
ಮದ್ದೂರು ಗಲಭೆ: ಹಿಂದೂ ಸಂಘಟನೆಗಳ ಪಾತ್ರವೂ ಇದೆ ಎಂದು ಗೃಹ ಸಚಿವ ಪರಮೇಶ್ವರ್
ಪೊಲೀಸರು ಶಾಂತಿ ಕಾಪಾಡಲು ಸಾಧ್ಯವಾದಷ್ಟು ಪ್ರಯತ್ನಿಸಿದ್ದಾರೆ. ಸಂಘಟನೆಗಳ ಮನವೊಲಿಸಲು ಯತ್ನಿಸಿದ್ದಾರೆ, ಆದರೆ ಪರಿಸ್ಥಿತಿ ಕೈಮೀರಿದಾಗ ಅನಿವಾರ್ಯವಾಗಿ ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ಸಚಿವರು ಸಮರ್ಥಿಸಿಕೊಂಡರು.
ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕಲ್ಲು ತೂರಾಟದ ಘಟನೆಗೆ ಸಂಬಂಧಿಸಿದಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ವಿಭಿನ್ನ ಹೇಳಿಕೆಯೊಂದನ್ನು ನೀಡಿದ್ದಾರೆ. ಈ ಕೃತ್ಯದಲ್ಲಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಭಾಗಿಯಾಗಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಘಟನೆಗೆ ಸಂಬಂಧಿಸಿದಂತೆ ಈಗಾಗಲೇ 20ಕ್ಕೂ ಹೆಚ್ಚು ಜನರನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ. ಈ ಕಲ್ಲು ತೂರಾಟದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬುದು ಪ್ರಾಥಮಿಕ ಹಂತದಲ್ಲಿ ತಿಳಿದುಬಂದಿಲ್ಲ. ಆದರೆ, ಪೊಲೀಸರ ಪ್ರಕಾರ, ಬಂಧಿತರಲ್ಲಿ ಹಿಂದೂಪರ ಸಂಘಟನೆಗಳಿಗೆ ಸೇರಿದವರೂ ಇದ್ದಾರೆ" ಎಂದು ಹೇಳಿದ್ದಾರೆ.
ಪೊಲೀಸರು ಶಾಂತಿ ಕಾಪಾಡಲು ಸಾಧ್ಯವಾದಷ್ಟು ಪ್ರಯತ್ನಿಸಿದ್ದಾರೆ. ಸಂಘಟನೆಗಳ ಮನವೊಲಿಸಲು ಯತ್ನಿಸಿದ್ದಾರೆ, ಆದರೆ ಪರಿಸ್ಥಿತಿ ಕೈಮೀರಿದಾಗ ಅನಿವಾರ್ಯವಾಗಿ ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ಸಚಿವರು ಸಮರ್ಥಿಸಿಕೊಂಡರು. "ಸದ್ಯ ಬಂಧನದಲ್ಲಿರುವವರ ವಿರುದ್ಧ ತನಿಖೆ ನಡೆಯುತ್ತಿದ್ದು, ಕೃತ್ಯದಲ್ಲಿ ಭಾಗಿಯಾಗಿರುವುದು ಸಾಬೀತಾದರೆ, ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ತನಿಖೆ ಪೂರ್ಣಗೊಂಡ ನಂತರವಷ್ಟೇ ಸತ್ಯಾಂಶ ಹೊರಬರಲಿದೆ," ಎಂದು ಅವರು ಸ್ಪಷ್ಟಪಡಿಸಿದ್ದಾರೆ.