ಚಾಮರಾಜಪೇಟೆ ಚಂದ್ರ ಸ್ಪಿನ್ನಿಂಗ್ ಮಿಲ್ಸ್ ಭೂಸ್ವಾಧೀನ; ಅಧಿಸೂಚನೆ ರದ್ದುಪಡಿಸಿದ ಹೈಕೋರ್ಟ್
x

ಕರ್ನಾಟಕ ಹೈಕೋರ್ಟ್‌ 

ಚಾಮರಾಜಪೇಟೆ ಚಂದ್ರ ಸ್ಪಿನ್ನಿಂಗ್ ಮಿಲ್ಸ್ ಭೂಸ್ವಾಧೀನ; ಅಧಿಸೂಚನೆ ರದ್ದುಪಡಿಸಿದ ಹೈಕೋರ್ಟ್

ಚಂದ್ರ ಸ್ಪಿನ್ನಿಂಗ್ ಅಂಡ್ ವೀವಿಂಗ್ ಮಿಲ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಇತರರಿಗೆ ಸೇರಿದ ಆರು ಎಕರೆ ಜಮೀನನ್ನು ಕೊಳಗೇರಿ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ಸರ್ಕಾರ ಭೂಸ್ವಾಧೀನ ಅಧಿಸೂಚನೆ ಹೊರಡಿಸಿತ್ತು.


ಬೆಂಗಳೂರಿನ ಹೃದಯಭಾಗದಲ್ಲಿರುವ ಚಾಮರಾಜಪೇಟೆಯ ಪ್ರತಿಷ್ಠಿತ ಟಿ.ಆರ್.ಮಿಲ್ಸ್ ಕಂಪನಿಗೆ ಸೇರಿದ ಚಂದ್ರ ಸ್ಪಿನ್ನಿಂಗ್ ಮಿಲ್ಸ್ ಜಾಗದಲ್ಲಿ ಕೊಳೆಗೇರಿ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ಕರ್ನಾಟಕ ಸರ್ಕಾರ 2005 ರಲ್ಲಿ ಹೊರಡಿಸಿದ್ದ ಭೂಸ್ವಾಧೀನ ಅಧಿಸೂಚನೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ. ಸುಮಾರು 20 ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ ಹೈಕೋರ್ಟ್ ಈ ಆದೇಶ ಹೊರಡಿಸಿದೆ.

2005ರಲ್ಲಿ ಕರ್ನಾಟಕ ಸರ್ಕಾರವು ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ ಪರವಾಗಿ ಬೆಂಗಳೂರಿನ ದೇವನಾಥಚಾರ್ ಸ್ಟ್ರೀಟ್, ಚಾಮರಾಜಪೇಟೆ ಗವಿಪುರಂ ಸಮೀಪವಿರುವ ಚಂದ್ರ ಸ್ಪಿನ್ನಿಂಗ್ ಅಂಡ್ ವೀವಿಂಗ್ ಮಿಲ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಇತರರಿಗೆ ಸೇರಿದ್ದ ಆರು ಎಕರೆ ಜಮೀನನ್ನು ಕೊಳೆಗೇರಿ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ಭೂಸ್ವಾಧೀನ ಅಧಿಸೂಚನೆ ಹೊರಡಿಸಿತ್ತು.

ಸರ್ಕಾರದ ಭೂಸ್ವಾಧೀನ ಅಧಿಸೂಚನೆ ರದ್ದುಪಡಿಸುವಂತೆ ಕೋರಿ ಚಂದ್ರ ಸ್ಪಿನ್ನಿಂಗ್ ಅಂಡ್ ವೀವಿಂಗ್ ಮಿಲ್ಸ್ ನಿರ್ದೇಶಕರು ಮತ್ತು ಇತರರು ಹೈಕೋರ್ಟ್‌ಗೆ ರಿಟ್ ಅರ್ಜಿ (ರಿಟ್ ಪಿಟಿಷನ್ ನಂ. 21192/2005) ಸಲ್ಲಿಸಿದ್ದರು.

ಹೈಕೋರ್ಟ್‌ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠವು ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯ ಸೆಕ್ಷನ್ 20 ರ ಅಡಿಯಲ್ಲಿ ನೀಡಲಾಗುವ ಭೂ ಪರಿಹಾರಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ಭೂಸ್ವಾಧೀನ ತಪ್ಪಲ್ಲವಾದರೂ, ಪ್ರಸ್ತುತ ಭೂಸ್ವಾಧೀನ ನಿಯಮಗಳ ಪ್ರಕಾರ ಮಾರುಕಟ್ಟೆ ಮೌಲ್ಯದ ಆಧಾರದ ಮೇಲೆ ಪರಿಹಾರ ನೀಡಬೇಕು ಎಂದು ಆದೇಶಿಸಿತ್ತು. ಈ ಆದೇಶದ ವಿರುದ್ಧ ಕರ್ನಾಟಕ ಸರ್ಕಾರವು ಹೈಕೋರ್ಟ್‌ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತು. ವಿಭಾಗೀಯ ಪೀಠವು ಏಕ ಸದಸ್ಯ ಪೀಠದ ತೀರ್ಪನ್ನು ಎತ್ತಿ ಹಿಡಿದಿತ್ತು.

ವಿಭಾಗೀಯ ಪೀಠದ ಆದೇಶವನ್ನು ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್‌ಗೆ ಪ್ರಶ್ನಿಸಿತ್ತು. ಸುಪ್ರೀಂಕೋರ್ಟ್, ಸೆಕ್ಷನ್ 20 ರ ಪ್ರಕಾರ ಪರಿಹಾರ ಹಣವನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಠೇವಣಿ ಇಡಬೇಕು. ಅಲ್ಲದೇ, ಕೊಳಚೆ ನಿರ್ಮೂಲನಾ ಮಂಡಳಿಯ ಸೆಕ್ಷನ್ 20 ನಿಯಮವು ಅಸಂವಿಧಾನಿಕ ಎಂದು ಅಸಮಾಧಾನ ವ್ಯಕ್ತಪಡಿಸಿ, ಪ್ರಕರಣದ ಮರು ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆಸುವಂತೆ ಅರ್ಜಿಯನ್ನು ಸುಪ್ರೀಂಕೋರ್ಟ್‌ ಹಿಂದಿರುಗಿಸಿತ್ತು.

ಅದರಂತೆ ವಿಚಾರಣೆ ನಡೆಸಿದ ಹೈಕೋರ್ಟ್ ‌ನ್ಯಾಯಮೂರ್ತಿ‌ ಎಂ.ನಾಗಪ್ರಸನ್ನ ನೇತೃತ್ವದ ಏಕ ಸದಸ್ಯ ‌ಪೀಠ ಕೊಳಚೆ ಕರ್ನಾಟಕದ ಅಧಿಸೂಚನೆ ರದ್ದುಗೊಳಿಸಿ ಆದೇಶ ಹೊರಡಿಸಿದೆ.

Read More
Next Story