
ಹೈಕೋರ್ಟ್ ಆದೇಶ ಪಾಲಿಸುವಂತೆ ಜಿಬಿಎಗೆ ಪತ್ರ ಬರೆದಿರುವ ಬಿಜೆಪಿ ಮುಖಂಡ ಎಂ. ಆರ್. ರಮೇಶ್
ಕಾಟನ್‌ಪೇಟೆಯ 300 ಕೋಟಿ ರೂ. ಸ್ವತ್ತು ವಶಕ್ಕೆ ಪಡೆಯದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಬಿಜೆಪಿ ಆಗ್ರಹ
ಸುಮಾರು 1,19,894 ಚ. ಅಡಿ ವಿಸ್ತೀರ್ಣದ ಈ ಸ್ವತ್ತಿನ ಈಶಾನ್ಯ ಭಾಗದಲ್ಲಿದ್ದ ಸುಮಾರು 18,900 ಚ. ಅಡಿ ವಿಸ್ತೀರ್ಣದ ಮುಸ್ಲಿಂ ಸ್ಮಶಾನದ ಜಾಗವನ್ನು “ಲಡಾಕ್ ಶಾ ವಾಲಿ ಮಸೀದಿ”ಗೆ ಒಪ್ಪಿಸುವಂತೆ ಹೈಕೋರ್ಟ್ ಸೂಚಿಸಿತ್ತು.
ನಗರದ ಕಾಟನ್‌ಪೇಟೆ ಮುಖ್ಯರಸ್ತೆಯಲ್ಲಿರುವ ಸುಮಾರು 300 ಕೋಟಿ ರೂ. ಸ್ವತ್ತು ಪಾಲಿಕೆಯದು ಎಂದು ಹೈಕೋರ್ಟ್ ಸೂಚನೆ ನೀಡಿದ್ದರೂ, ಸ್ವತ್ತನ್ನು ವಶಕ್ಕೆ ಪಡೆಯದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಬಿಎ ಮುಖ್ಯ ಆಯುಕ್ತರಿಗೆ ಬಿಜೆಪಿ ಮುಖಂಡ ಎಂ. ಆರ್. ರಮೇಶ್ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರ ಬರೆದಿರುವ ಅವರು, ಸಚಿವ ಜಮೀರ್ ಅಹಮದ್ ಅವರ ರಾಜಕೀಯ ಪ್ರಭಾವದಿಂದಾಗಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕಾಲಹರಣ ಮಾಡುತ್ತಿದ್ದಾರೆ. ಚಾಮರಾಜಪೇಟೆ ವಿಭಾಗದ ಹಿಂದಿನ ಮತ್ತು ಈಗಿನ ಕಾರ್ಯಪಾಲಕ ಎಂಜಿನಿಯರ್‌ಗಳು, ಪಶ್ಚಿಮ ವಲಯದ ಎಂಜಿನಿಯರ್‌ಗಳು, ಕಂದಾಯ ಅಧಿಕಾರಿಗಳು, 2015 ರಿಂದ 2020 ರವರೆಗೆ ಕಾರ್ಯ ನಿರ್ವಹಿಸಿರುವ ಪಾಲಿಕೆಯ ಆಸ್ತಿಗಳ ವಿಭಾಗದ ಜಂಟಿ ಆಯುಕ್ತರು, ಈ ಸ್ವತ್ತಿಗೆ ಕಾಂಪೌಂಡ್ ನಿರ್ಮಿಸದ ಗುತ್ತಿಗೆದಾರ ಸಿ.ಎಸ್. ಜಗದೀಶ್ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
300 ಕೋಟಿ ರೂ. ಮೌಲ್ಯದ ಸ್ವತ್ತು
ಕನಿಷ್ಠ 300 ಕೋಟಿ ರೂಪಾಯಿಗಳಿಗೂ ಹೆಚ್ಚು ಮಾರುಕಟ್ಟೆ ಮೌಲ್ಯವನ್ನು ಹೊಂದಿರುವ ಈ ಸ್ವತ್ತಿನ ರಕ್ಷಣೆ ಬಗ್ಗೆ 2015 ರ ವಿಧಾನಸಭಾ ಅಧಿವೇಶನದಲ್ಲಿ ಸಾಕಷ್ಟು ಚರ್ಚೆಗಳು ನಡೆದು, ಸ್ವತಃ ಅಂದಿನ ಸಿಎಂ ಸಿದ್ದರಾಮಯ್ಯ ಈ ಸ್ವತ್ತು ಸರ್ಕಾರದ ಅಮೂಲ್ಯ ಆಸ್ತಿಯಾಗಿದ್ದು, ಕೂಡಲೇ ಸದರಿ ಸ್ವತ್ತಿಗೆ ಕಾಂಪೌಂಡ್ ನಿರ್ಮಿಸಿ, ಭದ್ರತಾ ವ್ಯವಸ್ಥೆಗೆ ಸಿಬ್ಬಂದಿಗಳನ್ನು ನೇಮಿಸುವಂತೆ ಪಾಲಿಕೆಗೆ ಆದೇಶಿಸಿದ್ದರು. ಅಲ್ಲದೇ, ಈ ಸಂಬಂಧ ಸರ್ಕಾರಿ ಆದೇಶದ ಅಧಿಸೂಚನೆಯೂ ಪ್ರಕಟವಾಗಿತ್ತು ಎಂದು ರಮೇಶ್ ಹೇಳಿದ್ದಾರೆ.
ಕಾಂಪೌಂಡ್ ನಿರ್ಮಾಣಕ್ಕೆ ಟೆಂಡರ್
ಹೈಕೋರ್ಟ್ ಹಾಗೂ ಸರ್ಕಾರಿ ಆದೇಶದಂತೆ ಈ ಸ್ವತ್ತಿಗೆ ಕಾಂಪೌಂಡ್ ಹಾಕಲು ತೀರ್ಮಾನ ತೆಗೆದುಕೊಂಡ ಪಾಲಿಕೆಯು ಈ ಸಂಬಂಧ ಟೆಂಡರ್ ಆಹ್ವಾನಿಸಿತ್ತು. ಅಂತಿಮವಾಗಿ ಸಿ.ಎಸ್. ಜಗದೀಶ್ ಎಂಬ ಗುತ್ತಿಗೆದಾರನಿಗೆ 49 ಲಕ್ಷ ರೂ. ವೆಚ್ಛದಲ್ಲಿ ಸ್ವತ್ತಿಗೆ ಕಾಂಪೌಂಡ್ ನಿರ್ಮಿಸಲು 2015 ಮೇ 19ರಂದು “ಕಾರ್ಯಾದೇಶ ಪತ್ರ”ವನ್ನು ನೀಡಿತ್ತು.
ಈ ಸರ್ಕಾರಿ ಸ್ವತ್ತಿನ ರಕ್ಷಣೆಯ ಬಗ್ಗೆ ಧ್ವನಿ ಎತ್ತಿದ್ದ ಭಕ್ಷಿ ಗಾರ್ಡನ್ ನಿವಾಸಿ ಮತ್ತು ಅಖಿಲ ಕರ್ನಾಟಕ ಭೋವಿ ಸಂಘದ ಕಾರ್ಯದರ್ಶಿ ಆರ್.ವಿ. ಶ್ರೀನಿವಾಸ್ ಈ ಸಂಬಂಧ ತನ್ವೀರ್ ಅಹಮದ್ ಸೇರಿದಂತೆ ಚಾಮರಾಜಪೇಟೆ ಉಪವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳ ವಿರುದ್ಧ ಪಾಲಿಕೆಯ ಆಯುಕ್ತರಿಗೆ ಹಲವಾರು ದೂರುಗಳನ್ನು ನೀಡಿದ್ದರಲ್ಲದೇ, ಬಿಎಂಟಿಎಫ್‌ನಲ್ಲಿಯೂ ದೂರುಗಳನ್ನು ದಾಖಲಿಸಿದ್ದರು
ಅಧಿಕಾರಿಗಳ ವಜಾಕ್ಕೆ ಶಿಫಾರಸು
ಆರ್.ವಿ. ಶ್ರೀನಿವಾಸ್ ಅವರ ದೂರುಗಳನ್ನು ಆಧರಿಸಿ ಬಿಎಂಟಿಎಫ್ ಪೋಲೀಸರು ಹಲವು ಬಾರಿ ತನ್ವೀರ್ ಅಹಮದ್ ಸೇರಿದಂತೆ ಸಂಬಂಧಪಟ್ಟ ಎಂಜಿನಿಯರ್‌ಗಳು ಮತ್ತು ಕಂದಾಯ ಇಲಾಖೆಯ ಅಧಿಕಾರಿ ಮತ್ತು ನೌಕರರಿಗೆ ವಿಚಾರಣಾ ನೋಟೀಸ್‌ಗಳನ್ನು ಜಾರಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ, ಪಶ್ಚಿಮ ವಲಯದ ಜಂಟಿ ಆಯುಕ್ತರು ಈ ಸ್ವತ್ತಿನ ರಕ್ಷಣೆಯ ಬಗ್ಗೆ ಕ್ರಮವಹಿಸದ ಚಾಮರಾಜಪೇಟೆ ಉಪವಿಭಾಗದ ಎಆರ್‌ಒ ಅಶೋಕ್ ಮತ್ತು ಕಂದಾಯ ಪರಿವೀಕ್ಷಕ ತಿಮ್ಮಯ್ಯನವರನ್ನು ಸೇವೆಯಿಂದ ವಜಾಗೊಳಿಸುವಂತೆ ಶಿಫಾರಸ್ಸನ್ನು ಮಾಡಿದ್ದರು ಎಂದು ಎನ್.ಆರ್. ರಮೇಶ್ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.