
ಬೈಕ್ಸ್ ಟ್ಯಾಕ್ಸಿ| ನಿಯಮ ರೂಪಿಸದ ಸರ್ಕಾರದ ವಿರುದ್ಧ ಹೈಕೋರ್ಟ್ ಅಸಮಾಧಾನ; ವಿಚಾರಣೆ ಮುಂದೂಡಿಕೆ
ಬುಧವಾರ ಬೈಕ್ ಟ್ಯಾಕ್ಸಿ ಮಾಲೀಕರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠವು ಪ್ರತಿವಾದಿಗಳ ವಾದ ಆಲಿಸಿದ ಬಳಿಕ ನಿರ್ಬಂಧ ತೆರವುಗೊಳಿಸುವ ಕುರಿತು ನಿರ್ಧರಿಸಲಾಗುವುದು ಎಂದು ಹೇಳಿ, ಅ.15ಕ್ಕೆ ಮುಂದಿನ ವಿಚಾರಣೆ ಮುಂದೂಡಿತು.
ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆ ನಿರ್ಬಂಧಿಸಿದ ವಿಚಾರವಾಗಿ ಈವರೆಗೂ ಯಾವುದೇ ನಿಯಮಾವಳಿ ರೂಪಿಸದ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿಗೆ ಸಂಬಂಧಿಸಿದಂತೆ ನೀತಿ ರೂಪಿಸಲು ಒಂದು ತಿಂಗಳು ಕಾಲಾವಕಾಶ ನೀಡಿದರೂ ಸರ್ಕಾರ ಯಾವುದೇ ಸ್ಪಷ್ಟ ನೀತಿ ಪ್ರಕಟಿಸಿಲ್ಲ. ಹೀಗಿರುವಾಗ ಬೈಕ್ ಟ್ಯಾಕ್ಸಿ ಸೇವೆಗೆ ರಾಜ್ಯ ಸರ್ಕಾರ ನೀಡಿರುವ ನಿರ್ಬಂಧಕ್ಕೆ ತಡೆ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.
ಬುಧವಾರ ಬೈಕ್ ಟ್ಯಾಕ್ಸಿ ಮಾಲೀಕರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠವು ಪ್ರತಿವಾದಿಗಳ ವಾದ ಆಲಿಸಿದ ಬಳಿಕ ನಿರ್ಬಂಧ ತೆರವುಗೊಳಿಸುವ ಕುರಿತು ನಿರ್ಧರಿಸಲಾಗುವುದು ಎಂದು ಹೇಳಿ, ಅ.15ಕ್ಕೆ ಮುಂದಿನ ವಿಚಾರಣೆ ಮುಂದೂಡಿತು.
ಇದಕ್ಕೂ ಮುನ್ನ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು, ಪ್ರಯಾಣಿಕರನ್ನು ಕರೆದೊಯ್ಯಲು ಬೈಕ್ ಟ್ಯಾಕ್ಸಿಗೆ ಸರ್ಕಾರ ಅನುಮತಿ ನೀಡಿಲ್ಲ. ಬೈಕ್‌ಗಳನ್ನು ಕೇವಲ ಡೆಲಿವರಿ ಸೇವೆಗಳಿಗೆ ಮಾತ್ರ ಬಳಸಲು ಅನುಮತಿಸಲಾಗಿದೆ. ಆದರೆ, ಕೆಲವರು ಅನುಮತಿ ಇಲ್ಲದಿದ್ದರೂ ಟ್ಯಾಕ್ಸಿ ಸೇವೆ ನಡೆಸುತ್ತಿರುವುದರಿಂದ ಅವುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಹೈಕೋರ್ಟ್, “ಬೈಕ್ ಟ್ಯಾಕ್ಸಿ ಕುರಿತಂತೆ ನೀತಿ ರೂಪಿಸಲು ಅವಕಾಶ ನೀಡಿದ್ದರೂ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ನೀವು ಗಿಗ್ ಕಾರ್ಮಿಕರ ವಿಷಯವನ್ನು ಮಾತ್ರ ಹೇಳುತ್ತೀರಿ” ಎಂದು ಅಸಮಾಧಾನ ವ್ಯಕ್ತಪಡಿಸಿತು.
ಜೂನ್ 16ರಿಂದ ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸೇವೆಯನ್ನು ನಿಷೇಧಿಸಲಾಗಿತ್ತು. ಆ್ಯಪ್ ಆಧಾರಿತ ಕಂಪನಿಗಳು ಈ ನಿರ್ಬಂಧ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದವು. ಇದಕ್ಕೆ ಸ್ಪಂದಿಸಿದ್ದ ಹೈಕೋರ್ಟ್, “ಬೈಕ್ ಟ್ಯಾಕ್ಸಿಗೆ ಸಂಬಂಧಿಸಿದ ಸ್ಪಷ್ಟ ನೀತಿ ರೂಪಿಸಬೇಕು” ಎಂದು ಸೂಚಿಸಿತ್ತು.
ಬೆಂಗಳೂರು ನಗರದಲ್ಲೇ ಸುಮಾರು 1.20 ಲಕ್ಷ ಬೈಕ್‌ಗಳು ಟ್ಯಾಕ್ಸಿ ಸೇವೆಗೆ ನೋಂದಣಿ ಮಾಡಿಕೊಂಡಿವೆ. ರಾಜ್ಯದಾದ್ಯಂತ 6 ಲಕ್ಷಕ್ಕೂ ಹೆಚ್ಚು ಸವಾರರು ಈ ಸೇವೆ ಅವಲಂಬಿಸಿದ್ದಾರೆ. ಸಾವಿರಾರು ಜನರ ಜೀವನೋಪಾಯಕ್ಕೆ ಇದರಿಂದ ತೊಂದರೆಯಾಗಿದ್ದು, ಸ್ಪಷ್ಟ ನೀತಿ ರೂಪಿಸಬೇಕು ಎಂದು ಒತ್ತಾಯಿಸಲಾಗಿದೆ.
ಈ ಹಿಂದೆ ಕೂಡ ಆದೇಶ ನೀಡಿದ್ದ ಹೈಕೋರ್ಟ್, ಅಗ್ರಿಗೇಟರ್‌ಗಳ ವಿರುದ್ಧ ಕ್ರಮ ಕೈಗೊಳ್ಳಬಹುದು. ಆದರೆ, ಬೈಕ್ ಟ್ಯಾಕ್ಸಿ ಚಾಲಕರಿಗೆ ಕಿರುಕುಳ ನೀಡಬಾರದು ಎಂದು ಸ್ಪಷ್ಟಪಡಿಸಿತ್ತು.