
ಅಂಕೋಲಾ ಗುಡ್ಡ ಕುಸಿತ| ಮೃತರ ಕುಟುಂಬಗಳ ಜತೆ ರಾಜ್ಯ ಸರ್ಕಾರ ನಿಲ್ಲಬೇಕು: ಹೆಚ್.ಡಿ.ಕುಮಾರಸ್ವಾಮಿ
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಹೆದ್ದಾರಿ ಬಳಿ ಗುಡ್ಡ ಕುಸಿದು ಏಳು ಜನರು ಧಾರುಣ ಸಾವನ್ನಪ್ಪಿದ ಸ್ಥಳಕ್ಕೆ ಕೇಂದ್ರ ಸರಕಾರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೆಳಗ್ಗೆ ದೆಹಲಿಯಿಂದ ಹುಬ್ಬಳ್ಳಿಗೆ ಬಂದು ರಸ್ತೆ ಮಾರ್ಗವಾಗಿ ಶಿರೂರು ಗುಡ್ಡ ತಲುಪಿದ ಕೇಂದ್ರ ಸಚಿವರು, ಜಿಲ್ಲಾಧಿಕಾರಿ ಸೇರಿ ಇನ್ನಿತರೆ ಅಧಿಕಾರಿಗಳಿಂದ ದುರಂತದ ಬಗ್ಗೆ ಮಾಹಿತಿ ಪಡೆದುಕೊಂಡರು.
ಗುಡ್ಡ ಕುಸಿತ, ಪರಿಹಾರ ಕಾರ್ಯ, ನೊಂದವರಿಗೆ ನೆರವು, ಹೆದ್ದಾರಿಯಲ್ಲಿ ಮಣ್ಣು ತೆರವು, ಗಂಗಾವಳಿ ನದಿ ಪ್ರವಾಹ ಹಾಗೂ ಮಳೆ ಪರಿಸ್ಥಿತಿಗಳ ಬಗ್ಗೆ ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಮಳೆಯ ನಡುವೆಯೇ ಗುಡ್ಡ ಕುಸಿತ ಭೀಕರತೆಯನ್ನು ವೀಕ್ಷಿಸಿದ ಸಚಿವರು, ಮಣ್ಣು ತೆರವು ಮತ್ತಿತರೆ ಪರಿಹಾರ ಕಾರ್ಯಗಳ ಬಗ್ಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕೈಗೊಂಡಿರುವ ಕ್ರಮಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.
ರಾಜ್ಯ ಸರಕಾರವು ಗುಡ್ಡ ಕುಸಿತದಲ್ಲಿ ಜೀವ ಕಳೆದುಕೊಂಡಿರುವ ಕುಟುಂಬಗಳ ಜತೆ ನಿಲ್ಲಬೇಕು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.
ಸ್ಥಳದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಪರಿಹಾರ ಕಾರ್ಯದಲ್ಲಿ ರಾಜಕಾರಣ ಮಾಡಬಾರದು. ಕೇಂದ್ರ ಸರಕಾರವು ಪರಿಹಾರ ಕಾರ್ಯದಲ್ಲಿ ನಿರತವಾಗಿದೆ. ರಾಜ್ಯ ಸರ್ಕಾರವು ತನ್ನ ಪಾಲಿನ ಕೆಲಸವನ್ನು ಮಾಡಬೇಕು. ರಾಜಕೀಯದಿಂದ ಉಪಯೋಗ ಇಲ್ಲ. ನೊಂದ ಕುಟುಂಬಗಳಿಗೆ ದೊಡ್ಡ ಪ್ರಮಾಣದಲ್ಲಿ ಪರಿಹಾರ ಕೊಡಬೇಕು ಹಾಗೂ ಮನೆಗಳನ್ನು ಕಳೆದುಕೊಂಡವರಿಗೆ ಮರು ವಸತಿ ಕಲ್ಪಿಸಬೇಕು ಎಂದು ಎಂದರು.
ಯಾಕೆ ಈ ದುರಂತ ಸಂಭವಿಸಿತು? ಅದಕ್ಕೆ ಕಾರಣಗಳು ಏನು? ಕಾಮಗಾರಿಯಲ್ಲಿ ಸಮಸ್ಯೆ ಇದೆಯಾ? ಎಂಬ ಪರಿಶೀಲನೆ ನಡೆಸಲಾಗುವುದು ಹಾಗೂ ಸಂಬಂಧಪಟ್ಟ ಸಚಿವರ ಗಮನಕ್ಕೂ ತರಲಾಗುವುದು. ಮೊದಲು ಪರಿಹಾರ ಕಾರ್ಯ ಮುಗಿಯಲಿ. ಇದರಲ್ಲಿ ರಾಜಕೀಯ ಮಾಡುವುದು ಬೇಡ ಎಂದು ಅವರು ಮನವಿ ಮಾಡಿದರು.
ಈ ಘಟನೆಯ ಪರಿಹಾರ ಕಾರ್ಯ ವಿಳಂಬವಾಗಿ ಸಾಗುತ್ತಿದೆ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ನಾನು ಅಧಿಕಾರಿಗಳನ್ನು ದೂಷಿಸಲಾರೆ. ಅವರು ಮಳೆಯ ನಡುವೆಯೂ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಈ ದುರಂತ ಊಹೆಗೂ ನಿಲುಕದ್ದು. ಜನತೆಗೆ ಮೂಲಸೌಕರ್ಯ ಕಲ್ಪಿಸುವ ಸಂದರ್ಭದಲ್ಲಿ ಅವೈಜ್ಞಾನಿಕ ಕಾಮಗಾರಿಗಳಿಂದ ಇಂಥ ಘಟನೆಗಳು ಮರುಕಳಿಸುತ್ತಿವೆ ಎಂದು ಹೇಳಿದರು.
ರಾಜ್ಯ ಸರಕಾರದ ಯಾವೊಬ್ಬ ಸಚಿವರು, ಮುಖ್ಯಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡದಿರುವ ಬಗ್ಗೆ ಸ್ಥಳೀಯರಿಗೆ ಬೇಸರವಿದೆ ಎಂದು ಮಾಧ್ಯಮಗಳು ಗಮನ ಸೆಳೆದಾಗ, ಈ ಬಗ್ಗೆ ನಾನು ಚರ್ಚೆ ನಡೆಸಲಾರೆ. ನಾನು ಬಂದಿದ್ದೇನೆ. ಕೇಂದ್ರದಿಂದ ಏನು ಸಹಾಯ ಮಾಡಿಸಬಹುದೋ ಅದನ್ನು ಮಾಡಿಸುತ್ತೇನೆ. ಇಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳದ್ದು ಜವಾಬ್ದಾರಿ ಇದೆ ಎಂದು ಉತ್ತರಿಸಿದರು.
ಭಾರೀ ಮಳೆಯಿಂದ ಹಾಸನ, ಮಂಗಳೂರು, ಚಿಕ್ಕಮಗಳೂರು, ಕೊಡಗು ಸೇರಿ ಕರಾವಳಿ ಮಲೆನಾಡು ಭಾಗದಲ್ಲಿ ಕೃಷಿ ಬೆಳೆ ನಷ್ಟವಾಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಗಮನ ಹರಿಸಬೇಕು ಎಂದು ಕುಮಾರಸ್ವಾಮಿ ಅವರು ಹೇಳಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಜೆಡಿಎಸ್ ನಾಯಕ ಸೂರಜ್ ನಾಯಕ್ ಸೋನಿ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಸಚಿವರ ಜತೆಯಲ್ಲಿ ಇದ್ದರು.