
'ಮಾಜಿ'ಗಳಿಂದ ರಾಷ್ಟ್ರೀಯ ಲಾಂಛನ, ಚಿಹ್ನೆಗಳ ದುರುಪಯೋಗ ತಡೆಗೆ ನಿಯಮ ರೂಪಿಸಲು ಹೈಕೋರ್ಟ್ ಆದೇಶ
ಅಧಿಕಾರದಲ್ಲಿ ಇಲ್ಲದ ಅಧಿಕಾರಿಗಳು, ಮಾಜಿ ಸಂಸದರು, ಮಾಜಿ ಶಾಸಕರು ತಮ್ಮ ಲೆಟರ್ ಹೆಡ್‌ಗಳಲ್ಲಿ ಮತ್ತು ವಾಹನಗಳ ನಂಬರ್ ಪ್ಲೇಟ್‌ಗಳಲ್ಲಿ ಲಾಂಛನಗಳು, ಧ್ವಜಗಳು, ಹೆಸರು... ಇತ್ಯಾದಿಗಳನ್ನು ಹಾಕಿಕೊಂಡು ದುರುಪಯೋಗಪಡಿಸಿಕೊಳ್ಳುವ ಪ್ರವೃತ್ತಿ ಹೊಂದಿರುವುದು ದುರದೃಷ್ಟಕರ” ಎಂದು ಪೀಠ ವಿಷಾದಿಸಿದೆ.
ರಾಷ್ಟ್ರೀಯ ಲಾಂಛನಗಳು ಮತ್ತು ರಾಷ್ಟ್ರೀಯ ಚಿಹ್ನೆಗಳನ್ನು ವಿವಿಧ ರೂಪಗಳ ಮುಖಾಂತರ ದುರುಪಯೋಗ ಮಾಡಿಕೊಳ್ಳುವುದನ್ನು ಕಟ್ಟುನಿಟ್ಟಾಗಿ ತಡೆಯಬೇಕು ಎಂದು ಆದೇಶಿಸಿರುವ ಕರ್ನಾಟಕ ಹೈಕೋರ್ಟ್, ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಅರಿವು ಮೂಡಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅಗತ್ಯ ನಿಯಮ ರೂಪಿಸಬೇಕು ಎಂದು ನಿರ್ದೇಶಿಸಿದೆ.
ಹೈಕೋರ್ಟ್ ಕಾನೂನು ಸೇವೆಗಳ ಸಮಿತಿಯ ಕಾರ್ಯದರ್ಶಿ ಕಾವೇರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ ಐ ಅರುಣ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
“ಅಧಿಕಾರದಲ್ಲಿ ಇಲ್ಲದ ಅಧಿಕಾರಿಗಳು, ಮಾಜಿ ಸಂಸದರು, ಮಾಜಿ ಶಾಸಕರು ತಮ್ಮ ಲೆಟರ್ ಹೆಡ್‌ಗಳಲ್ಲಿ ಮತ್ತು ವಾಹನಗಳ ನಂಬರ್ ಪ್ಲೇಟ್‌ಗಳಲ್ಲಿ ಲಾಂಛನಗಳು, ಧ್ವಜಗಳು, ಹೆಸರು... ಇತ್ಯಾದಿಗಳನ್ನು ಹಾಕಿಕೊಂಡು ದುರುಪಯೋಗಪಡಿಸಿಕೊಳ್ಳುವ ಪ್ರವೃತ್ತಿ ಹೊಂದಿರುವುದು ದುರದೃಷ್ಟಕರ” ಎಂದು ಪೀಠ ವಿಷಾದಿಸಿದೆ.
“ರಾಷ್ಟ್ರೀಯ ಗುರುತುಗಳನ್ನು ಅನಧಿಕೃತವಾಗಿ ಸಾರ್ವಜನಿಕ ರಸ್ತೆ ಹಾಗೂ ಸ್ಥಳಗಳಲ್ಲಿ ದುರುಪಯೋಗ ಮಾಡಿಕೊಳ್ಳುವುದನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಮೋಟಾರು ವಾಹನ ಕಾಯಿದೆ ಅಡಿಯಲ್ಲಿನ ನಿಯಮಗಳನ್ನು ಅನ್ವಯಿಸಬೇಕು” ಎಂದು ಸರ್ಕಾರಕ್ಕೆ ತಾಕೀತು ಮಾಡಿದೆ.
“ಎಲ್ಲಾ ರೀತಿಯ ಅನಧಿಕೃತ ಧ್ವಜಗಳು, ಲಾಂಛನಗಳು, ಹೆಸರುಗಳು, ಚಿಹ್ನೆಗಳು ಮತ್ತು ಚಿಹ್ನೆಗಳನ್ನು ತೆಗೆದುಹಾಕಲು ಮುದ್ರಣ ಮತ್ತು ದೃಶ್ಯ ಮಾಧ್ಯಮಗಳ ಮೂಲಕ ನೋಟಿಸ್ ಹೊರಡಿಸಬೇಕು. ಅನಧಿಕೃತ ಬಳಕೆಯನ್ನು ನಿಲ್ಲಿಸಲು ನಾಲ್ಕು ವಾರಗಳಲ್ಲಿ ಕ್ರಮ ಕೈಗೊಳ್ಳಬೇಕು” ಎಂದು ನಿರ್ದೇಶಿಸಿರುವ ಪೀಠ ಅರ್ಜಿ ವಿಲೇವಾರಿ ಮಾಡಿದೆ.