ಅಂಕೋಲ‌ ಗುಡ್ಡ ಕುಸಿತ| ನಿಲ್ಲದ‌ ಜಡಿಮಳೆ; ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ, ಸಚಿವರ ಭೇಟಿ
x

ಅಂಕೋಲ‌ ಗುಡ್ಡ ಕುಸಿತ| ನಿಲ್ಲದ‌ ಜಡಿಮಳೆ; ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ, ಸಚಿವರ ಭೇಟಿ


ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಭೇಟಿ ನೀಡಿ ವೀಕ್ಷಿಸಿದರು. ಸಿದ್ದರಾಮಯ್ಯ ಜೊತೆ ಸಚಿವರಾದ ಕೃಷ್ಣ ಬೈರೇಗೌಡ, ಮಂಕಾಳ ವೈದ್ಯ, ಸತೀಶ್ ಜಾರಕಿಹೊಳಿ ಉಪಸ್ಥಿತರಿದ್ದರು.

ಸಿಎಂ ಭೇಟಿ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್​ ಏರ್ಪಡಿಸಲಾಗಿತ್ತು. ಮತ್ತೆ ಗುಡ್ಡ ಕುಸಿಯುವ ಆತಂಕವಿದ್ದು, ಈ ನಡುವೆ ನಾಯಕರುಗಳು ಸ್ಥಳದ ವೀಕ್ಷಣೆ ನಡೆಸಿದರು.

ರಣಭೀಕರ ಮಳೆ ಸುರಿಯುತ್ತಿರುವುದರಿಂದ SDRF-NDRF ಸಿಬ್ಬಂದಿ ಜೊತೆ ಚರ್ಚೆ ನಡೆಸಿದರು. ಈ ವೇಳೆ ಲಭ್ಯವಿರುವ ಎಲ್ಲಾ ಆಧುನಿಕ ತಂತ್ರಜ್ಞಾನ ಬಳಸಲು-ಉನ್ನತ ಮೆಟಲ್ ಡಿಟೆಕ್ಟರ್ ಮತ್ತು ಜೆಸಿಬಿ ಬಳಸಿ ಕಾರ್ಯಾಚರಣೆ ನಡೆಸುವಂತೆ ಸಿಎಂ ಸೂಚನೆ ನೀಡಿದರು.

ಇದಕ್ಕೂ ಮುನ್ನ ಭೇಟಿ ನೀಡಿದ್ದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಮಾತನಾಡಿ, ʻʻ30 ವರ್ಷದ ರಾಜಕೀಯ ಬದುಕಿನಲ್ಲಿ ಇಂತಹದ್ದೊಂದು ದುರ್ಘಟನೆಯನ್ನು ನೋಡಿರಲಿಲ್ಲ. ಗುಡ್ಡ ಕುಸಿತ ದುರಂತದಲ್ಲಿ 10 ಮಂದಿ ಮೃತಪಟ್ಟಿದ್ದಾರೆ. ಯಾರ ಮೇಲೂ ಆರೋಪ‌ ಮಾಡುವ ಕೆಲಸವನ್ನು ನಾನು ಮಾಡಲ್ಲʼʼ ಎಂದು ಹೇಳಿದರು.

ʻʻಗುಡ್ಡ ಕುಸಿತದ ತೆರವು ಕಾರ್ಯವು ನಡೆಯಬೇಕು. ಈಗಾಗಲೇ ದುರ್ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ನೀಡಲಾಗಿದೆ. ಮೃತರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಆಶಿಸುತ್ತೇನೆʼʼ ಎಂದರು.

ʻʻಸಾಕಷ್ಟು ಮಂದಿ ಗಾಯಗೊಂಡು ಕುಮಟಾ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಹೆದ್ದಾರಿಗಾಗಿ ಗುಡ್ಡವನ್ನು ಅವೈಜ್ಞಾನಿಕವಾಗಿ ಕೊರೆಯಲಾಗಿದೆ. ಈ ಬಗ್ಗೆ ಜವಾಬ್ದಾರಿ ಇದ್ದವರು ಟೆಂಡರ್ ಹಂತದಲ್ಲೇ ನಿಯಮ ಹಾಕಿ ಸರಿಪಡಿಸಬೇಕು. ಇಂಜಿನಿಯರ್‌ಗಳು ಕಾಮಗಾರಿ‌ ಹಂತದಲ್ಲೇ ಈ ಬಗ್ಗೆ ಗಮನಹರಿಸಬೇಕು. ರಾಜಕಾರಣಿಗಳು ತಾಂತ್ರಿಕ ಜ್ಞಾನ ಇರದೇ ಹೇಳಿಕೆ ನೀಡುವುದು ಸರಿಯಲ್ಲ. ಮುಖ್ಯಮಂತ್ರಿಗಳು ಗುಡ್ಡಕುಸಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಅಧಿಕಾರಿಗಳಿಂದ ಮಾಹಿತಿ ಪಡೆದು ಬಳಿಕ ಬೆಂಗಳೂರಿನಲ್ಲಿ ಪರಿಹಾರದ ಕುರಿತು ನಿರ್ಧರಿಸುತ್ತಾರೆʼʼ ಎಂದು ತಿಳಿಸಿದರು.

ʻʻಈ ದುರಂತದಲ್ಲಿ ಅನಾವಶ್ಯಕ ಚರ್ಚೆ ಮಾಡಬಾರದು. ಈಗಾಗಲೇ ಜಿಲ್ಲಾಡಳಿತ ಕ್ರಮ ತೆಗೆದುಕೊಂಡಿದೆ. ಕಾಣೆಯಾದ ಅರ್ಜುನ್ ಅವರ ಕುಟುಂಬದವರು ತಿಳಿಸಿದ ಲೊಕೆಷನ್​ನಲ್ಲಿಯೇ ಶೋಧ ಕಾರ್ಯ ನಡೆಯುತ್ತಿದೆ‌. ವೈಜ್ಞಾನಿಕವಾಗಿ ಅಭಿವೃದ್ಧಿ ಕಾರ್ಯ ಮಾಡಬೇಕು.‌ ಅದಕ್ಕೆ ಸೂಕ್ತ ಚರ್ಚೆಯ ಅವಶ್ಯಕತೆ ಇದೆ. ಶೋಧ ಕಾರ್ಯ ಪಕ್ಷಾತೀತವಾಗಿ ನಡೆಯುತ್ತಿದೆʼʼ ಎಂದು ಹೇಳಿದರು.

ಗುಡ್ಡ ಕುಸಿತದಿಂದ ಅಂಗಡಿಯೊಂದರ ಮೇಲೆ ಮಣ್ಣು ಬಿದ್ದು ಅಂಗಡಿಯಲ್ಲಿದ್ದ ಐವರು ಹಾಗೂ ತಿಂಡಿ ತಿನ್ನಲು ಬಂದಿದ್ದ ಕೇರಳದ ಲಾರಿ ಚಾಲಕ, ಕ್ಲೀನರ್ ಸೇರಿ ಹತ್ತು ಜನರು ಮೃತಪಟ್ಟಿದ್ದಾರೆ. ಕಳೆದ ಐದು ದಿನಗಳಿಂದ ಗುಡ್ಡದ ಮಣ್ಣು ತೆರವು ಮಾಡುವ ಕಾರ್ಯಾಚರಣೆ ನಡೆಯುತ್ತಿದ್ದರೂ ರಾಜ್ಯದ ಯಾವುದೇ ಮುಖಂಡರೂ ಘಟನಾ ಸ್ಥಳಕ್ಕೆ ಬಂದಿರಲಿಲ್ಲ.

Read More
Next Story