Naxal Encounter | ವಿಕ್ರಮ್ ಗೌಡ ಹತ್ಯೆ: ಕಾರ್ಯಾಚರಣೆ ಬಗ್ಗೆ ಗೃಹ ಸಚಿವರು ಹೇಳಿದ್ದೇನು?
ನಕ್ಸಲ್ ನಿಗ್ರಹ ಪಡೆ (ಎಎನ್‌ಎಫ್) ಸೋಮವಾರ ರಾತ್ರಿ ಉಡುಪಿ ಜಿಲ್ಲೆಯ ಹೆಬ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಕರ್ನಾಟಕ ನಕ್ಸಲ್ ನಾಯಕ ವಿಕ್ರಮ್ ಗೌಡನನ್ನು ಎನ್‌ಕೌಂಟರ್ ಮಾಡಲಾಗಿದೆ
ಸೋಮವಾರ ರಾತ್ರಿ ನಡೆದ ನಕ್ಸಲರು ಮತ್ತು ನಕ್ಸಲ್ ನಿಗ್ರಹ ಪಡೆ(ಎಎನ್‌ಎಫ್) ನಡುವಿನ ಮುಖಾಮುಖಿಯಲ್ಲಿ ಮಾವೋವಾದಿ ನಕ್ಸಲ್ ಸಂಘಟನೆಯ ಕರ್ನಾಟಕ ನಾಯಕ ವಿಕ್ರಮ್ ಗೌಡ ಬಲಿಯಾಗಿದ್ದು, ಈ ಬಗ್ಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅಧಿಕೃತವಾಗಿ ದೃಢಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಕ್ರಮ್ ಗೌಡ ಎಂಬ ಗ್ರೇಡೆಡ್ ನಕ್ಸಲ್‌ನನ್ನು ನಕ್ಸಲ್ ನಿಗ್ರಹ ಪಡೆ ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ. ಕಳೆದ 20 ವರ್ಷಗಳಿಂದ ಆತನನ್ನು ಪೊಲೀಸರು ಹುಡುಕುತ್ತಿದ್ದರು. ಆತ ತಪ್ಪಿಸಿಕೊಂಡು ಓಡಾಡುತ್ತಿದ್ದ. ಈ ಹಿಂದೆ ನಡೆದ ಅನೇಕ ಎನ್ಕೌಂಟರ್ಗಳಲ್ಲಿ ವಿಕ್ರಂ ಗೌಡ ತಪ್ಪಿಸಿಕೊಂಡಿದ್ದ ಎಂದರು.
ಸೋಮವಾರ ಸಂಜೆ ವಿಕ್ರಂ ಗೌಡ ಎನ್‌ಕೌಂಟರ್ ಆಗಿದೆ. ಆತನ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದರು. ಸೋಮವಾರ ರಾತ್ರಿ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಮಾಡಿದ್ದಾರೆ. ಆತ ಗುಂಡಿನ ದಾಳಿ ಮಾಡಿದಾಗ ಪೊಲೀಸರು ಪ್ರತಿ ದಾಳಿ ನಡೆಸಿದ್ದಾರೆ. ಆತನ ಜತೆಯಲ್ಲಿದ್ದ ಇಬ್ಬರು ಮೂವರು ಓಡಿ ಹೋಗಿದ್ದಾರೆ. ಆ ಭಾಗದಲ್ಲಿ ಕೂಂಬಿಂಗ್ ಮುಂದುವರಿದಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ನಾವು ನಕ್ಸಲ್ ಕಾಲ ಮುಗಿಯಿತು ಅಂದುಕೊಂಡಿದ್ದೆವು. ಆದರೆ, ಕಳೆದ ವಾರ ರಾಜು ಮತ್ತು ಲತಾ ಎಂಬ ನಕ್ಸಲರು ಪತ್ತೆ ಆಗಿದ್ದರು. ನಂತರ ಅವರಿಬ್ಬರೂ ತಪ್ಪಿಸಿಕೊಂಡು ಹೋದರೆಂದು ಕೂಂಬಿಂಗ್ ಆಪರೇಷನ್ ನಡೆಸಲಾಯಿತು. ಕಳೆದ ಒಂದು ವಾರದಿಂದ ಕೂಂಬಿಂಗ್ ನಡೆಯುತ್ತಿತ್ತು. ಆಗ ಇದ್ದಕಿದ್ದ ಹಾಗೆ ವಿಕ್ರಂ ಗೌಡ ಬರುವ ಮಾಹಿತಿ ಸಿಕ್ಕಿತ್ತು. ಆತನ ಎನ್‌ಕೌಂಟರ್ ಮಾಡುವುದು ಆ ಸಂದರ್ಭದಲ್ಲಿ ಪೊಲೀಸರಿಗೆ ಅನಿವಾರ್ಯವಾಯಿತು ಎಂದು ಗೃಹ ಸಚಿವರು ಮಾಹಿತಿ ನೀಡಿದರು.
ನಕ್ಸಲ್ ನಿಗ್ರಹ ಪಡೆ (ಎಎನ್‌ಎಫ್) ಸೋಮವಾರ ರಾತ್ರಿ ಉಡುಪಿ ಜಿಲ್ಲೆಯ ಹೆಬ್ರಿ ಪೊಲೀಸ್ ಠಾಣೆ ವ್ಯಾಪ್ತಿ ನಡೆಸಿದ ಎನ್‌ಕೌಂಟರ್‌ನಲ್ಲಿ ವಿಕ್ರಮ್ ಗೌಡ ಸಾವಿಗೀಡಾಗಿದ್ದಾನೆ. ಕರ್ನಾಟಕ, ತಮಿಳುನಾಡು ಮತ್ತು ಕೇರಳ ಗಡಿ ಭಾಗಗಳ ಪೊಲೀಸರ "ವಾಂಟೆಡ್ ಪಟ್ಟಿಯಲ್ಲಿದ್ದ ವಿಕ್ರಮ್ ಗೌಡ ನಕ್ಸಲರ "ನೇತ್ರಾವತಿ" ತಂಡದಲ್ಲಿ ನಾಯಕನಾಗಿದ್ದ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಯಡಗುಂದ ಗ್ರಾಮಕ್ಕೆ ಕಳೆದ ವಾರ ನಕ್ಸಲರು ಭೇಟಿ ನೀಡಿದ್ದ ಬಗ್ಗೆ ಮಾಹಿತಿ ಕಲೆಹಾಕಿದ್ದ ಎಎನ್ ಎಫ್ ತಂಡ ಕೂಂಬಿಂಗ್ ಕಾರ್ಯಾಚರಣೆ ಹೆಚ್ಚಿಸಿತ್ತು. ಸೋಮವಾರ ರಾತ್ರಿ 5 ಮಂದಿ ನಕ್ಸಲರ ತಂಡ ಉಡುಪಿ ಜಿಲ್ಲೆಯ ಹೆಬ್ರಿ ಪಕ್ಕದ ಸೀತಂಬೈಲು ಸಮೀಪ ಅಕ್ಕಿ ಮತ್ತಿತರ ವಸ್ತುಗಳನ್ನು ಸಂಗ್ರಹಿಸಲು ಬಂದಿದೆ ಎಂಬ ಮಾಹಿತಿ ಆಧರಿಸಿ ದಾಳಿ ನಡೆಸಿದರು. ಆ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಹತನಾಗಿದ್ದಾನೆ. ಆತನ ಜತೆಗಿದ್ದ ಇನ್ನೂ ಐವರು ಸ್ಥಳದಿಂದ ಪರಾರಿಯಾಗಿದ್ದು, ಶೋಧಕಾರ್ಯ ಮುಂದುವರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಂಡಿನ ಚಕಮಕಿಯಲ್ಲಿ ವಿಕ್ರಂ ಗೌಡ ಮಾತ್ರವಲ್ಲದೆ ಇನ್ನೂ ಇಬ್ಬರು ನಕ್ಸಲರಿಗೆ ಗುಂಡೇಟು ಬಿದ್ದಿದೆ ಎಂಬ ಮಾಹಿತಿ ಇದೆ. ನಕ್ಸಲ್ ಸುಂದರಿ ಹಾಗೂ ಮತ್ತೊಬ್ಬರ ಯುವತಿಗೆ ಗುಂಡೇಟು ಬಿದ್ದಿದೆ ಎನ್ನಲಾಗಿದೆ.