
ಕರ್ನಾಟಕ ಹೈಕೋರ್ಟ್
ಸಂಜೆ ಕೋರ್ಟ್‌ಗಳ ಆರಂಭಕ್ಕೆ ಹೈಕೋರ್ಟ್ ಚಿಂತನೆ: ವಕೀಲರ ಅಭಿಪ್ರಾಯ ಸಂಗ್ರಹಕ್ಕೆ ಸೂಚನೆ
ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ರಾಜ್ಯದ ಎಲ್ಲಾ 30 ಜಿಲ್ಲೆಗಳ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಿಗೆ ಅಧಿಕೃತವಾಗಿ ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿ ನ್ಯಾಯಾಲಯಗಳ ಮೇಲಿನ ಪ್ರಕರಣಗಳ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ 'ಸಂಜೆ ಕೋರ್ಟ್'ಗಳನ್ನು (Evening Courts) ಆರಂಭಿಸುವ ಕುರಿತು ಕರ್ನಾಟಕ ಹೈಕೋರ್ಟ್ ಗಂಭೀರ ಚಿಂತನೆ ನಡೆಸಿದೆ. ಈ ಮಹತ್ವದ ಯೋಜನೆಗೆ ಸಂಬಂಧಿಸಿದಂತೆ, ರಾಜ್ಯದ ಎಲ್ಲಾ ಜಿಲ್ಲೆಗಳ ವಕೀಲರ ಸಂಘಗಳ ಅಭಿಪ್ರಾಯವನ್ನು ಸಂಗ್ರಹಿಸಲು ಹೈಕೋರ್ಟ್ ಮುಂದಾಗಿದೆ.
ಈ ಸಂಬಂಧ, ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ರಾಜ್ಯದ ಎಲ್ಲಾ 30 ಜಿಲ್ಲೆಗಳ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಿಗೆ ಅಧಿಕೃತವಾಗಿ ಪತ್ರ ಬರೆದಿದ್ದಾರೆ.
ಕೇಂದ್ರ ಸರ್ಕಾರದ ಕಾನೂನು ಮತ್ತು ನ್ಯಾಯ ಸಚಿವಾಲಯವು 2025ರ ಮಾರ್ಚ್ 4 ರಂದು, ಸಂಜೆ ಕೋರ್ಟ್‌ಗಳ ಸ್ಥಾಪನೆಗೆ ಸಂಬಂಧಿಸಿದಂತೆ ಕೇಂದ್ರ ಪ್ರಾಯೋಜಿತ ಯೋಜನೆಯ ಪರಿಕಲ್ಪನಾ ಟಿಪ್ಪಣಿಯೊಂದನ್ನು ರಾಜ್ಯ ಹೈಕೋರ್ಟ್‌ಗೆ ಕಳುಹಿಸಿತ್ತು. ಈ ಹಿನ್ನೆಲೆಯಲ್ಲಿ, ಮುಂದಿನ ಕ್ರಮ ಕೈಗೊಳ್ಳುವ ಮೊದಲು ವಕೀಲರ ಅಭಿಪ್ರಾಯವನ್ನು ಪಡೆಯುವುದು ಅತ್ಯಗತ್ಯವೆಂದು ಹೈಕೋರ್ಟ್ ಭಾವಿಸಿದೆ.
ಜಿಲ್ಲಾ ನ್ಯಾಯಾಧೀಶರು ತಮ್ಮ ವ್ಯಾಪ್ತಿಯಲ್ಲಿರುವ ವಕೀಲರ ಸಂಘಗಳೊಂದಿಗೆ ಸಮಾಲೋಚಿಸಿ, ಸಂಜೆ ಕೋರ್ಟ್‌ಗಳ ಸ್ಥಾಪನೆಯ ಸಾಧಕ-ಬಾಧಕಗಳ ಕುರಿತು ಅವರ ಅಭಿಪ್ರಾಯವನ್ನು ಸಂಗ್ರಹಿಸಬೇಕು. ನಂತರ, ಕ್ರೋಡೀಕೃತ ವರದಿಯೊಂದನ್ನು ಮೂರು ತಿಂಗಳೊಳಗೆ ಹೈಕೋರ್ಟ್‌ಗೆ ಸಲ್ಲಿಸುವಂತೆ ಪತ್ರದಲ್ಲಿ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಈ ವರದಿಗಳನ್ನು ಆಧರಿಸಿ ಹೈಕೋರ್ಟ್ ಮುಂದಿನ ನಿರ್ಧಾರವನ್ನು ಕೈಗೊಳ್ಳಲಿದೆ.