ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಇಂದು ಚಾಲನೆ, ಐದು ದಿನಗಳ ಕಾಲ ಸಂಭ್ರಮದ ಜಾತ್ರೆ
x

ಕಡಲೆಕಾಯಿ ಪರಿಷೆ 

ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಇಂದು ಚಾಲನೆ, ಐದು ದಿನಗಳ ಕಾಲ ಸಂಭ್ರಮದ ಜಾತ್ರೆ

ಈ ಬಾರಿಯ ಪರಿಷೆಯನ್ನು ಮೈಸೂರು ದಸರಾ ಮಾದರಿಯಲ್ಲಿ, ಹಿಂದೆಂದಿಗಿಂತಲೂ ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಗಿದೆ. ದೊಡ್ಡ ಬಸವಣ್ಣ ಹಾಗೂ ದೊಡ್ಡ ಗಣಪತಿ ದೇವಾಲಯಗಳನ್ನು ವಿಶೇಷ ಹೂವು ಮತ್ತು ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿದೆ.


Click the Play button to hear this message in audio format

ಬೆಂಗಳೂರಿನ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾಗಿರುವ, ಸುಮಾರು 500 ವರ್ಷಗಳ ಐತಿಹಾಸಿಕ ಹಿನ್ನೆಲೆಯುಳ್ಳ ಬಸವನಗುಡಿ ಕಡಲೆಕಾಯಿ ಪರಿಷೆಗೆ ಕಾರ್ತಿಕ ಮಾಸದ ಕೊನೆಯ ಸೋಮವಾರವಾದ ಇಂದು (ನ.17) ವಿಧ್ಯುಕ್ತ ಚಾಲನೆ ದೊರೆಯಲಿದೆ. ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಬೆಳಗ್ಗೆ 11 ಗಂಟೆಗೆ ಪರಿಷೆಯನ್ನು ಉದ್ಘಾಟಿಸಲಿದ್ದಾರೆ. ಈ ಬಾರಿಯ ವಿಶೇಷವೆಂದರೆ, ಎಂದಿನಂತೆ ಮೂರು ದಿನಗಳ ಬದಲಾಗಿ, ಐದು ದಿನಗಳ ಕಾಲ (ನ. 17 ರಿಂದ ನ. 21) ಈ ಜಾತ್ರಾ ಮಹೋತ್ಸವ ನಡೆಯಲಿದೆ.

ವಿಜೃಂಭಣೆಯ ಆರಂಭ, ವಾರಾಂತ್ಯದಲ್ಲೇ ಜನಜಂಗುಳಿ

ಈ ಬಾರಿಯ ಪರಿಷೆಗೆ ವಿನೂತನ ರೀತಿಯಲ್ಲಿ ಚಾಲನೆ ನೀಡಲಾಗುತ್ತಿದ್ದು, ಅಲಂಕೃತವಾದ ಐದು ಬಸವಣ್ಣಗಳನ್ನು (ಗೂಳಿಗಳು) ದೇವಾಲಯಕ್ಕೆ ಕರೆತಂದು, ಅವುಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಉದ್ಘಾಟನೆ ನೆರವೇರಿಸಲಾಗುತ್ತಿದೆ. ವಾರಾಂತ್ಯವಾದ ಶನಿವಾರ ಮತ್ತು ಭಾನುವಾರದಿಂದಲೇ ಬಸವನಗುಡಿ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಜನಜಂಗುಳಿಯಿಂದ ತುಂಬಿಹೋಗಿವೆ. ಬೆಂಗಳೂರು ಮಾತ್ರವಲ್ಲದೆ, ನೆರೆಯ ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸಿರುವ ರೈತರು, ತಮ್ಮ ಹೊಲಗಳಲ್ಲಿ ಬೆಳೆದ ಮೊದಲ ಕಡಲೆಕಾಯಿ ಬೆಳೆಯನ್ನು ಬಸವಣ್ಣನಿಗೆ ಅರ್ಪಿಸಿ, ಮಾರಾಟ ಮಾಡುತ್ತಿದ್ದಾರೆ.

ಮೈಸೂರು ದಸರಾ ಮಾದರಿಯಲ್ಲಿ ಅಲಂಕಾರ

ಈ ಬಾರಿಯ ಪರಿಷೆಯನ್ನು ಮೈಸೂರು ದಸರಾ ಮಾದರಿಯಲ್ಲಿ, ಹಿಂದೆಂದಿಗಿಂತಲೂ ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಗಿದೆ. ದೊಡ್ಡ ಬಸವಣ್ಣ ಹಾಗೂ ದೊಡ್ಡ ಗಣಪತಿ ದೇವಾಲಯಗಳನ್ನು ವಿಶೇಷ ಹೂವು ಮತ್ತು ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿದೆ. ಬಸವನಗುಡಿ ರಸ್ತೆ, ಗಾಂಧಿ ಬಜಾರ್ ಮತ್ತು ಎನ್.ಆರ್. ರಸ್ತೆಗಳು ಸೇರಿದಂತೆ ಸುತ್ತಮುತ್ತಲಿನ ಎಲ್ಲಾ ರಸ್ತೆಗಳೂ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಕಡಲೆಕಾಯಿಯ ರಾಶಿಗಳ ಜೊತೆಗೆ, ಕಡ್ಲೆಪುರಿ, ಬೆಂಡು-ಬತ್ತಾಸು, ಬಾಯಲ್ಲಿ ನೀರೂರಿಸುವ ತಿಂಡಿ-ತಿನಿಸುಗಳು, ಆಟಿಕೆಗಳು, ಗೃಹೋಪಯೋಗಿ ವಸ್ತುಗಳ ಮಳಿಗೆಗಳು ಜಾತ್ರೆಯ ಕಳೆಯನ್ನು ಹೆಚ್ಚಿಸಿವೆ.

ತೆಪ್ಪೋತ್ಸವ, ಸಂಗೀತ ಸಂಜೆ

ಪರಿಷೆಯ ಅಂಗವಾಗಿ, ಇಂದು (ನ.17) ಸಂಜೆ 6 ಗಂಟೆಗೆ ಕೆಂಪಾಂಬುಧಿ ಕೆರೆಯಲ್ಲಿ ತೆಪ್ಪೋತ್ಸವ ನಡೆಯಲಿದೆ. ಅಲ್ಲದೆ, ಬ್ಯೂಗಲ್ ರಾಕ್ ಉದ್ಯಾನದಲ್ಲಿ ನ.17, 18 ಮತ್ತು 19ರಂದು ಸಂಜೆ 6 ಗಂಟೆಯಿಂದ ಸಂಗೀತ ಸಂಜೆ, ಹಾಸ್ಯ ಸಂಜೆ ಮತ್ತು ಭರತನಾಟ್ಯದಂತಹ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪರಿಷೆಯ ಹಿನ್ನೆಲೆಯಲ್ಲಿ, ಬಸವನಗುಡಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.

Read More
Next Story