ದರ್ಶನ್ ಬೆನ್ನುಹುರಿ ಶಸ್ತ್ರಚಿಕಿತ್ಸೆಗೆ ದಿನ ನಿಗದಿ: ಮಧ್ಯಂತರ ಜಾಮೀನು ಅವಧಿ ವಿಸ್ತರಣೆ
ಮುಂದಿನ ವಿಚಾರಣೆವರೆಗೂ ದರ್ಶನ್‌ಗೆ ನೀಡಿದ್ದ ಮಧ್ಯಂತರ ಜಾಮೀನು ಅವಧಿಯನ್ನು ವಿಸ್ತರಿಸಿ ನ್ಯಾಯಾಲಯ ಆದೇಶಿಸಿದೆ. ಇನ್ನು ರೆಗ್ಯುಲರ್ ಜಾಮೀನು ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಿರುವ ನ್ಯಾಯಾಲಯ ತೀರ್ಪು ಕಾಯ್ದಿರಿಸಿದೆ.
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾದ ನಟ ದರ್ಶನ್‌ಗೆ ಹೈಕೋರ್ಟ್ ಸೋಮವಾರ ತಾತ್ಕಾಲಿಕ ರಿಲೀಫ್ ನೀಡಿದೆ.
ಮುಂದಿನ ವಿಚಾರಣೆವರೆಗೂ ದರ್ಶನ್‌ಗೆ ನೀಡಿದ್ದ ಮಧ್ಯಂತರ ಜಾಮೀನು ಅವಧಿಯನ್ನು ವಿಸ್ತರಿಸಿ ನ್ಯಾಯಾಲಯ ಆದೇಶಿಸಿದೆ. ಇನ್ನು ರೆಗ್ಯುಲರ್ ಜಾಮೀನು ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಿರುವ ನ್ಯಾಯಾಲಯ, ತೀರ್ಪು ಕಾಯ್ದಿರಿಸಿದೆ.
ಜಾಮೀನು ಅವಧಿ ವಿಸ್ತರಣೆ ಕೋರಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಸೋಮವಾರ ಈ ಆದೇಶ ನೀಡಿದೆ. ದರ್ಶನ್ ಪರ ವಕೀಲ ಸಿ.ವಿ. ನಾಗೇಶ್ ಜಾಮೀನು ಅವಧಿ ವಿಸ್ತರಣೆ ಕೋರಿದ್ದರು. ಇದಕ್ಕೆ ಸರ್ಕಾರದ ಪರ ಸಹಾಯಕ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದರು. ನ್ಯಾಯಾಲಯ ಕೂಡ, ಜಾಮೀನು ಪಡೆದು ಇಷ್ಟು ದಿನವಾದರೂ ದರ್ಶನ್ ಯಾಕೆ ಸರ್ಜರಿ ಮಾಡಿಸಿಲ್ಲ ಎಂದು ಪ್ರಶ್ನಿಸಿತು.
ಇದಕ್ಕೆ ಉತ್ತರಿಸಿದ ಸಿ.ವಿ.ನಾಗೇಶ್, ನಟನಿಗೆ ರಕ್ತದೊತ್ತಡ ವ್ಯತ್ಯಾಸವಾಗುತ್ತಿತ್ತು. ಹಾಗಾಗಿ ಶಸ್ತ್ರಚಿಕಿತ್ಸೆ ನಡೆಸಿರಲಿಲ್ಲ. ಈಗ ಡಿ.11ಕ್ಕೆ ಬೆನ್ನುಹುರಿಯ ಶಸ್ತ್ರಚಿಕಿತ್ಸೆಗೆ ದಿನಾಂಕ ನಿಗದಿಯಾಗಿದೆ. ಹಾಗಾಗಿ ಮಧ್ಯಂತರ ಜಾಮೀನು ಅವಧಿ ವಿಸ್ತರಿಸಬೇಕು ಎಂದು ಮನವಿ ಮಾಡಿದರು. ಇನ್ನು ಪರಿಗಣಿಸಿ ನ್ಯಾಯಾಲಯ ಮಧ್ಯಂತರ ಜಾಮೀನು ಅವಧಿಯನ್ನು ವಿಸ್ತರಿಸಿ ಆದೇಶ ನೀಡಿತು.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳೊಂದಿಗೆ ರಾಜಾತೀಥ್ಯ ಪಡೆದ ಆರೋಪದ ಮೇಲೆ ದರ್ಶನ್ರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಬೆನ್ನು ನೋವು ಹೆಚ್ಚಾಗಿತ್ತು. ಪರೀಕ್ಷೆ ನಡೆಸಿದ್ದ ವೈದ್ಯರು ಶಸ್ತ್ರ ಚಿಕಿತ್ಸೆಗೆ ಸಲಹೆ ನೀಡಿದ್ದರು. ಈ ಕುರಿತ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ನಂತರ ಹೈಕೋರ್ಟ್ 6 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಜಾಮೀನು ಅವಧಿ ಡಿ.11ಕ್ಕೆ ಮುಕ್ತಾಯವಾಗುವ ಹಿನ್ನೆಲೆಯಲ್ಲಿ ಜಾಮೀನು ಅವಧಿ ವಿಸ್ತರಣೆ ಕೋರಿ ನ್ಯಾಯಾಲಯಲ್ಲೆ ಮನವಿ ಸಲ್ಲಿಸಲಾಗಿತ್ತು.
ಎದೆಗೂಡಿನ 17 ಮೂಳೆ ಮುರಿದಿವೆ; ಇದು ಕೊಲೆ ಅಲ್ಲವೇ?
ಇನ್ನು ಪ್ರಕರಣದಲ್ಲಿ ಜಾಮೀನು ಕೋರಿ ಎ1 ಆರೋಪಿ ಪವಿತ್ರಾಗೌಡ ಹಾಗೂ ಇತರರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನೂ ನ್ಯಾಯಪೀಠ ನಡೆಸಿತು.
ಕಳೆದ ವಿಚಾರಣೆ ವೇಳೆ ದರ್ಶನ್ ಪರ ವಕೀಲ ಸಿ.ವಿ. ನಾಗೇಶ್ ವಾದ ಮಂಡಿಸಿ, ಪೊಲೀಸರ ತನಿಖೆಯ ಲೋಪಗಳನ್ನು ಉಲ್ಲೇಖಿಸಿದ್ದರು. ಇದಕ್ಕೆ ಸೋಮವಾರ ಪ್ರತಿವಾದ ಮಂಡಿಸಿದ ಪೊಲೀಸರ ಪರ ಸಹಾಯಕ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ಘಟನೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
‘ರೇಣುಕಾಸ್ವಾಮಿ ಒಂದೇ ಏಟಿನಿಂದ ಮೃತಪಟ್ಟಿಲ್ಲ. ದರ್ಶನ್ ಹಾಗೂ ತಂಡದ ಏಟುಗಳಿಗೆ ರೇಣುಕಾಸ್ವಾಮಿ ಎದೆಗೂಡಿನ 17 ಮೂಳೆಗಳು ಮುರಿದಿವೆ. ರಕ್ತ ಬಂದಿದೆ. ಇದು ಕೊಲೆ ಎನ್ನಲು ಸಾಕಷ್ಟು ಸಾಕ್ಷ್ಯಗಳಿವೆʼ ಎಂದು ವಾದಿಸಿದ್ದಾರೆ.
ಘಟಣಾ ಸ್ಥಳದಲ್ಲಿದ್ದ ಸಹ ಆರೋಪಿಗಳ ಹೇಳಿಕೆ ಇದೆ. ದರ್ಶನ್ ಕಾರಿನಿಂದ ಬಂದವರೇ ರೇಣುಕಾಸ್ವಾಮಿಗೆ ಒದ್ದರು. ಪವಿತ್ರಾಗೌಡ ಚಪ್ಪಲಿಯಿಂದ ಹೊಡೆದರು. ಅದೇ ಚಪ್ಪಲಿ ಕಿತ್ತುಕೊಂಡು ದರ್ಶನ್ ಕೂಡ ನನ್ನ ಹೆಂಡತಿಗೆ ಮೆಸೇಜ್ ಮಾಡುತ್ತೀಯಾ ಎಂದು ಮೇಲಿಂದ ಮೇಲೆ ಹೊಡೆದರು. ರೇಣುಕಾಸ್ವಾಮಿ ಎದೆಯ ಭಾಗಕ್ಕೆ ಕಾಲಿನಿಂದ ಒದ್ದರು ಎಂಬುದಾಗಿ ಪ್ರತ್ಯಕ್ಷದರ್ಶಿಗಳು ನೀಡಿರುವ ಹೇಳಿಕೆಯನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.
ರೇಣುಕಾಸ್ವಾಮಿ ಪ್ಯಾಂಟ್ ಬಿಚ್ಚಿಸಿ ಮರ್ಮಾಂಗಕ್ಕೆ ದರ್ಶನ್ ಒದ್ದಿದಾರೆ ಎಂದು ಹೇಳಿದ್ದಾರೆ. ಆ ಸಮಯದಲ್ಲಿ ರೇಣುಕಾ ಸ್ವಾಮಿ ನೀರು ಕುಡಿಯುತ್ತಿರಲಿಲ್ಲ. ಆತ ಸತ್ತಿದ್ದನೋ ಇಲ್ಲವೋ ಎಂದು ನೋಡಲು ವೈದ್ಯರಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿಕೆ ನೀಡಿದ್ದಾರೆ.
ಮರಣೋತ್ತರ ಪರೀಕ್ಷೆಯಲ್ಲೂ ಎದೆಭಾಗದ ಒಟ್ಟು 17 ಮೂಳೆಗಳು ಮುರಿದಿವೆ ಎಂದು ವರದಿ ಬಂದಿದೆ. ದರ್ಶನ್ ಹಾಗೂ ಇತರೆ ಆರೋಪಿಗಳ ಉಪಸ್ಥಿತರಿರುವ ಫೋಟೋ ಇದೆ. ಶೆಡ್‌ನಲ್ಲೇ ಘಟನೆ ನಡೆದಿದೆ ಎಂಬುದಕ್ಕೆ ಪೋಟೊದಲ್ಲಿ ವಾಹನಗಳಿರುವುದು ಕಾಣುತ್ತಿದೆ ಎಂದು ಪ್ರಸನ್ನ ಕುಮಾರ್ ಹೇಳಿದ್ದಾರೆ.
‘ಎ2, ಎ7, ಎ8 ಆರೋಪಿಗಳ ಜೊತೆ ದರ್ಶನ್ ಪೋಟೋ ತೆಗೆಸಿಕೊಂಡಿದ್ದಾರೆ. ಇದೇ ಶೂ, ಬಟ್ಟೆಗಳನ್ನು ರಿಕವರಿ ಮಾಡಲಾಗಿದೆ. ಎ8 ಆರೋಪಿಯಾದ ಡ್ರೈವರ್‌ನ ಪ್ಯಾಂಟ್ ಮಾತ್ರ ಬದಲಾಗಿದೆ. ಬಾಡಿ ಶಿಫ್ಟ್ ಮಾಡುವ ಉದ್ದೇಶದಿಂದ ಪ್ಯಾಂಟ್ ಬದಲಿಸಿದ್ದಾನೆ. ಇದಕ್ಕೆ ಪೂರಕವಾಗಿ ಎ8 ಹೇಳಿಕೆ ಸಹ ನೀಡಿದ್ದಾನೆ. ಫೋಟೋಗಳನ್ನು ಆರೋಪಿಗಳಿಗೆ ಕಳುಹಿಸಿರುತ್ತೇನೆ. ರೇಣುಕಾಸ್ವಾಮಿ ಮೃತದೇಹವನ್ನು ಹಾಲ್‌ನಲ್ಲಿ ಮಲಗಿಸಿದ್ದೆವು ಎಂದು ಹೇಳಿದ್ದ. ಅದರಂತೆ ಪೊಲೀಸರ ಪರಿಶೀಲನೆ ವೇಳೆ ರೇಣುಕಾಸ್ವಾಮಿಯ ಬ್ಲಡ್ ಸ್ವಾಬ್ ಸಿಕ್ಕಿದೆ’ ಎಂದು ಪ್ರಸನ್ನ ಕುಮಾರ್ ವಾದ ಮಂಡನೆ ಮಾಡಿದ್ದಾರೆ.