High Court Stays Rule Capping Cinema Ticket Prices at ₹200
x
ಸಾಂದರ್ಭಿಕ ಚಿತ್ರ

ಚಿತ್ರಮಂದಿರಗಳ ಟಿಕೆಟ್ ದರ 200ಕ್ಕೆ ಸೀಮಿತಗೊಳಿಸಿದ್ದ ನಿಯಮಕ್ಕೆ ಹೈಕೋರ್ಟ್ ತಡೆ

ಭಾರತೀಯ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ (MAI), ಹೊಂಬಾಳೆ ಫಿಲ್ಮ್ಸ್ ಸೇರಿದಂತೆ ಹಲವು ನಿರ್ಮಾಣ ಸಂಸ್ಥೆಗಳು ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದವು.


Click the Play button to hear this message in audio format

ಮಲ್ಟಿಪ್ಲೆಕ್ಸ್‌ಗಳು ಸೇರಿದಂತೆ ರಾಜ್ಯದಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿ ಚಲನಚಿತ್ರಗಳ ಪ್ರದರ್ಶನಕ್ಕೆ ತೆರಿಗೆ ಹೊರತುಪಡಿಸಿ ಗರಿಷ್ಠ 200 ರೂಪಾಯಿ ಏಕರೂಪ ದರ ನಿಗದಿಪಡಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ನಿಯಮಗಳಿಗೆ ಕರ್ನಾಟಕ ಹೈಕೋರ್ಟ್ ಮಂಗಳವಾರ ಮಧ್ಯಂತರ ತಡೆ ನೀಡಿದೆ. ಈ ಮೂಲಕ ಮಲ್ಟಿಪ್ಲೆಕ್ಸ್ ಮಾಲೀಕರು ಮತ್ತು ಚಲನಚಿತ್ರ ನಿರ್ಮಾಪಕರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ. ಅಲ್ಲದೆ, ಬೃಹತ್​ ಬಜೆಟ್​ನ ಕಾಂತಾರ ಸಿನಿಮಾದ ನಿರ್ಮಾಪಕರಿಗೆ ದೊಡ್ಡ ಜಯ ಸಿಕ್ಕಂತಾಗಿದೆ. ಈ ಸಿನಿಮಾ ಅಕ್ಟೋಬರ್​ 2ರಂದು ಬಿಡುಗಡೆಯಾಗಲಿದೆ.

ಭಾರತೀಯ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ (MAI), ಹೊಂಬಾಳೆ ಫಿಲ್ಮ್ಸ್ ಸೇರಿದಂತೆ ಹಲವು ನಿರ್ಮಾಣ ಸಂಸ್ಥೆಗಳು ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದವು. ಸರ್ಕಾರದ ಈ ನಿಯಮವು ಚಿತ್ರಮಂದಿರಗಳ ವ್ಯವಹಾರದ ಹಕ್ಕನ್ನು ಕಸಿದುಕೊಳ್ಳುತ್ತದೆ ಮತ್ತು ಇದು ಅಸಾಂವಿಧಾನಿಕ ಎಂದು ಅರ್ಜಿದಾರರು ವಾದಿಸಿದ್ದರು.

ಕರ್ನಾಟಕ ಸಿನಿಮಾ (ನಿಯಂತ್ರಣ) ಕಾಯ್ದೆ, 1964ಕ್ಕೆ ತಿದ್ದುಪಡಿ ತಂದು, ರಾಜ್ಯ ಸರ್ಕಾರವು ಸೆಪ್ಟೆಂಬರ್ 12 ರಂದು ಚಿತ್ರಮಂದಿರಗಳಲ್ಲಿ ಟಿಕೆಟ್ ದರವನ್ನು 200 ರೂಪಾಯಿಗೆ ಸೀಮಿತಗೊಳಿಸಿ ಅಧಿಸೂಚನೆ ಹೊರಡಿಸಿತ್ತು. 75ಕ್ಕಿಂತ ಕಡಿಮೆ ಆಸನಗಳಿರುವ ಪ್ರೀಮಿಯಂ ಸೌಲಭ್ಯದ ಮಲ್ಟಿ ಸ್ಕ್ರೀನ್‌ಗಳಿಗೆ ಮಾತ್ರ ಈ ನಿಯಮದಿಂದ ವಿನಾಯಿತಿ ನೀಡಲಾಗಿತ್ತು. ಈ ಹಿಂದೆ 2017ರಲ್ಲಿಯೂ ಸಿದ್ದರಾಮಯ್ಯನವರ ಸರ್ಕಾರ ಇದೇ ರೀತಿಯ ನಿಯಮ ಜಾರಿಗೆ ತಂದಿತ್ತಾದರೂ, ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು.

ಅರ್ಜಿದಾರರ ಪರ ವಾದ ಮಂಡಿಸಿದ್ದ ವಕೀಲರು, "ಚಿತ್ರಮಂದಿರಗಳ ನಿರ್ಮಾಣಕ್ಕೆ ಅಪಾರ ಹಣ ಹೂಡಿಕೆ ಮಾಡಲಾಗಿರುತ್ತದೆ. ಹೀಗಿರುವಾಗ ಎಲ್ಲಾ ಟಿಕೆಟ್‌ಗಳನ್ನೂ 200 ರೂಪಾಯಿಗೆ ಮಾರಾಟ ಮಾಡಿ ಎಂದು ನಿರ್ದೇಶನ ನೀಡಲು ಸಾಧ್ಯವಿಲ್ಲ. ಇದು ವಿಮಾನಯಾನ ಸಂಸ್ಥೆಗಳಿಗೆ ಕೇವಲ ಎಕಾನಮಿ ಕ್ಲಾಸ್ ಮಾತ್ರ ಇಟ್ಟುಕೊಳ್ಳಿ ಎಂದು ಹೇಳಿದಂತೆ" ಎಂದು ವಾದಿಸಿದ್ದರು.

ಸರ್ಕಾರದ ಪರ ವಾದ ಮಂಡಿಸಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್, "ಸಾರ್ವಜನಿಕರ ಹಿತದೃಷ್ಟಿಯಿಂದ ಈ ನಿಯಮವನ್ನು ಜಾರಿಗೆ ತರಲಾಗಿದೆ. ಜನರಿಗೆ ಕೈಗೆಟಕುವ ದರದಲ್ಲಿ ಮನರಂಜನೆ ಒದಗಿಸುವುದು ಸರ್ಕಾರದ ಉದ್ದೇಶ" ಎಂದು ಸಮರ್ಥಿಸಿಕೊಂಡಿದ್ದರು.

ಎರಡೂ ಕಡೆಯ ವಾದ-ವಿವಾದಗಳನ್ನು ಆಲಿಸಿದ ನ್ಯಾಯಮೂರ್ತಿ ರವಿ ಹೊಸಮನಿ ಅವರಿದ್ದ ಏಕಸದಸ್ಯ ಪೀಠ, ಸರ್ಕಾರದ ನಿಯಮಕ್ಕೆ ಮಧ್ಯಂತರ ತಡೆ ನೀಡಿ, ವಿಚಾರಣೆಯನ್ನು ಮುಂದೂಡಿದೆ. ಈ ತಡೆಯಾಜ್ಞೆಯಿಂದಾಗಿ, ಮುಂದಿನ ಆದೇಶದವರೆಗೆ ಚಿತ್ರಮಂದಿರಗಳು ತಮ್ಮ ಹಿಂದಿನ ದರ ವ್ಯವಸ್ಥೆಯನ್ನೇ ಮುಂದುವರಿಸಲು ಅವಕಾಶ ದೊರೆತಿದೆ.

Read More
Next Story