ಬೆಳಗಾವಿ ʼಗಾಂಧಿ ಭಾರತʼ | ವಿವಾದದ ಮಧ್ಯೆ ಐತಿಹಾಸಿಕ ಕಾಂಗ್ರೆಸ್ ಅಧಿವೇಶನ
x

ಬೆಳಗಾವಿ ʼಗಾಂಧಿ ಭಾರತʼ | ವಿವಾದದ ಮಧ್ಯೆ ಐತಿಹಾಸಿಕ ಕಾಂಗ್ರೆಸ್ ಅಧಿವೇಶನ

ಶತಮಾನದ ಬಳಿಕ ಬೆಳಗಾವಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಅಧಿವೇಶನದ ಸಂಪೂರ್ಣ ಚಿತ್ರಣ ಇಲ್ಲಿದೆ. ಇಡೀ ದೇಶದ ಗಮನ ಸೆಳೆದ ಕಾರ್ಯಕ್ರಮ ವಿವಾದಕ್ಕೂ ಕಾರಣವಾಗಿದೆ. ಏನದು ವಿವಾದ? ಇಲ್ಲಿದೆ ಮಾಹಿತಿ.


ಶತಮಾನದ ಬಳಿಕ ಬೆಳಗಾವಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಅಧಿವೇಶನ ಇಡೀ ದೇಶದ ಗಮನ ಸೆಳೆಯುತ್ತಿದೆ. ಜೊತೆಗೆ ವಿವಾದಕ್ಕೂ ಕಾರಣವಾಗಿದೆ. ಶತಮಾನದ ಹಿಂದೆ ಸ್ವಾತಂತ್ರ್ಯ ಹೋರಾಟವನ್ನು ನಿರ್ಣಾಯಕ ಹಂತಕ್ಕೆ ತೆಗೆದುಕೊಂಡು ಹೋಗಲು ಬೆಳಗಾವಿಯಲ್ಲಿ ನಡೆದಿದ್ದ 39ನೇ ಕಾಂಗ್ರೆಸ್ ಅಧಿವೇಶನ ನಿರ್ಣಾಯಕ ಪಾತ್ರ ವಹಿಸಿತ್ತು. ಮಹಾತ್ಮ ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಏಕೈಕ ಅಧಿವೇಶನವದು. ಹೀಗಾಗಿ ಬೆಳಗಾವಿ ಅಧಿವೇಶನಕ್ಕೆ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಪುಟಗಳಲ್ಲಿ ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ.

ಇತಿಹಾಸವನ್ನು ಮರುಕಳಿಸುವ ಮೂಲಕ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಎಐಸಿಸಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆಸುತ್ತಿದೆ. ಶತಮಾನದ ಇತಿಹಾಸವನ್ನು ಜನರ ಮುಂದೆ ಮತ್ತೊಮ್ಮೆ ಸಾದರಪಡಿಸಿ ಕಳೆದುಕೊಂಡಿರುವ ಶಕ್ತಿಯನ್ನು ಪಡೆಯುವುದು ಕಾಂಗ್ರೆಸ್​ನ ರಾಜಕೀಯ ತಂತ್ರವಾಗಿದೆ ಎಂದು ಬಿಜೆಪಿ ಈ ಸಮಾವೇಶಕ್ಕೆ ಪ್ರತಿಕ್ರಿಯೆಯನ್ನು ಕೊಟ್ಟಿದೆ. ಇಂದು ಬೆಳಗಾವಿಯಲ್ಲಿ ಏನೇನಾಯ್ತು? ಐತಿಹಾಸಿಕ ಕಾರ್ಯಕ್ರಮದ ಸಂದರ್ಭದಲ್ಲಿ ವಿವಾದಕ್ಕೆ ಕಾರಣವಾಗಿದ್ದಾದರೂ ಏನು? ಎಂಬುದರ ಸಂಪೂರ್ಣ ಚಿತ್ರಣ ಇಲ್ಲಿದೆ.

ವೀರಸೌಧದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣ

ಬಿಜೆಪಿ ಆರೋಪ ಅದೇನೆ ಇದ್ದರೂ ಹಿಂದಿನಂತೆ ಈಗ (ಡಿ.26 ರಂದು) ನಡೆಯುತ್ತಿರುವ ಅಧಿವೇಶನವೂ ಇತಿಹಾಸದ ಪುಟಗಳಲ್ಲಿ ದಾಖಲಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಕಾಂಗ್ರೆಸ್ ಅಧಿವೇಶನ ನಡೆಯುವ (ಡಿ.27) ಮುನ್ನಾದಿನ ಮಹತ್ವದ ಹಲವು ಸರಣಿ ಕಾರ್ಯಕ್ರಮಗಳನ್ನು ರಾಜ್ಯ ಕಾಂಗ್ರೆಸ್ ಬೆಳಗಾವಿಯಲ್ಲಿ ಹಮ್ಮಿಕೊಂಡಿತ್ತು.

ಇಂದು (ಡಿ.26) ಬೆಳಿಗ್ಗೆ ಹಿಂದೆ ಕಾಂಗ್ರೆಸ್ ಅಧಿವೇಶನ ನಡೆದಿದ್ದ ವೀರಸೌಧ (ಹಿಂದೆ ಗಾಂಧಿ ಬಾವಿ)ದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಮಹಾತ್ಮ ಗಾಂಧೀಜಿ ಪ್ರತಿಮೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅನಾವರಣ ಮಾಡಿದರು. ಆ ಮೂಲಕ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರಿಗೆ ಕರ್ನಾಟಕ ಕಾಂಗ್ರೆಸ್​ನಿಂದ ಗೌರವವನ್ನು ಸಲ್ಲಿಸಿದರು.

ಬೆಳಗಾವಿ ಅಧಿವೇಶನದ ರೂವಾರಿಗೆ ಗೌರವ ಸಲ್ಲಿಕೆ

ಇದಕ್ಕೂ ಮೊದಲು ಬೆಳಗಾವಿಯ ರಾಮತೀರ್ಥ ನಗರದಲ್ಲಿ ಗಂಗಾಧರ ರಾವ್ ದೇಶಪಾಂಡೆ ಸ್ಮಾರಕ ಭವನವನ ಹಾಗೂ ಫೋಟೊ ಗ್ಯಾಲರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಆ ಮೂಲಕ ಮಹಾತ್ಮ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ಬೆಳಗಾವಿ ಕಾಂಗ್ರೆಸ್ ಅಧಿವೇಶನ ನಡೆಯಲು ಪ್ರಮುಖ ಕಾರಣಕರ್ತರು, ಅಂದಿನ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಗಂಗಾಧರ ರಾವ್ ದೇಶಪಾಂಡೆ ಅವರಿಗೆ ಕರ್ನಾಟಕ ಕಾಂಗ್ರೆಸ್​ನಿಂದ ಗೌರವ ಸಲ್ಲಿಸಲಾಯಿತು.

ನೂಲುವ ಮೂಲಕ ಗಮನ ಸೆಳೆದ ಡಿಕೆಶಿ, ಸಿದ್ದರಾಮಯ್ಯ
ಬೆಳಗಾವಿ ಅಧಿವೇಶನ ಶತಮಾನೋತ್ಸವದ ಹಿನ್ನೆಲೆಯಲ್ಲಿ ಸರಸ್ ಮೇಳ ಹಾಗೂ ಖಾದಿ ಉತ್ಸವ, ವಸ್ತುಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದೆ. ಎರಡು ದಿನಗಳ ಕಾಲ ನಡೆಯುವ ಈ ಮೇಳವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಚರಕ ನೂಲುವ ಮೂಲಕ ಉದ್ಘಾಟಿಸಿದ್ದು ವಿಶೇಷವಾಗಿತ್ತು. ಸರ್ದಾರ್ ಹೈಸ್ಕೂಲ್ ಮೈದಾನದಲ್ಲಿ ಪ್ರದರ್ಶನವನ್ನು ಆಯೋಜಿಸಲಾಗಿದೆ.
ಎಐಸಿಸಿ ಕಾರ್ಯಕಾರಿ ಸಮಿತಿ ಸಭೆ
ಡಿ.26 ರಂದು ಮಧ್ಯಾಹ್ನ ಸರಿಯಾಗಿ 3 ಗಂಟೆಗೆ ಬೆಳಗಾವಿ ವೀರಸೌಧದ ಆವರಣದಲ್ಲಿ ಸಿಡಬ್ಲ್ಯುಸಿ ಸಭೆ ಆರಂಭವಾಯಿತು. ಹಾಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಜೈರಾಮ್ ರಮೇಶ್, ರಣದೀಪ ಸಿಂಗ್ ಸುರ್ಜೆವಾಲ ಸೇರಿದಂತೆ, ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಕಾರ್ಯಕಾರಿ ಸಮಿತಿ ಸದಸ್ಯರು ಭಾಗವಹಿಸಿದ್ದರು.

ಕಂಗೊಳಿಸುತ್ತಿದೆ ಬೆಳಗಾವಿ

ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದಿದ್ದ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಹಿನ್ನೆಲೆಯಲ್ಲಿ ಬೆಳಗಾವಿ ನಗರವನ್ನು ಸಿಂಗರಿಸಲಾಗಿದೆ. ಇಡೀ ನಗರಕ್ಕೆ ಲೈಟಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಜೊತೆಗೆ ಎಲ್ಲಿ ನೋಡಿದರೂ ಕಾಂಗ್ರೆಸ್ ನಾಯಕರ ಹೋರ್ಡಿಂಗ್ಗಳು, ಬ್ಯಾನರ್ಗಳು, ಬಾವುಟಗಳು ರಾರಾಜಿಸುತ್ತಿವೆ. ಸ್ವಾತಂತ್ರ್ಯ ಪೂರ್ವದಲ್ಲಿ ಈ ರೀತಿಯ ಆಡಂಬರವನ್ನು ಗಾಂಧೀಜಿ ಖಂಡಿಸುತ್ತಿದ್ದರು. ಆದರೆ ಈಗ ರಾಜ್ಯ ಕಾಂಗ್ರೆಸ್ ನಾಯಕರು ಮಾಡುತ್ತಿರುವ ಅಡಂಬರದ ಕಾರ್ಯಕ್ರಮದಲ್ಲಿ ಈ ಎಲ್ಲ ದೃಶ್ಯಗಳು ಸಾಮಾನ್ಯ ಎಂಬಂತೆ ಬೆಳಗಾವಿಯಲ್ಲಿ ಕಾಣಸಿಗುತ್ತಿವೆ. ಜೊತೆಗೆ ಇದೇ ಹೋರ್ಡಿಂಗ್ ವಿವಾದಕ್ಕೂ ಕಾರಣವಾಗಿದೆ.

ಸಂಭ್ರಮದ ಮಧ್ಯೆ ಕಾಡಿದ 'ಭಾರತ ನಕ್ಷೆ' ವಿವಾದ

ಕಾರ್ಯಕ್ರಮಕ್ಕೆ ಸ್ವಾಗತ ಕೋರುವ ಬ್ಯಾನರ್‌ಗಳಲ್ಲಿ ಭಾರತ ದೇಶದ ನಕ್ಷೆ ವಿರೂಪ ಮಾಡಿದ ಆರೋಪವನ್ನು ಕಾಂಗ್ರೆಸ್ ನಾಯಕರು ಎದುರಿಸುತ್ತಿದ್ದಾರೆ.

ಭಾರತದ ನಕ್ಷೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಮಾಜಿ ಶಾಸಕರು, ಕಾರ್ಯಕರ್ತರ ತೀವ್ರ ಆಕ್ರೋಶವನ್ನು ಹೋರ್ಡಿಂಗ್‌ನಲ್ಲಿರುವ ಹೊರ ಹಾಕುತ್ತಿದ್ದಾರೆ.

ಭಾರತದ ನಕ್ಷೆಯಲ್ಲಿ ಕಾಶ್ಮೀರದ ವಿಚಾರವನ್ನು ಪ್ರಸ್ತಾಪಿಸಿರುವ ಬಿಜೆಪಿ ನಾಯಕರು, ಈ ರೀತಿಯ ಭಾರತ ನಕ್ಷೆ ಕೇವಲ ಪಾಕಿಸ್ತಾನ, ಚೀನಾದಲ್ಲಿ ಮಾತ್ರ ಕಾಣಸಿಗುತ್ತದೆ ಎಂದು ಪೋಸ್ಟ್ ಮಾಡಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಐತಿಹಾಸಿಕ ‘ಗಾಂಧಿ ಭಾರತ’ ಕಾರ್ಯಕ್ರಮ ಆಯೋಜಿಸಿರುವ ಸಂದರ್ಭದಲ್ಲಿ ಭಾರತದ ನಕ್ಷೆಯನ್ನು ವಿರೂಪಗೊಳಿಸಿದ ಆರೋಪವು ರಾಜ್ಯ ಕಾಂಗ್ರೆಸ್‌ಗೆ ಎದುರಾಗಿದೆ. ಇದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದು, ಬಿಜೆಪಿ ನಾಯಕರು ಇದೇ ವಿಚಾರವನ್ನಿಟ್ಟುಕೊಂಡು ಕಾಂಗ್ರೆಸ್ ಅಧಿವೇಶನದ ಉದ್ದೇಶವನ್ನು ಪ್ರಶ್ನೆ ಮಾಡಿದ್ದಾರೆ.

ನಾಳೆ (ಡಿ.27) ನಡೆಯಲಿದೆ ಮಹತ್ವದ ಕಾಂಗ್ರೆಸ್ ಅಧಿವೇಶನ
ನಾಳೆ ಐತಿಹಾಸಿಕ ಗಾಂಧಿ ಭಾರತ ಕಾರ್ಯಕ್ರಮ ನಡೆಯಲಿದ್ದು, ಸಾವಿರಾರು ಜನರು ಭಾಗವಹಿಸುವ ನಿರೀಕ್ಷೆಯಿದೆ.
ಬೆಳಗಾವಿಯ ಸಿಪಿಇಡಿ ಗ್ರೌಂಡ್ನಲ್ಲಿ ಕಾಂಗ್ರೆಸ್ ಅಧಿವೇಶನ ನಡೆಯಲಿದ್ದು, ಸಾವಿರಾರು ಜನರು ಭಾಗವಹಿಸುವ ನಿರೀಕ್ಷೆಯಿದೆ. ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಎಂಬ ಹೆಸರಿನಲ್ಲಿ ಬೆಳಗಾವಿಯ ಕ್ಲಬ್ ರಸ್ತೆಯ ಸಿಪಿಇಡಿ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಸಭೆಯಲ್ಲಿ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಪಕ್ಷ ಮಾಡಿರುವ ತ್ಯಾಗವನ್ನು ನಾಯಕರು ಹಂಚಿಕೊಳ್ಳಲಿದ್ದಾರೆ.
Read More
Next Story