
ಧರ್ಮಸ್ಥಳ ಪ್ರಕರಣ| ಸೌಜನ್ಯಪರ ಹೋರಾಟಗಾರ ಮಹೇಶ್ ತಿಮರೋಡಿ ಪೊಲೀಸ್ ವಶಕ್ಕೆ, ಮಟ್ಟಣ್ಣವರ್ ಧ್ವನಿ ಮಾದರಿ ಸಂಗ್ರಹ
ಸೌಜನ್ಯಪರ ಹೋರಾಟಗಾರರಾದ ಮಹೇಶ್ ತಿಮರೋಡಿ, 15ವರ್ಷದ ಬಾಲಕಿ ಹಾಗೂ 40ವರ್ಷದ ಮಹಿಳೆ ಸಾವಿನ ಕುರಿತು ಎಸ್‌ಐಟಿಗೆ ದೂರು ನೀಡಿದ್ದ ಸಾಮಾಜಿಕ ಹೋರಾಟಗಾರ ಜಯಂತ್.ಟಿ ಅವರನ್ನು ಬ್ರಹ್ಮಾವರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ. ಎಲ್ ಸಂತೋಷ್ ಕುರಿತಂತೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮ್ಮರೋಡಿ ಅವರನ್ನು ಗುರುವಾರ ಬೆಳಿಗ್ಗೆ ಬ್ರಹ್ಮಾವರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಿ.ಎಲ್. ಸಂತೋಷ್ ವಿರುದ್ಧ ಫೇಸ್‌ಬುಕ್ ಖಾತೆಯಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಉಡುಪಿಯ ಬ್ರಹ್ಮಾವರ ಪೊಲೀಸ್ ಠಾಣೆಗೆ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ರಾಜೀವ ಕುಲಾಲ್ ಎಂಬುವರು ದೂರು ನೀಡಿದ್ದರು. ದೂರಿಗೆ ಸಂಬಂಧಿಸಿದಂತೆ ಪೊಲೀಸರು ನೋಟಿಸ್ ನೀಡಿದ್ದರೂ ಮಹೇಶ್ ತಿಮರೋಡಿ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಬ್ರಹ್ಮಾವರ ಪೊಲೀಸರು ಇಂದು ಧರ್ಮಸ್ಥಳದ ಉಜಿರೆಯಲ್ಲಿರುವ ಮಹೇಶ್ ತಿಮರೋಡಿ ನಿವಾಸಕ್ಕೆ ಆಗಮಿಸಿ ವಶಕ್ಕೆ ಪಡೆದು ಠಾಣೆಗೆ ಕರೆದೋಯ್ದರು.
ಬಂಧನದ ವೇಳೆ ಪ್ರತಿಕ್ರಿಯಿಸಿದ ಮಹೇಶ್ ಶೆಟ್ಟಿ ತಿಮರೋಡಿ, ನ್ಯಾಯಕ್ಕಾಗಿ ಹೋರಾಡುವಾಗ ಇದೆಲ್ಲಾ ಸಾಮಾನ್ಯ. ನ್ಯಾಯ ಸಿಗುವ ವಿಶ್ವಾಸ ಇದೆ ಎಂದು ಹೇಳಿದರು.
ಇದೇ ವೇಳೆ 15ವರ್ಷದ ಬಾಲಕಿ ಹಾಗೂ 40ವರ್ಷದ ಮಹಿಳೆ ಸಾವಿನ ಕುರಿತು ಎಸ್‌ಐಟಿಗೆ ದೂರು ನೀಡಿದ್ದ ಸಾಮಾಜಿಕ ಹೋರಾಟಗಾರ ಜಯಂತ್.ಟಿ ಅವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಳ್ತಂಗಡಿ ಪೊಲೀಸರಿಂದ ರಾತ್ರಿ ವಿಚಾರಣೆ
ಈ ಮಧ್ಯೆ, ಬೆಳ್ತಂಗಡಿ ಪೊಲೀಸರು ಬುಧವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಸೌಜನ್ಯಪರ ಹೋರಾಟಗಾರರಾದ ಗಿರೀಶ್ ಮಟ್ಟಣ್ಣವರ್ ಹಾಗೂ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ವಿಚಾರಣೆಗೆ ಕರೆದೋಯ್ದಿದ್ದಾರೆ. ನನ್ನ ಮೇಲೆ ನಾಲ್ಕು ಪ್ರಕರಣಗಳಿವೆ. ಸಾಮಾಜಿಕ ಜಾಲತಾಣದಲ್ಲಿ ಪ್ರಭಾವಿಯೊಬ್ಬರ ಕುರಿತು ಮಾತನಾಡಿದ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ನನ್ನ ಧ್ವನಿ ಮಾದರಿ ಪಡೆದಿದ್ದಾರೆ ಎಂದು ಗಿರೀಶ್ ಮಟ್ಟಣ್ಣವರ್ ತಿಳಿಸಿದ್ದಾರೆ.
ಇನ್ನು ಬೆಳಿಗ್ಗೆ ಬ್ರಹ್ಮಾವರ ಪೊಲೀಸರು ಮಹೇಶ್ ತಿಮ್ಮರೋಡಿ ಅವರನ್ನು ವಶಕ್ಕೆ ಪಡೆದ ಕ್ರಮ ಖಂಡಿಸಿ ಹಿಂದೂಪರ ಕಾರ್ಯಕರ್ತರು ಹಾಗೂ ತಿಮರೋಡಿ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ.