಹೆಸರಿಗೆ ತಕ್ಕಂತೆ ನೀವಿಲ್ಲ ಎಂದು ಚಟಾಕಿ ಹಾರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್ ಅವರು, ನಮ್ಮ ಮುಂದೆ ಸಂಘರ್ಷ, ಸಂಯಮದ ದಾರಿ ಇದೆ, ನಾನು ಎರಡನೆಯದನ್ನೂ ಆಯ್ಕೆ ಮಾಡಿಕೊಂಡಿದ್ದೇನೆ ಎಂದು ನಯವಾಗಿ ಹೇಳಿದರು.
ನಾನು ಆತ್ಮಸಾಕ್ಷಿಯಿಂದ ಕೆಲಸ ಮಾಡುತ್ತಿದ್ದೇನೆ. ಆತ್ಮಸಾಕ್ಷಿಯಿಂದ ಎಸ್ಐಟಿ ಮಾಡಿದ್ದೇವೆ. ಅತ್ಮಸಾಕ್ಷಿಯಿಂದ ಈ ರಾಜ್ಯ, ಸಮಾಜಕ್ಕೆ ಉತ್ತರ ನೀಡುತ್ತೇವೆ. ಇದನ್ನು ಗುರುತು ಮಾಡಿಟ್ಟುಕೊಳ್ಳಿ. ಎಸ್ಐಟಿಯಿಂದಲೇ ಇದಕ್ಕೆಲ್ಲಾ ಉತ್ತರ ಸಿಗಲಿದೆ ಎಂದು ಹೇಳಿದರು.