
ಧರ್ಮಸ್ಥಳ ಎಸ್‌ಐಟಿ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ ಏನು?
ಸಾಮಾನ್ಯವಾಗಿ ಠಾಣಾ ಮಟ್ಟದಲ್ಲಿ ದೂರು ಬಂದಾಗ ಎಫ್‌ಐಆರ್ ದಾಖಲಿಸಿ ತನಿಖೆ ಮಾಡುತ್ತಾರೆ. ಆದರೆ, ಪ್ರಕರಣ ಹೆಚ್ಚು ಬೆಳೆದಾಗ, ತನಿಖೆಯ ತೀವ್ರತೆಯನ್ನೂ ಹೆಚ್ಚಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸರಣಿ ಅಸಹಜ ಸಾವುಗಳ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (SIT) ರಚಿಸಿರುವ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು, ಪ್ರಕರಣದ ಗಂಭೀರತೆಯನ್ನು ಅರಿತು ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಈ ಎಸ್‌ಐಟಿಯ ತನಿಖಾ ವ್ಯಾಪ್ತಿಯ ಬಗ್ಗೆ ಇದ್ದ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
"ನಾವು ಈ ಹಿಂದೆ, ಪ್ರಾಥಮಿಕ ತನಿಖೆ ನಡೆಸಿ, ಅಗತ್ಯ ಬಿದ್ದರೆ ಎಸ್‌ಐಟಿ ರಚಿಸುತ್ತೇವೆ ಎಂದು ಹೇಳಿದ್ದೆವು. ಆದರೆ, ಈ ಪ್ರಕರಣವು ಕೇವಲ ಒಂದು ಠಾಣಾ ಮಟ್ಟದ ದೂರಿನಂತೆ ಉಳಿಯಲಿಲ್ಲ. ದಿನದಿಂದ ದಿನಕ್ಕೆ ಇದರ ತೀವ್ರತೆ ಹೆಚ್ಚಾಗುತ್ತಾ ಹೋಯಿತು. ಹಾಗಾಗಿ, ಇದೊಂದು ಸಣ್ಣ ವಿಚಾರವಲ್ಲ ಎಂದು ಪರಿಗಣಿಸಿ, ಉನ್ನತ ಮಟ್ಟದ ತನಿಖೆ ನಡೆಸಲೇಬೇಕು ಎಂಬ ತೀರ್ಮಾನಕ್ಕೆ ಬಂದೆವು," ಎಂದು ಹೇಳಿದರು.
"ಸಾಮಾನ್ಯವಾಗಿ ಠಾಣಾ ಮಟ್ಟದಲ್ಲಿ ದೂರು ಬಂದಾಗ ಎಫ್‌ಐಆರ್ ದಾಖಲಿಸಿ ತನಿಖೆ ಮಾಡುತ್ತಾರೆ. ಆದರೆ, ಪ್ರಕರಣ ಹೆಚ್ಚು ಬೆಳೆದಾಗ, ತನಿಖೆಯ ತೀವ್ರತೆಯನ್ನೂ ಹೆಚ್ಚಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಮತ್ತು ನಾನು ಚರ್ಚಿಸಿ, ಹಿರಿಯ ಐಪಿಎಸ್ ಅಧಿಕಾರಿಯ ನೇತೃತ್ವದಲ್ಲಿ ಎಸ್‌ಐಟಿ ರಚಿಸಲು ತೀರ್ಮಾನಿಸಿ ಆದೇಶ ಹೊರಡಿಸಿದ್ದೇವೆ," ಎಂದು ಅವರು ತಿಳಿಸಿದರು.
ಎಸ್‌ಐಟಿಯ ತನಿಖೆಯ ವ್ಯಾಪ್ತಿಯ ಬಗ್ಗೆ ಸ್ಪಷ್ಟನೆ ನೀಡಿದ ಪರಮೇಶ್ವರ ಅವರು, "ಈ ಎಸ್‌ಐಟಿ ತನಿಖೆಗೂ, ಈ ಹಿಂದೆ ನಡೆದಿದ್ದ ಸೌಜನ್ಯ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ನಾವು ಕೇವಲ ಇತ್ತೀಚೆಗೆ ದಾಖಲಾದ ಹೊಸ ಪ್ರಕರಣದ ಬಗ್ಗೆ ಮಾತ್ರ ತನಿಖೆ ನಡೆಸಲು 'ಟರ್ಮ್ಸ್ ಆಫ್ ರೆಫರೆನ್ಸ್' (ತನಿಖಾ ವ್ಯಾಪ್ತಿ) ನಿಗದಿಪಡಿಸಿದ್ದೇವೆ," ಎಂದು ಖಚಿತಪಡಿಸಿದ್ದಾರೆ.