
Ketaganahalli Land Dispute | ಕೇಂದ್ರ ಸಚಿವ ಕುಮಾರಸ್ವಾಮಿಯನ್ನು ಆರೋಪಿಯನ್ನಾಗಿಸಲು ಹೈಕೋರ್ಟ್ ನಿರ್ದೇಶನ
ಕೇತಗಾನಹಳ್ಳಿ ಭೂ ಒತ್ತುವರಿ ಪ್ರಕರಣದಲ್ಲಿ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ ಸುಪ್ರೀಂಕೋರ್ಟ್ ಆದೇಶದ ಅನ್ವಯ ಕುಮಾರಸ್ವಾಮಿ ಅವರನ್ನು ಮೂರನೇ ಆರೋಪಿಯನ್ನಾಗಿಸಿ ತಿದ್ದುಪಡಿ ಮಾಡುವಂತೆ ಸಮಾಜ ಪರಿವರ್ತನಾ ಸಮುದಾಯ ಪರ ಹಿರಿಯ ವಕೀಲ ಎಸ್.ಬಸವರಾಜು ಅವರಿಗೆ ಹೈಕೋರ್ಟ್ ನಿರ್ದೇಶಿಸಿತು
ರಾಮನಗರ ಜಿಲ್ಲೆಯ ಬಿಡದಿ ಸಮೀಪದ ಕೇತಗಾನಹಳ್ಳಿಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ತೆರವು ಸಂಬಂಧ ಸಮಾಜ ಪರಿವರ್ತನಾ ಸಮುದಾಯ ದಾಖಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಆರೋಪಿಯನ್ನಾಗಿಸಿ, ಅರ್ಜಿಗೆ ಸೂಕ್ತ ತಿದ್ದುಪಡಿ ಮಾಡುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ.
ನ್ಯಾಯಾಂಗ ನಿಂದನೆ ಅರ್ಜಿ ಪ್ರಶ್ನಿಸಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್ ಮತ್ತು ಕೆ ವೆಂಕಟೇಶ್ ನಾಯ್ಕ್ ಅವರ ವಿಭಾಗೀಯ ಪೀಠವು ಸುಪ್ರೀಂಕೋರ್ಟ್ ಆದೇಶದ ಅನ್ವಯ ಕುಮಾರಸ್ವಾಮಿ ಅವರನ್ನು ಮೂರನೇ ಆರೋಪಿಯನ್ನಾಗಿಸಿ ತಿದ್ದುಪಡಿ ಮಾಡುವಂತೆ ಸಮಾಜ ಪರಿವರ್ತನಾ ಸಮುದಾಯ ಪರ ಹಿರಿಯ ವಕೀಲ ಎಸ್.ಬಸವರಾಜು ಅವರಿಗೆ ನಿರ್ದೇಶಿಸಿತು. ಜೊತೆಗೆ ಈ ಸಂಬಂಧ ಕುಮಾರಸ್ವಾಮಿ ಪರ ಹಿರಿಯ ವಕೀಲ ಉದಯ್ ಹೊಳ್ಳ ಅವರಿಗೆ ಆಕ್ಷೇಪಣೆ ಸಲ್ಲಿಸಲು ಆದೇಶಿಸಿ, ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ, ಕುಮಾರಸ್ವಾಮಿ ಪರ ವಕೀಲ ಉದಯ್ ಹೊಳ್ಳ ಅವರು “ಲೋಕಾಯುಕ್ತ ವರದಿಯಲ್ಲಿ ಕುಮಾರಸ್ವಾಮಿ ಅವರನ್ನು ಆರೋಪಮುಕ್ತ ಮಾಡಲಾಗಿದೆ. ವಿಭಾಗೀಯ ಪೀಠದ ಮುಂದಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲೂ ಕುಮಾರಸ್ವಾಮಿಯನ್ನು ಪ್ರತಿವಾದಿಯನ್ನಾಗಿ ಮಾಡಿಲ್ಲ. ನ್ಯಾಯಾಂಗ ನಿಂದನೆ ಅರ್ಜಿಯಲ್ಲಿಯೂ ಅವರನ್ನು ಆರೋಪಿಯನ್ನಾಗಿಸಿಲ್ಲ. ಇದರ ಮಧ್ಯೆ ಹಾಲಿ ಅರ್ಜಿಯನ್ನು ತಮ್ಮನ್ನು (ಕುಮಾರಸ್ವಾಮಿ) ಆರೋಪಿಯನ್ನಾಗಿಸಲು ಕೋರಲಾಗಿದೆ. ಆದರೆ, ಈ ಸಂಬಂಧ ವಾದ ಮಂಡನೆಗೆ ನಮಗೆ ಅವಕಾಶವನ್ನೇ ನೀಡಿಲ್ಲ ಎಂದು ಪೀಠದ ಗಮನ ಸೆಳೆದರು. ಆಗ ನ್ಯಾಯಪೀಠ, ಕುಮಾರಸ್ವಾಮಿಯನ್ನು ಹಾಲಿ ಅರ್ಜಿಯಲ್ಲಿ ಆರೋಪಿಯನ್ನಾಗಿ ಸೇರಿಸುವಂತೆ ಸೂಚಿಸಿ, ಪ್ರತಿವಾದಿ ಕುಮಾರಸ್ವಾಮಿ ಪರ ವಕೀಲರಿಗೆ ಆಕ್ಷೇಪಣೆ ಸಲ್ಲಿಸಲು ಆದೇಶಿಸಿತು.
ಸಮುದಾಯ ಪರಿವರ್ತನಾ ಸಮಾಜದ ಪರ ವಕೀಲ ಬಸವರಾಜು ಪ್ರತಿಕ್ರಿಯಿಸಿ “ವಿಭಾಗೀಯ ಪೀಠದ ಮುಂದಿದ್ದ ಪಿಐಎಲ್‌ನಲ್ಲಿ ಹಲವು ಮಂದಿಯನ್ನು ಪ್ರತಿವಾದಿಗಳನ್ನಾಗಿಸಲಾಗಿತ್ತು. ನ್ಯಾಯಾಲಯದ ಸೂಚನೆ ಆಧರಿಸಿ ಎಲ್ಲರನ್ನೂ ಕೈಬಿಡಲಾಗಿತ್ತು. ಆನಂತರ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವಾಗ ರಿಜಿಸ್ಟ್ರಿ ಆಕ್ಷೇಪಿಸಿದ್ದರಿಂದ ಕುಮಾರಸ್ವಾಮಿ ಮತ್ತಿತರರ ಹೆಸರನ್ನು ಕೈಬಿಡಲಾಗಿತ್ತೇ ವಿನಾ ಉದ್ದೇಶಪೂರ್ವಕವಾಗಿ ಅಲ್ಲ. ಆರೋಪಿಯಾಗಿ ಕುಮಾರಸ್ವಾಮಿ ಅವರು ಪ್ರಕರಣದಲ್ಲಿ ಭಾಗಿಯಾಗುವುದು ಸಮಂಜಸವಾಗಿದೆ” ಎಂದು ವಿವರಿಸಿದರು.
ಕೇತಗಾನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಭೂಮಿ ಒತ್ತುವರಿ ಪ್ರಕರಣ ಸಂಬಂಧ ಸಮಾಜ ಪರಿವರ್ತನಾ ಸಮುದಾಯ ದಾಖಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಗೆ ತಡೆ ನೀಡಲು ಕೋರಿ ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು. ಮಾರ್ಚ್ 28ರಂದು ಸುಪ್ರೀಂಕೋರ್ಟ್ ನ್ಯಾಯಾಂಗ ನಿಂದನೆ ಅರ್ಜಿ ಸಂಬಂಧ ಹೈಕೋರ್ಟ್ ಎಡತಾಕಲು ಕುಮಾರಸ್ವಾಮಿ ಅವರಿಗೆ ಸೂಚಿಸಿತ್ತು. ಇದರ ಆಧಾರದಲ್ಲಿ ಕುಮಾರಸ್ವಾಮಿ ಅವರು ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದರು.
ಇನ್ನು ಭೂ ಒತ್ತುವರಿ ವಿವಾದಕ್ಕೆ ಸಂಬಂಧಿಸಿದ ದಾಖಲೆ ನಾಪತ್ತೆಯಾಗಿದೆ ಎಂಬ ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ ಅವರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ಹಾಗೇ ಬಿಟ್ಟರೆ ಜಮೀನು ಕೂಡ ನಾಪತ್ತೆಯಾಗಬಹುದು ಎಂದು ಕಿಡಿಕಾರಿತು.