Udupi News| ಮೀನು ಕದ್ದ ಆರೋಪದ ಮೇಲೆ ಮಹಿಳೆ ಮೇಲೆ ಹಲ್ಲೆ ; ಮೂವರಿಗೆ ಜಾಮೀನು
x

Udupi News| ಮೀನು ಕದ್ದ ಆರೋಪದ ಮೇಲೆ ಮಹಿಳೆ ಮೇಲೆ ಹಲ್ಲೆ ; ಮೂವರಿಗೆ ಜಾಮೀನು

ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪದ ಮೇಲೆ ಲಂಬಾಣಿ ಸಮುದಾಯಕ್ಕೆ ಸೇರಿದ ಲಕ್ಕಿ ಬಾಯಿ ಅವರನ್ನು 2025ರ ಮಾರ್ಚ್‌ 18ರಂದು ಸಂಜೆ 6 ಗಂಟೆಯ ವೇಳೆಯಲ್ಲಿ ಒಂದು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಲಾಗಿತ್ತು. ಈ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದರು.


ಉಡುಪಿಯ ಮಲ್ಪೆಯಲ್ಲಿ ಮೀನು ಕದ್ದ ಆರೋಪದ ಮೇಲೆ ಮಹಿಳೆಯನ್ನು ಮರಕ್ಕೆ ಕಟ್ಟಿ ಹಲ್ಲೆ ಮಾಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಮೂವರು ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್‌ ಗುರುವಾರ ಜಾಮೀನು ನೀಡಿದೆ.

ಉಡುಪಿಯ ಲಕ್ಷ್ಮಿ ಸಾಲಿಯಾನ, ಶಿಲ್ಪಾ ಬಾಯಿ ಹಾಗೂ ಸುಂದರ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್‌ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

“ಅರ್ಜಿದಾರರು ಬಿಡುಗಡೆಗೊಂಡ ನಂತರ ಅವರನ್ನು ಮೆರವಣಿಗೆ ಮೂಲಕ ಕರೆದುಕೊಂಡು ಹೋಗುವ ಅಥವಾ ಅವರನ್ನು ವೈಭವೀಕರಿಸಿ ಬರಮಾಡಿಕೊಳ್ಳುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಎಲ್ಲಾ ಅರ್ಜಿದಾರರು ತಲಾ ಒಂದು ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್‌ ಮತ್ತು ಅಷ್ಟೇ ಮೊತ್ತಕ್ಕೆ ಒಬ್ಬರ ಭದ್ರತೆ ನೀಡಬೇಕು. ಅಗತ್ಯವಿದ್ದಾಗೆಲ್ಲಾ ತನಿಖಾಧಿಕಾರಿ ಮುಂದೆ ಹಾಜರಾಗಬೇಕು. ಪ್ರಾಸಿಕ್ಯೂಷನ್‌ ಸಾಕ್ಷ್ಯಿಗಳನ್ನು ಬೆದರಿಸಬಾರದು. ಇದೇ ಮಾದರಿಯ ಅಪರಾಧದಲ್ಲಿ ಭಾಗಿಯಾಗಬಾರದು. ತನಿಖಾಧಿಕಾರಿಯ ಪೂರ್ವಾನುಮತಿಯಿಲ್ಲದೆ ಮಲ್ಪೆ ಪೊಲೀಸ್ ಠಾಣೆಯ ಸರಹದ್ದು ಬಿಟ್ಟು ಹೊರ ಹೋಗಬಾರದು" ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.

ಪ್ರಕರಣದ ಹಿನ್ನೆಲೆ: ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪದ ಮೇಲೆ ಲಂಬಾಣಿ ಸಮುದಾಯಕ್ಕೆ ಸೇರಿದ ಲಕ್ಕಿ ಬಾಯಿ ಅವರನ್ನು 2025ರ ಮಾರ್ಚ್‌ 18ರಂದು ಸಂಜೆ 6 ಗಂಟೆಯ ವೇಳೆಯಲ್ಲಿ ಒಂದು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ಲಕ್ಷ್ಮೀ ಸಾಲಿಯಾನ್‌, ಶಿಲ್ಪ, ಆರಾಧನ ಬೋಟಿನ ಚಂದ್ರ , ಸುಂದರ್‌ ಸೇರಿದಂತೆ ಹಲವರ ವಿರುದ್ಧ ಉಡುಪಿಯ ಮಲ್ಪೆ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ಗಳಾದ 189(2), 191(2), 126(2), 127(2), 74, 115(2), 353, 351(2), 190 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ನಿಷೇಧ) ಕಾಯಿದೆ ಸೆಕ್ಷನ್‌ಗಳಾದ 3(1)(r), 3(1)(s), 3(2)(v-a) ಅಡಿ ಪ್ರಕರಣ ದಾಖಲಿಸಲಾಗಿದೆ.

Read More
Next Story