
ಸಾಂದರ್ಭಿಕ ಚಿತ್ರ
Internal Reservation| ಒಳ ಮೀಸಲಾತಿ ಜಾರಿಗೆ ಹೈಕೋರ್ಟ್ ಮಧ್ಯಂತರ ತಡೆ; ಅಡಕತ್ತರಿಯಲ್ಲಿ ನೇಮಕ ಪ್ರಕ್ರಿಯೆ
ಸುಪ್ರೀಂಕೋರ್ಟ್ ಆದೇಶದಂತೆ ಪರಿಶಿಷ್ಟ ಜಾತಿಯಲ್ಲಿ ತೀರ ಹಿಂದುಳಿದವರಿಗೆ ಒಳ ಮೀಸಲಾತಿ ನೀಡಲು ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ನೇತೃತ್ವದಲ್ಲಿ ಆಯೋಗ ರಚಿಸಿ ವರದಿ ನೀಡುವಂತೆ ತಿಳಿಸಿತ್ತು.
ರಾಜ್ಯ ಸರ್ಕಾರ ಜಾರಿಗೊಳಿಸಿರುವ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗೆ ಹೈಕೋರ್ಟ್ ತಡೆ ನೀಡಿದ್ದು, ನೇಮಕ ಪ್ರಕ್ರಿಯೆಗಳು ಅಡಕತ್ತರಿಯಲ್ಲಿ ಸಿಲುಕಿವೆ.
ನೇಮಕಾತಿ ಆದೇಶಗಳು ಅಂತಿಮ ತೀರ್ಪಿಗೆ ಒಳಪಡಲಿವೆ ಎಂಬ ನ್ಯಾಯಾಲಯದ ಆದೇಶವು ಉದ್ಯೋಗ ಆಕಾಂಕ್ಷಿಗಳಲ್ಲಿ ಆತಂಕ ಮೂಡಿಸಿದೆ.
ಒಳ ಮೀಸಲಾತಿ ಜಾರಿಗೊಳಿಸುವ ಹಿನ್ನೆಲೆಯಲ್ಲಿ ಕಳೆದೊಂದು ವರ್ಷದಿಂದ ರಾಜ್ಯ ಸರ್ಕಾರ ಯಾವುದೇ ನೇಮಕ ಪ್ರಕ್ರಿಯೆ ನಡೆಸಿರಲಿಲ್ಲ. ಆಗಸ್ಟ್ ತಿಂಗಳಲ್ಲಿ ನಿವೃತ್ತ ನ್ಯಾಯಮೂರ್ತಿ ಡಾ.ಎಚ್.ಎನ್. ನಾಗಮೋಹನ್‌ದಾಸ್ ಆಯೋಗ ಸಲ್ಲಿಸಿದ ವರದಿಯನ್ನು ಕೆಲ ಮಾರ್ಪಾಡುಗಳೊಂದಿಗೆ ಸರ್ಕಾರ ಸ್ವೀಕಾರ ಮಾಡಿ ಜಾರಿಗೊಳಿಸಿತ್ತು.
ಸ್ವೀಕರಿಸಿದ್ದ, ಸರ್ಕಾರ ಕೆಲವು ಮಾರ್ಪಾಡುಗೊಳಿಸಿ ಮೀಸಲು ಜಾರಿಗೊಳಿಸಿತ್ತು. ಆದರೆ ಇದರಿಂದ ಅನ್ಯಾಯವಾಗಿದೆ ಎಂದು ಸರ್ಕಾರದ ವಿರುದ್ದ ಅಲೆಮಾರಿ ಸಮುದಾಯಗಳು ಹೈಕೋರ್ಟ್‌ಗೆ ಹೋಗಿದ್ದು, ಇದೀಗ ಕೋರ್ಟ್ ಮಧ್ಯಂತರ ಆದೇಶ ನೀಡಿ ವಿಚಾರಣೆಯನ್ನು ನ.4ಕ್ಕೆ ಮುಂದೂಡಿದೆ.
ಏನಿದು ವಿವಾದ ?
ಸುಪ್ರೀಂಕೋರ್ಟ್ ಆದೇಶದಂತೆ ಪರಿಶಿಷ್ಟ ಜಾತಿಯಲ್ಲಿ ತೀರಾ ಹಿಂದುಳಿದವರಿಗೆ ಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ನೇತೃತ್ವದಲ್ಲಿ ಆಯೋಗ ರಚಿಸಿ ವೈಜ್ಞಾನಿಕ ದತ್ತಾಂಶ ಸಂಗ್ರಹಿಸಲು ಮನವಿ ಮಾಡಿತ್ತು. ರಾಜ್ಯಾದ್ಯಂತ ಸಮೀಕ್ಷೆ ನಡೆಸಿದ್ದ ಆಯೋಗವು ಪರಿಶಿಷ್ಟ ಜಾತಿಗಳನ್ನು ಐದು ಪ್ರವರ್ಗಗಳಾಗಿ ವಿಂಗಡಿಸಿ ಮೀಸಲಾತಿ ಹಂಚಿಕೆ ಮಾಡಿತ್ತು. ವರದಿಯಂತೆ ಅತೀ ಹಿಂದುಳಿದ ಜಾತಿಗಳು (ಸುಮಾರು 59 ಅಲೆಮಾರಿ ಸಮುದಾಯಗಳಿಗೆ ಶೇ. 1, ಎಡಗೈ ಜಾತಿಗಳಿಗೆ ಶೇ. 6, ಬಲಗೈ ಜಾತಿಗಳಿಗೆ ಶೇ. 5, ಬಂಜಾರ, ಬೋವಿ, ಕೊರಚ, ಕೊರಮ ಸೇರಿದಂತೆ ಸ್ಪೃಶ್ಯ ಜಾತಿಗಳಿಗೆ ಶೇ. 4 ಹಾಗೂ ಉಪಜಾತಿ ಉಲ್ಲೇಖ ಮಾಡದ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಜಾತಿಗಳಿಗೆ ಶೇ. 1 ಮೀಸಲಾತಿ ಹಂಚಿಕೆ ಮಾಡಿತ್ತು. ಆದರೆ, ಸರ್ಕಾರ ವರದಿಯನ್ನು ಮಾರ್ಪಡಿಸಿ ಸ್ವಿಕರಿಸಿತ್ತು.
ಅಲೆಮಾರಿ ಸಮುದಾಯಕ್ಕೆ ಅನ್ಯಾಯ ?
ಪರಿಶಿಷ್ಟ ಜಾತಿಗಳಲ್ಲಿ ಅಂತರ್ ಹಿಂದುಳಿದಿರುವಿಕೆ ಆಧರಿಸಿ ಒಳ ಮೀಸಲಾತಿ ನೀಡುವಂತೆ ಸುಪ್ರೀಂಕೋರ್ಟ್ ಆದೇಶಿಸಿತ್ತು. ಆದರೆ, ರಾಜ್ಯ ಸರ್ಕಾರ ರಾಜಕೀಯ ಉದ್ದೇಶಕ್ಕೆ ಆಯೋಗದ ವರದಿಯನ್ನು ಮಾರ್ಪಡಿಸಿ ಐದು ಪ್ರವರ್ಗಗಳನ್ನು ಮೂರಕ್ಕೆ ಇಳಿಸಿ ಮೀಸಲಾತಿ ಹಂಚಿಕೆ ಮಾಡಿತ್ತು.
ಪ್ರವರ್ಗ - ಎ, (ಎಡಗೈ ಸಮುದಾಯ), ಪ್ರವರ್ಗ -ಬಿ ಗೆ (ಬಲಗೈ ಸಮುದಾಯ) ತಲಾ ಶೇ.6 ಹಾಗೂ ಪ್ರವರ್ಗ -ಸಿ (ಲಂಬಾಣಿ, ಭೋವಿ, ಕೊರಚ, ಕೊರಮ ಹಾಗೂ ಅಲೆಮಾರಿ ಸಮುದಾಯಗಳಿಗೆ ) ಶೇ 5 ರಷ್ಟು ಮೀಸಲಾತಿ ಹಂಚಿಕೆ ಮಾಡಿತ್ತು. ಇಲ್ಲಿ ಅಲೆಮಾರಿ ಸಮುದಾಯವನ್ನು ಮುಂದುವರೆದ ಸ್ಪೃಶ್ಯ ಸಮಾಜದ ಜೊತೆ ಸೇರಿಸಿ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ಅಲೆಮಾರಿಗಳು ಬೆಂಗಳೂರು ಹಾಗೂ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಆದಾಗ್ಯೂ, ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಅನಿವಾರ್ಯವಾಗಿ ಅಲೆಮಾರಿಗಳು ರಾಜ್ಯ ಸಚಿವ ಸಂಪುಟದ ಮೀಸಲಾತಿ ಹಂಚಿಕೆ ನಿರ್ಣಯವನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಈಗ ಒಳ ಮೀಸಲಾತಿಗೆ ನ್ಯಾಯಾಲಯ ಮಧ್ಯಂತರ ತಡೆ ಕೊಟ್ಟಿದೆ.
ಸರ್ಕಾರ ಗೊಂದಲ ಬಗೆಹರಿಸಲಿ
ರಾಯಚೂರು ಕೃಷಿ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ಅಂಕೇಶ್ ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿ, " ಸರ್ಕಾರ ಒಳಮೀಸಲಾತಿ ನೀಡುವ ಮುನ್ನ ನೇಮಕ ಪ್ರಕ್ರಿಯೆ ನಡೆಸುತ್ತಿಲ್ಲ ಎಂದು ಸ್ಪರ್ಧಾರ್ಥಿಗಳ ಅಳಲಾಗಿತ್ತು. ಆದರೆ ಇದೀಗ ಒಳ ಮೀಸಲು ನೀಡಿದ ನಂತರವೂ , ಅಲೆಮಾರಿ ಸಮುದಾಯ ಹೈಕೋರ್ಟ್‌ಗೆ ಮೊರೆ ಹೋಗಿರುವುದು ಸ್ಪರ್ಧಾರ್ಥಿಗಳಲ್ಲಿ ಆತಂಕ ಮೂಡಿಸಿದೆ.
ಈಗಾಗಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸುಮಾರು 700 ವಿವಿಧ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ. ಆದರೆ, ನೇಮಕಾತಿ ಆದೇಶಗಳು ಹೈಕೋರ್ಟ್ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಹೇಳಿರುವುದು ಸಂಕಷ್ಟ ತಂದೊಡ್ಡಿದೆ. ಸರ್ಕಾರ ಅಲೆಮಾರಿಗಳಿಗೆ ಶೇ. 1ರಷ್ಟು ಮೀಸಲಾತಿ ನೀಡಿದರೆ ಒಟ್ಟು ಮೀಸಲು ಪ್ರಮಾಣ ಶೇ.57 ಆಗುತ್ತದೆ. ಆದರೆ ಇದಕ್ಕೆ ಸರ್ಕಾರ ಕಾನೂನಿನ ಭದ್ರತೆ ಒದಗಿಸಿದರೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ ಸಾಮಾನ್ಯವರ್ಗದ ವಿದ್ಯಾರ್ಥಿಗಳು ಸುಪ್ರೀಂ ಮಟ್ಟಿಲೇರಿದರೆ ಮತ್ತೊಮ್ಮೆ ನೇಮಕ ಪ್ರಕ್ರಿಯೆಗಳು ವಿಳಂಬವಾಗಲಿದೆ ಎಂದು ತಿಳಿಸಿದರು.
ಸಾಮಾಜಿಕ ನ್ಯಾಯ ಕಸಿದ ಸರ್ಕಾರ
ಅಖಿಲ ಕರ್ನಾಟಕ ವಿದ್ಯಾರ್ಥಿಗಳು ಹಾಗೂ ಸಂಶೋಧಕರ ಸಂಘದ ಅಧ್ಯಕ್ಷ ಸಂತೋಷ್ ಮರೂರು ಮಾತನಾಡಿ, ರಾಜ್ಯ ಸರ್ಕಾರ ಆಯೋಗದ ವರದಿಯನ್ನು ಮಾರ್ಪಡಿಸಿ ಒಳ ಮೀಸಲಾತಿ ನೀಡಿರುವುದು ಅಲೆಮಾರಿಗಳನ್ನು ಸಾಮಾಜಿಕ ನ್ಯಾಯದಿಂದ ದೂರ ಇಟ್ಟಿದೆ. ಸುಪ್ರೀಂ ತೀರ್ಪಿನಂತೆ ವರದಿ ಜಾರಿಗೊಳಿಸದೆ ಕೇವಲ ರಾಜಕೀಯ ಉದ್ದೇಶಕ್ಕೋಸ್ಕರ ಬೇರೆ ವರ್ಗಗಳಿಗೆ ಹೆಚ್ಚಿನ ಮೀಸಲು ನೀಡಿ ಅಲೆಮಾರಿಗಳಿಗೆ ಅನ್ಯಾಯ ಮಾಡಿದೆ. ತಾವು ಕಾನೂನು ತಜ್ಞರೆಂದು ಬೀಗುವ ಸಿಎಂ ಸಿದ್ದರಾಮಯ್ಯ ಅವರು, ಅಲೆಮಾರಿಗಳನ್ನು ಕೋರ್ಟ್‌ಗೆ ಹೋಗುವಂತೆ ಮಾಡಿ ಬೇಕಂತಲೇ ನೇಮಕಾತಿಗಳನ್ನು ತಡೆ ಹಿಡಿದಿದ್ದಾರೆ. ಅಲೆಮಾರಿಗಳಿಗೆ ಶೇ.1 ಮೀಸಲಾತಿ ನೀಡಬೇಕಾದ ವಸ್ತುಸ್ಥಿತಿಯ ಬಗ್ಗೆ ಸರ್ಕಾರಕ್ಕೆ ಆಯೋಗ ಮನವರಿಕೆ ಮಾಡಿಕೊಡಬೇಕಿತ್ತು ಎಂದರು.
ಸರ್ಕಾರ ನೇಮಕ ವಿಳಂಬ ಮಾಡಲೆಂದೇ ಈ ರೀತಿಯ ಗೊಂದಲ ಮೂಡಿಸಿದೆಯೇ?, ನೇಮಕ ಮಾಡಿಕೊಳ್ಳಲು ಸರ್ಕಾರದ ಬಳಿ ಹಣವಿಲ್ಲವೇ ? , ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿದೆ. ಇದೇ ರೀತಿಯಾಗಿ ಸರ್ಕಾರ ನೇಮಕ ವಿಳಂಬ ಮಾಡಿದರೆ ಮುಂದೆ ನಡೆಯಲಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಅಧಿಸೂಚನೆಗೆ ಸಿದ್ಧವಿರುವ ಹುದ್ದೆಗಳು
ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲು ಹಲವು ಇಲಾಖೆಗಳು ತುದಿಗಾಲಲ್ಲಿ ನಿಂತಿವೆ. ಪದವಿ ಪೂರ್ವ ಕಾಲೇಜಿನ 804 ಉಪನ್ಯಾಸಕ ಹುದ್ದೆಗಳು, 2000 ತಾಂತ್ರಿಕ ಕಾಲೇಜಿನ ಉಪನ್ಯಾಸಕ ಹುದ್ದೆಗಳು, ವಸತಿ ಶಾಲೆಯಲ್ಲಿ 875 ಹುದ್ದೆಗಳು, ಅಬಕಾರಿ ಇಲಾಖೆಯ 268 ಉಪ ನಿರೀಕ್ಷಕರು, 677 ಅಬಕಾರಿ ಪೇದೆ, 16,000 ಶಿಕ್ಷಕರು, 600 ಪೊಲೀಸ್ ಇನ್ಸ್ಪೆಕ್ಟರ್, 4000ಕ್ಕೂ ಹೆಚ್ಚು ಪೊಲೀಸ್ ಪೇದೆ, ವಿವಿಧ ಇಲಾಖೆಗಳಲ್ಲಿ 1000ಕ್ಕೂ ಹೆಚ್ಚು ಎಫ್‌ಡಿಎ ಹಾಗೂ ಎಸ್‌ಡಿಎ ಹುದ್ದೆಗಳಿಗೆ ಆರ್ಥಿಕ ಇಲಾಖೆ ಅನುಮತಿ ನೀಡಿದ್ದು ಅಧಿಸೂಚನೆಗೆ ಸಿದ್ದವಾಗಿವೆ.
ಆತಂಕ ಹೆಚ್ಚಿಸಿದ ಹೈಕೋರ್ಟ್ ಆದೇಶ
ಒಳ ಮೀಸಲು ಜಾರಿಯಾಗಿದ್ದು ಇನ್ನೇನು ನೇಮಕ ಪ್ರಕ್ರಿಯೆಗಳು ಸರಾಗವಾಗಿ ನಡೆಯಲಿವೆ ಎಂದು ನಿಟ್ಟುಸಿರು ಬಿಟ್ಟಿದ್ದ ಸಾವಿರಾರು ಸ್ಪರ್ಧಾರ್ಥಿಗಳು ಮತ್ತೊಮ್ಮೆ ಆತಂಕದಿಂದ ಹೈಕೋರ್ಟ್ ಆದೇಶಕ್ಕೆ ಕಾಯುವಂತಾಗಿದೆ.
ಪರೀಕ್ಷೆಗೆ ಸಂಪೂರ್ಣವಾಗಿ ತಯಾರಿ ನಡೆಸುವುದು ಹೇಗೆ ಎಂಬ ಆತಂಕ ಹಲವರಲ್ಲಿದೆ. ಏಕೆಂದರೆ, ಪರೀಕ್ಷೆಗಳನ್ನು ಎದುರಿಸಿದರೂ ಅಂತಿಮ ಫಲಿತಾಂಶ ಕೋರ್ಟ್ ಆದೇಶಕ್ಕೆ ಒಳಪಟ್ಟಿರುತ್ತದೆ. ಇದರಿಂದ ನಮ್ಮ ಹೆಸರು ಆಯ್ಕೆ ಪಟ್ಟಿಯಲ್ಲಿ ಇರುತ್ತದೆಯೋ ಇಲ್ಲವೋ ಎಂಬ ಭೀತಿ ವಿದ್ಯಾರ್ಥಿಗಳನ್ನು ಕಾಡುತ್ತಿದೆ ಎಂದು ಪೊಲೀಸ್ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ರಕ್ಷಿತ್ ಕೆ. ಹೇಳಿದರು.

