
ಕಲಬುರಗಿ ಹೈಕೋರ್ಟ್
ಚಿತ್ತಾಪುರ ಆರ್‌ಎಸ್‌ಎಸ್ ಪಥಸಂಚಲನ: ಷರತ್ತುಬದ್ಧ ಅನುಮತಿ ನೀಡಿದ ಕೋರ್ಟ್
ಆರ್‌ಎಸ್‌ಎಸ್‌ನ 100ನೇ ವರ್ಷಾಚರಣೆ ಪ್ರಯುಕ್ತ ಆಯೋಜಿಸಿದ್ದ ಈ ಪಥಸಂಚಲನಕ್ಕೆ ಜಿಲ್ಲಾಡಳಿತವು ಕಾನೂನು ಮತ್ತು ಸುವ್ಯವಸ್ಥೆ ಕಾರಣ ನೀಡಿ ಅನುಮತಿ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಆರ್‌ಎಸ್‌ಎಸ್ ಕಾರ್ಯಕರ್ತರು ಹೈಕೋರ್ಟ್ ಮೊರೆ ಹೋಗಿದ್ದರು.
ತೀವ್ರ ಕುತೂಹಲ ಮತ್ತು ರಾಜಕೀಯ ಜಟಾಪಟಿಗೆ ಕಾರಣವಾಗಿದ್ದ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಹಮ್ಮಿಕೊಂಡಿದ್ದ ಪಥಸಂಚಲನಕ್ಕೆ ಕೊನೆಗೂ ಹೈಕೋರ್ಟ್‌ನ ಕಲಬುರಗಿ ಪೀಠವು ಹಸಿರು ನಿಶಾನೆ ತೋರಿದೆ. ಕಾನೂನು ಸುವ್ಯವಸ್ಥೆಯ ಕಾರಣ ನೀಡಿ ಜಿಲ್ಲಾಡಳಿತವು ನಿರಾಕರಿಸಿದ್ದ ಅನುಮತಿಯನ್ನು ನ್ಯಾಯಾಲಯವು ಷರತ್ತುಬದ್ಧವಾಗಿ ಮಾನ್ಯ ಮಾಡಿದೆ.
ಆರ್‌ಎಸ್‌ಎಸ್ ಸ್ಥಾಪನೆಯಾಗಿ 100ನೇ ವರ್ಷಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಈ ಪಥಸಂಚಲನವನ್ನು ಆಯೋಜಿಸಲಾಗಿತ್ತು. ಆದರೆ, ಜಿಲ್ಲಾಡಳಿತ ಅನುಮತಿ ನಿರಾಕರಿಸಿದ್ದನ್ನು ಪ್ರಶ್ನಿಸಿ ಸಂಘದ ಕಾರ್ಯಕರ್ತರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ಅವರಿದ್ದ ಏಕಸದಸ್ಯ ಪೀಠ, ನವೆಂಬರ್ 16, ಭಾನುವಾರದಂದು ಪಥಸಂಚಲನ ನಡೆಸಲು ಅವಕಾಶ ಕಲ್ಪಿಸಿ ಮಹತ್ವದ ಆದೇಶ ನೀಡಿದೆ.
ನ್ಯಾಯಾಲಯ ವಿಧಿಸಿದ ಪ್ರಮುಖ ಷರತ್ತುಗಳು
ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ನ್ಯಾಯಾಲಯವು ಹಲವು ಕಠಿಣ ಷರತ್ತುಗಳನ್ನು ವಿಧಿಸಿದೆ: ಥಸಂಚಲನವನ್ನು ನವೆಂಬರ್ 16ರ ಮಧ್ಯಾಹ್ನ 3:00 ರಿಂದ ಸಂಜೆ 5:30ರ ವರೆಗೆ ಮಾತ್ರ ನಡೆಸಬೇಕು. ಣವೇಷಧಾರಿಗಳಾದ ಗರಿಷ್ಠ 300 ಮಂದಿ ಮಾತ್ರ ಪಥಸಂಚಲನದಲ್ಲಿ ಭಾಗವಹಿಸಬಹುದು ವುದೇ ಅಹಿತಕರ ಘಟನೆಗಳು ನಡೆಯದಂತೆ ಸಂಪೂರ್ಣ ಜವಾಬ್ದಾರಿಯನ್ನು ಸಂಘಟಕರೇ ಹೊರಬೇಕು ಮತ್ತು ಶಾಂತಿ ಕಾಪಾಡಬೇಕು ಎಂದು ಹೇಳಿದೆ.
ಪ್ರಕರಣದ ಹಿನ್ನೆಲೆ
ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಅನುಮತಿ ಕೋರಿ ಆರ್‌ಎಸ್‌ಎಸ್ ಅರ್ಜಿ ಸಲ್ಲಿಸಿತ್ತು. ಆದರೆ, ಅದೇ ದಿನ ಬೇರೆ ಸಂಘಟನೆಗಳು ಕೂಡ ಕಾರ್ಯಕ್ರಮಗಳಿಗೆ ಅನುಮತಿ ಕೇಳಿದ್ದರಿಂದ, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ಜಿಲ್ಲಾಡಳಿತವು ಅನುಮತಿಯನ್ನು ನಿರಾಕರಿಸಿತ್ತು. ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಕ್ಷೇತ್ರವಾದ ಚಿತ್ತಾಪುರದಲ್ಲಿ ಈ ಘಟನೆ ರಾಜಕೀಯ ತಿರುವು ಪಡೆದುಕೊಂಡು, ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ನ್ಯಾಯಾಲಯದ ನಿರ್ದೇಶನದಂತೆ, ಸೌಹಾರ್ದಯುತ ಪರಿಹಾರಕ್ಕಾಗಿ ಜಿಲ್ಲಾಡಳಿತವು ಹಲವು ಸುತ್ತಿನ ಶಾಂತಿ ಸಭೆಗಳನ್ನು ನಡೆಸಿದ್ದರೂ, ಒಮ್ಮತ ಮೂಡಿಬಂದಿರಲಿಲ್ಲ. ಅಂತಿಮವಾಗಿ, ಹೈಕೋರ್ಟ್‌ನ ಮಧ್ಯಪ್ರವೇಶದಿಂದ ಈ ಜಿದ್ದಾಜಿದ್ದಿಗೆ ತೆರೆಬಿದ್ದಿದೆ.

