
H N valley | ಕೋಲಾರ ಕೆರೆಗಳಿಗೆ ಸಂಸ್ಕರಿತ ತ್ಯಾಜ್ಯ ನೀರು ಹರಿಸಲು ಸಂಪುಟ ಒಪ್ಪಿಗೆ
ಚಿಕ್ಕಬಳ್ಳಾಪುರದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 237 ಕೋಟಿ ರೂ.ವೆಚ್ಚದ ತ್ಯಾಜ್ಯ ನೀರು ಶುದ್ದೀಕರಿಸುವ ಹರಿಸುವ ಎಚ್.ಎನ್.ವ್ಯಾಲಿ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ಬೆಂಗಳೂರಿನ ಹೆಬ್ಬಾಳ-ನಾಗವಾರ ಕೆರೆಯ ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಶಿಡ್ಲಘಟ್ಟ ಮತ್ತು ಚಿಂತಾಮಣಿ ತಾಲ್ಲೂಕಿನ 164 ಕೆರೆಗಳಿಗೆ ತುಂಬಿಸಲು 237ಕೋಟಿ ರೂ. ವೆಚ್ಚದ ಎಚ್.ಎನ್. ವ್ಯಾಲಿ ಯೋಜನೆಗೆ ಸಚಿವ ಸಂಪುಟ ಸಭೆ ಬುಧವಾರ ಅನುಮೋದನೆ ನೀಡಿದೆ.
ಚಿಕ್ಕಬಳ್ಳಾಪುರದ ನಂದಿ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ನೀರಾವರಿ ಯೋಜನೆಗಳಿಗೆ ಒಟ್ಟು 1,154 ಕೋಟಿ ರೂ. ಬಿಡುಗಡೆ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ. ಈ ಅನುದಾನದಲ್ಲಿ 237 ಕೋಟಿ ರೂ. ಗಳನ್ನು ತ್ಯಾಜ್ಯ ನೀರು ಶುದ್ದೀಕರಿಸುವ ಎಚ್.ಎನ್.ವ್ಯಾಲಿ ಯೋಜನೆಗೆ ಮೀಸಲಿರಿಸಲಾಗಿದೆ. ಹೀಗಿರುವಾಗ ಎಚ್.ಎನ್. ವ್ಯಾಲಿ ಯೋಜನೆ ಏನು?, ಯೋಜನೆಯಿಂದ ಯಾವ ಜಿಲ್ಲೆಗಳಿಗೆ ಲಾಭ ಎಂಬ ಮಾಹಿತಿ ಇಲ್ಲಿದೆ.
ಸತತ ಬರಗಾಲದಿಂದ ಅಂತರ್ಜಲ ಪಾತಾಳಕ್ಕೆ ಕುಸಿದಿರುವ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಕೆರೆಗಳಿಗೆ ಬೆಂಗಳೂರಿನ ಸಂಸ್ಕರಿಸಿದ ತ್ಯಾಜ್ಯ ನೀರು ಹರಿಸುವ ಸಲುವಾಗಿ ರಾಜ್ಯ ಸರ್ಕಾರ ಹೆಬ್ಬಾಳ-ನಾಗವಾರ(ಎಚ್.ಎನ್.ವ್ಯಾಲಿ) ಏತ ನೀರಾವರಿ ಯೋಜನೆ ಜಾರಿಗೊಳಿಸಿದೆ.
ಯಾವುದೇ ನದಿ, ಶಾಶ್ವತ ನೀರಾವರಿ ಯೋಜನೆಗಳು ಇಲ್ಲದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುಮಾರು 44 ಕೆರೆಗಳನ್ನು ತುಂಬಿಸಿ ರೈತರಿಗೆ ಅನುಕೂಲ ಮಾಡಿಕೊಡುವ ಸದುದ್ದೇಶದಿಂದ 2016 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಮಾರು 900 ಕೋಟಿ ರೂ. ವೆಚ್ಚದ ಎಚ್.ಎನ್.ವ್ಯಾಲಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಮೊದಲ ಹಂತವಾಗಿ ಸುಮಾರು 350 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದರು.
ಮೂರು ಹಂತದ ಶುದ್ದೀಕರಣಕ್ಕೆ ಆಗ್ರಹ
ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಆಯ್ದ ಕೆರೆಗಳಿಗೆ ಎಚ್.ಎನ್.ವ್ಯಾಲಿ ಮತ್ತು ಕೆ.ಸಿ ವ್ಯಾಲಿ ಯೋಜನೆಯಡಿ ಹರಿಸುತ್ತಿರುವ ನೀರನ್ನು ಮೂರು ಹಂತದಲ್ಲಿ ಶುದ್ದೀಕರಿಸಬೇಕು. ಈ ಬಗ್ಗೆ ಮುಖ್ಯಮಂತ್ರಿ, ನಗರಾಭಿವೃದ್ಧಿ ಸಚಿವರು, ಸಣ್ಣ ನೀರಾವರಿ ಸಚಿವರು ಮತ್ತು ಪರಿಸರ ಸಚಿವರಿಗೆ ನಿರ್ದೇಶನ ನೀಡುವಂತೆ ಶಾಶ್ವತ ನೀರಾವರಿ ಹೋರಾಟ ಸಮಿತಿ ನೇತೃತ್ವದ ನಿಯೋಗ ಇತ್ತೀಚೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು.
ಕೊಳಚೆ ಮತ್ತು ಒಳಚರಂಡಿ ಸಂಸ್ಕರಣಾ ಮಾನದಂಡಗಳ ಕೈಪಿಡಿಯ ಪ್ರಕಾರ ಮುಖ್ಯ ಶಿಫಾರಸುಗಳಲ್ಲಿ ಅಗತ್ಯವಿರುವ ಸಂಸ್ಕರಣಾ ತಂತ್ರಗಳನ್ನು ಅನುಸರಿಸುವ ಮೂಲಕ ಒಳಚರಂಡಿ ನೀರಿನ ಕಡ್ಡಾಯ ಮೂರು ಹಂತಗಳಲ್ಲಿ ಸಂಸ್ಕರಣೆ ಮಾಡಬೇಕಾಗಿದೆ. ನಿರ್ದಿಷ್ಟವಾಗಿ ಬೆಂಗಳೂರಿನ ಕೊಳಚೆ ಮತ್ತು ಒಳಚರಂಡಿ ನೀರಿಗೆ ತೃತೀಯ ಹಂತದ ಸಂಸ್ಕರಣೆ ಅತ್ಯಗತ್ಯ ಎಂದು ಪ್ರತಿಪಾದಿಸಿತ್ತು.
ಆದರೆ, ರಾಜ್ಯ ಸರ್ಕಾರ ಸಂಪೂರ್ಣವಾಗಿ ಮಾರ್ಗಸೂಚಿ ಉಲ್ಲಂಘಿಸಿದೆ. ಎಚ್‌ಎನ್ ವ್ಯಾಲಿಯ ದ್ವಿತೀಯ ಹಂತದಲ್ಲಿ ಮಾತ್ರ ಸಂಸ್ಕರಿಸಿದ ನೀರನ್ನು ಕೆರೆಗಳಿಗೆ ಹರಿಸುತ್ತಿದೆ. ಅಂತರ್ಜಲ ವಿಷಪೂರಿತವಾಗಿ ಜನ ಮತ್ತು ಜಾನುವಾರುಗಳ ಜೀವಕ್ಕೆ ಸರಿಪಡಿಸಲಾಗದ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಬರಪೀಡಿತ ಜಿಲ್ಲೆಗಳನ್ನು ಉಳಿಸಲು ತೃತೀಯ ಹಂತದ ಸಂಸ್ಕರಣೆಗೆ ಎಸ್‌ಟಿಪಿ ಘಟಕಗಳನ್ನು ಉನ್ನತೀಕರಣಗೊಳಿಸಲು ಅಗತ್ಯವಾದ ಹಣ ಮಂಜೂರು ಮಾಡಬೇಕು. ಈ ಬಗ್ಗೆ ಮುಖ್ಯಮಂತ್ರಿ ಮತ್ತು ಸಚಿವರಿಗೆ ನಿರ್ದೇಶನ ನೀಡಲು ಮಧ್ಯಸ್ಥಿಕೆ ವಹಿಸಬೇಕು ಎಂದು ನಿಯೋಗವು ಕೋರಿತ್ತು.
ಈ ಗ ರಾಜ್ಯ ಸರ್ಕಾರ, ಹೆಬ್ಬಾಳ- ನಾಗವಾರ ಕಣಿವೆಯ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಶಿಡ್ಲಘಟ್ಟ ಅಮಾನಿಕೆರೆಯಿಂದ ಶಿಡ್ಲಘಟ್ಟ ತಾಲೂಕಿನ 45 ಕೆರೆಗಳಿಗೆ ಹಾಗೂ ಚಿಂತಾಮಣಿ ತಾಲೂಕಿನ 119 ಕೆರೆಗಳಿಗೆ ಒಟ್ಟು 164 ಕೆರೆಗಳಿಗೆ ನೀರು ತುಂಬಿಸುವ 237.10 ಕೋಟಿ ರೂ. ಅಂದಾಜು ಮೊತ್ತದ ಯೋಜನೆಗೆ ಒಪ್ಪಿಗೆ ನೀಡಿದೆ.