
ಸಾಂದರ್ಭಿಕ ಚಿತ್ರ
UGNEET| 3ನೇ ಹಂತದ ತಾತ್ಕಾಲಿಕ ಸೀಟು ಹಂಚಿಕೆ ರದ್ದು; ಪರಿಷ್ಕೃತ ಪಟ್ಟಿ ಪ್ರಕಟಿಸಲು ಕೆಇಎಗೆ ಹೈಕೋರ್ಟ್ ಸೂಚನೆ
ರಾಷ್ಟ್ರೀಯ ವೈದ್ಯಕೀಯ ಆಯೋಗದ ಅನುಮೋದನೆಯ ನಂತರ ಮೂರನೇ ಸುತ್ತಿನ ಕೌನ್ಸೆಲಿಂಗ್ ಸಮಯದಲ್ಲಿ 443 ಹೊಸ ಸೀಟುಗಳನ್ನು ಸೇರಿಸಿದ್ದು, ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿನ ವಿವಾದಕ್ಕೆ ಪ್ರಮುಖ ಕಾರಣವಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಯುಜಿ ನೀಟ್ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಅ. 24ರಂದು ಕೆಇಎ ಪ್ರಕಟಿಸಿದ್ದ 3ನೇ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆಯನ್ನು ಹೈಕೋರ್ಟ್ ಶುಕ್ರವಾರ (ಡಿ.5) ರದ್ದುಪಡಿಸಿದೆ. ಮೂರನೇ ಸುತ್ತಿನ ಹೊಸ ಸೇರ್ಪಡೆ ಹೊರತುಪಡಿಸಿದ ಸೀಟು ಹಂಚಿಕೆಯನ್ನು ಡಿ.17ರೊಳಗೆ ಪ್ರಕಟಿಸುವಂತೆ ಆದೇಶಿಸಿದೆ.
ರಾಷ್ಟ್ರೀಯ ವೈದ್ಯಕೀಯ ಆಯೋಗದ ಅನುಮೋದನೆ ನಂತರ ಮೂರನೇ ಸುತ್ತಿನ ಕೌನ್ಸೆಲಿಂಗ್ ಸಮಯದಲ್ಲಿ 443 ಹೊಸ ಸೀಟುಗಳನ್ನು ಸೇರಿಸಿದ್ದೇ ವಿವಾದಕ್ಕೆ ಕಾರಣವಾಗಿತ್ತು. ಈ ಹಿಂದಿನ ಮೊದಲ ಮತ್ತು ಎರಡನೇ ಸುತ್ತುಗಳಲ್ಲಿ ಸೀಟು ಪಡೆದು ಪ್ರವೇಶ ಗಿಟ್ಟಿಸಿಕೊಂಡಿದ್ದ ವಿದ್ಯಾರ್ಥಿಗಳಿಗೆ ಹೊಸ ಸೀಟುಗಳ ಸೇರ್ಪಡೆಗಳಿಂದ ಕಾಲೇಜು ಹಾಗೂ ಸ್ಥಳದ ಆಯ್ಕೆ ಸಮಸ್ಯೆ ತಂದೊಡ್ಡಿತ್ತು. ಎರಡನೇ ಸುತ್ತಿನ ನಂತರವೂ ಖಾಲಿ ಉಳಿದಿದ್ದ ಸೀಟುಗಳು ಮತ್ತು ಹೊಸ ಸೀಟುಗಳ ಆಯ್ಕೆಗೆ ಅವಕಾಶ ನೀಡದಿರುವುದು ಉತ್ತಮ ಅರ್ಹತೆ ಮತ್ತು ರ‍್ಯಾಂಕ್ ಪಡೆದಿದ್ದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದೆ ಎಂಬುದು ಅರ್ಜಿದಾರರ ವಾದವಾಗಿತ್ತು.
ನ್ಯಾಯಾಲಯದ ನಿರ್ದೇಶನ ಏನು ?
ಹೈಕೋರ್ಟ್‌ನ ವಿಶೇಷ ಪೀಠವು ತಾತ್ಕಾಲಿಕ ಸೀಟು ಹಂಚಿಕೆ ಪಟ್ಟಿಯನ್ನು ರದ್ದುಗೊಳಿಸಿ ಸುಪ್ರೀಂಕೋರ್ಟ್ ನಿರ್ದೇಶನದಂತೆ (ಭಾವನಾ ತಿವಾರಿ ಪ್ರಕರಣದ ತೀರ್ಪು) ಕೌನ್ಸೆಲಿಂಗ್ ಪ್ರಕ್ರಿಯೆ ಮರು ಪ್ರಾರಂಭಿಸಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದೆ. ಕೆಇಎಯಿಂದ ಮುಂದಿನ ಸುತ್ತಿನ ಕೌನ್ಸೆಲಿಂಗ್‌ಗೆ ಹಂಚಿಕೆಯಾದ ಅಭ್ಯರ್ಥಿಗಳ ಪಟ್ಟಿ ಸ್ವೀಕರಿಸಲು ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ಸೂಚಿಸಿದೆ. ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ತ್ವರಿತವಾಗಿ ಮತ್ತು ನ್ಯಾಯಾಲಯದ ನಿರ್ದೇಶನದಂತೆ ನಿರ್ದಿಷ್ಟ ದಿನಾಂಕದೊಳಗೆ ಪೂರ್ಣಗೊಳಿಸಲು ಗಡುವು ನೀಡಲಾಗಿದೆ.

