
ಸ್ಮಾರ್ಟ್ ಮೀಟರ್ ವಿರುದ್ಧದ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಸ್ಮಾರ್ಟ್ ಮೀಟರ್ ವಿರುದ್ಧದ ಅರ್ಜಿ ವಜಾಗೊಳಿಸಿ ಹೈಕೋರ್ಟ್ ಆದೇಶ
ಸ್ಮಾರ್ಟ್ ಮೀಟರ್ ಕುರಿತು ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಈಗಾಗಲೇ ಹೈಕೋರ್ಟ್‌ನ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಾಕಿ ಇದೆ ಎಂಬ ಅಂಶವನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಉಲ್ಲೇಖಿಸಿದ್ದಾರೆ.
ಹೊಸ ವಿದ್ಯುತ್ ಗ್ರಾಹಕರು ಸ್ಮಾರ್ಟ್ ಮೀಟರ್ ಅಳವಡಿಸುವುದನ್ನು ಕಡ್ಡಾಯಗೊಳಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.
ಹೊಸ ಮತ್ತು ತಾತ್ಕಾಲಿಕ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಿಚಾರಣೆಗೆ ಪರಿಗಣಿಸುವ ಕುರಿತು ಆದೇಶ ಕಾಯ್ದಿರಿಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಸ್ಮಾರ್ಟ್ ಮೀಟರ್ ಕುರಿತು ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಈಗಾಗಲೇ ಹೈಕೋರ್ಟ್‌ನ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಾಕಿ ಇದೆ ಎಂಬ ಅಂಶವನ್ನು ಉಲ್ಲೇಖಿಸಿದ ನ್ಯಾಯಮೂರ್ತಿ, ವಿಭಾಗೀಯ ಪೀಠದಲ್ಲಿ ಈ ವಿಚಾರಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ದಾಖಲಾಗಿದೆ. ಪಿಐಎಲ್ ನಲ್ಲಿ ರಿಟ್ ಅರ್ಜಿಯ ಅಂಶಗಳನ್ನು ಯಥಾವತ್ತಾಗಿ ಉಲ್ಲೇಖಿಸಲಾಗಿದೆ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿದರು.
ಈ ಅರ್ಜಿದಾರರು ಹೊಸ ವಿದ್ಯುತ್ ಗ್ರಾಹಕರಲ್ಲ. ಹಾಗಾಗಿ, ಅವರ ಮನೆಗಳಿಗೆ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸಲು ರಾಜ್ಯ ಸರ್ಕಾರ ಒತ್ತಾಯಿಸಿಲ್ಲ. ಸ್ಮಾರ್ಟ್ ಮೀಟರ್ ಅಳವಡಿಕೆ ಹೊಸ ಮನೆಗಳಿಗೆ ಮಾತ್ರವೇ ಹೊರತು ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಅಲ್ಲ. ಹಾಲಿ ಗ್ರಾಹಕರು ಇಚ್ಛಿಸಿದ್ದಲ್ಲಿ ಮಾತ್ರ ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳಬಹುದು ಎಂದು ಅಡ್ವೊಕೇಟ್ ಜನರಲ್ ಶಶಿ ಕಿರಣ್ ಶೆಟ್ಟಿ ಈ ಹಿಂದೆಯೇ ಹೇಳಿದ್ದರು. ಈ ಎಲ್ಲ ಅಂಶಗಳನ್ನು ಗಮನಲ್ಲಿಟ್ಟುಕೊಂಡು ಏಕ ಸದ್ಯ ಪೀಠವು ರಿಟ್ ಅರ್ಜಿಯನ್ನು ತಿರಸ್ಕರಿಸಿದೆ.