Mysore MUDA Case | ಸಿಎಂ ಸಿದ್ದರಾಮಯ್ಯ ಮೇಲ್ಮನವಿ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್‌
x

Mysore MUDA Case | ಸಿಎಂ ಸಿದ್ದರಾಮಯ್ಯ ಮೇಲ್ಮನವಿ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್‌

ಮುಡಾ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಿಭಾಗೀಯ ಪೀಠ 2025ರ ಜನವರಿ 25ಕ್ಕೆ ಮುಂದೂಡಿದೆ.


ಮುಡಾ ಪ್ರಕರಣದಲ್ಲಿ ವಿಚಾರಣೆಗೆ ಅನುಮತಿ ನೀಡಿ ರಾಜ್ಯಪಾಲರು ನೀಡಿದ್ದ ʼಪ್ರಾಸಿಕ್ಯೂಷನ್ʼ ಅನುಮತಿಯನ್ನು ಎತ್ತಿಹಿಡಿದಿದ್ದ ಏಕಸದಸ್ಯ ಪೀಠದ ಆದೇಶ ರದ್ದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಮೇಲ್ಮನವಿ ವಿಚಾರಣೆಯನ್ನು ಹೈಕೋರ್ಟ್ ವಿಭಾಗೀಯ ಪೀಠವು 2025ರ ಜನವರಿ 25 ಕ್ಕೆ ಮುಂದೂಡಿದೆ.

ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ ಗೆ ಅನುಮತಿ ನೀಡಿದ ರಾಜ್ಯಪಾಲರ ಕ್ರಮವನ್ನು ಎತ್ತಿಹಿಡಿದಿದ್ದ ಹೈಕೋರ್ಟಿನ ಏಕಸದಸ್ಯ ಪೀಠದ ತೀರ್ಪನ್ನು ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಸಿಎಂ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯನ್ನು ಗುರುವಾರ ಮುಖ್ಯ ನ್ಯಾಯಮೂರ್ತಿ ಎಸ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ ಅರವಿಂದ ನೇತೃತ್ವದ ಪೀಠ ನಡೆಸಿತು.

ಹೈಕೋರ್ಟ್ ಏಕಸದಸ್ಯ ಪೀಠದ ಆದೇಶದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ. ನಮ್ಮ ಅಭಿಪ್ರಾಯದಿಂದ ವಿಚಾರಣೆ ಮೇಲೆ ಪರಿಣಾಮವಾಗಬಹುದು ಎಂದು ಮುಖ್ಯ ನ್ಯಾಯಮೂರ್ತಿ ಎಸ್.ವಿ. ಅಂಜಾರಿಯಾ ಅಭಿಪ್ರಾಯಪಟ್ಟರು. ಬಳಿಕ ಸಿಎಂ ಮೇಲ್ಮನವಿ ಸೇರಿದಂತೆ ಪ್ರಕರಣದ ಸಿಬಿಐ ತನಿಖೆ ಕೋರಿದ್ದ ಮೇಲ್ಮನವಿ ಅರ್ಜಿಗಳ ವಿಚಾರಣೆಯನ್ನು ಜನವರಿ 25ಕ್ಕೆ ಮುಂದೂಡಿದರು.

ದೇವರಾಜು ಮೇಲ್ಮನವಿ ಅರ್ಜಿಯೂ ಮುಂದೂಡಿಕೆ

ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಅರ್ಜಿ ಪ್ರಶ್ನಿಸಿ ಜಮೀನು ಮಾಲೀಕ ಜೆ.ದೇವರಾಜು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯನ್ನು ಕೂಡ ವಿಭಾಗೀಯ ಪೀಠ ಜನವರಿ 25ಕ್ಕೆ ಮುಂದೂಡಿತು. ಮೇಲ್ಮನವಿಗಳಲ್ಲಿನ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡುವಂತೆ ಸೂಚಿಸಿತು.

ಸಿಎಂ ಪರ ಸುಪ್ರೀಂಕೋರ್ಟ್ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರೆ, ಜೆ. ದೇವರಾಜು ಪರ ಹಿರಿಯ ವಕೀಲ ದುಶ್ಯಂತ್ ದವೆ ವಾದ ಮಂಡಿಸಿದರು. ಸರ್ಕಾರದ ಪರ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಹಾಜರಿದ್ದರು.

ಗಮನ ಸೆಳೆದ ವಾದ-ವಿವಾದ

ಹೈಕೋರ್ಟ್ ಏಕಸದಸ್ಯ ಪೀಠ ಮಧ್ಯಂತರ ಆದೇಶ ನೀಡಿದೆ. ಲೋಕಾಯುಕ್ತ ಪೊಲೀಸರ ತನಿಖೆ ಸ್ಥಿತಿಗತಿ ವರದಿ ಕೇಳಿದೆ. ಹೀಗಾಗಿ ಹೈಕೋರ್ಟ್ ಆದೇಶಕ್ಕೆ ಮಧ್ಯಂತರ ತಡೆ ನೀಡುವಂತೆ ದೇವರಾಜು ಪರ ವಕೀಲ ದುಶ್ಯಂತ್ ದವೆ ಮನವಿ ಮಾಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸ್ನೇಹಮಯಿ ಕೃಷ್ಣ ಪರ ಹಿರಿಯ ವಕೀಲ ಕೆ.ಜಿ. ರಾಘವನ್, ಹೈಕೋರ್ಟ್ ಏಕಸದಸ್ಯ ಪೀಠ ಕೇವಲ ನೋಟಿಸ್ ಜಾರಿಗೊಳಿಸಿದೆ. ಅಲ್ಲಿನ ವಿಚಾರಣೆಗೂ ಈ ಕೇಸಿಗೂ ಸಂಬಂಧವಿಲ್ಲ ಎಂದು ವಾದಿಸಿದರು.

ಇದಕ್ಕೆ ದುಶ್ಯಂತ್ ದವೆ, ರಾಜ್ಯಪಾಲರ ಅನುಮತಿ ಸರಿಯೋ ತಪ್ಪೋ ಎಂದಷ್ಟೇ ಹೇಳಬೇಕಿತ್ತು. ಆದರೆ ಹೈಕೋರ್ಟ್ ಏಕಸದಸ್ಯ ಪೀಠ ದೇವರಾಜು ವಾದ ಆಲಿಸದೇ ಅವರ ವಿರುದ್ಧವೇ ಆದೇಶ ನೀಡಿದೆ. ಇದರಿಂದ ತೊಂದರೆ ಆಗುತ್ತಿರುವುದರಿಂದ ಆದೇಶ ಪ್ರಶ್ನಿಸಿದ್ದೇವೆ ಎಂದು ನ್ಯಾಯಪೀಠದ ಗಮನ ಸೆಳೆದರು.

ಸರ್ಕಾರದ ಪರ ಹಾಜರಿದ್ದ ಸುಪ್ರೀಂಕೋರ್ಟ್ ಹಿರಿಯ ವಕೀಳ ಅಭಿಷೇಕ್ ಸಿಂಘ್ವಿ ಮನವಿ ಮೇರೆಗೆ ವಿಚಾರಣೆಯನ್ನು ಜನವರಿ 25ಕ್ಕೆ ನಿಗದಿಪಡಿಸಿತು.

ಮುಡಾ ಪ್ರಕರಣ ಸಿಬಿಐ ತನಿಖೆ ಕೋರಿರುವ ಸ್ನೇಹಮಯಿ ಕೃಷ್ಣ ಅವರ ಅರ್ಜಿ ಪ್ರಶ್ನಿಸಿ ದೇವರಾಜು ಮೇಲ್ಮನವಿ ಸಲ್ಲಿಸಿದ್ದಾರೆ. ಮೇಲ್ಮನವಿಯಲ್ಲಿರುವ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ನ್ಯಾಯಪೀಠ ಆದೇಶಿಸಿತು.

ಏಕಸದಸ್ಯ ಪೀಠಕ್ಕೆ ತಪ್ಪು ಮಾಹಿತಿ

ಜೆ. ದೇವರಾಜು ಜಮೀನಿನ ಮೂಲ ಮಾಲೀಕರು. ಕಾನೂನಾತ್ಮಕ ಪ್ರಕ್ರಿಯೆ ಪಾಲಿಸಿಯೇ ಡಿನೋಟಿಫಿಕೇಷನ್ ಮಾಡಲಾಗಿದೆ. ಇಲ್ಲಿ ದೇವರಾಜು ಒಬ್ಬರದ್ದೇ ಅಲ್ಲ. ಹಲವಾರು ರೈತರ ಜಮೀನನ್ನು ಡಿನೋಟಿಫಿಕೇಷನ್ ಮಾಡಲಾಗಿದೆ. ಆದರೆ ಹೈಕೋರ್ಟ್ ಏಕಸದಸ್ಯ ಪೀಠಕ್ಕೆ ಪ್ರತಿವಾದಿ ವಕೀಲರು ತಪ್ಪು ಮಾಹಿತಿ ನೀಡಿದ್ದಾರೆ. ಭೂಮಿಗೆ ಸಂಬಂಧಿಸಿ ಸಿವಿಲ್ ಕೋರ್ಟ್ನಲ್ಲಿ ಪರಿಹಾರದ ಹಣ ಠೇವಣಿ ಮಾಡಲಾಗಿದೆ. ದೇವರಾಜು ಅವರ 3.16 ಎಕರೆ ಜಮೀನಿಗೆ ಪ್ರತ್ಯೇಕವಾಗಿ ಪರಿಹಾರ ಠೇವಣಿ ಇಟ್ಟಿರಲಿಲ್ಲ. ಜಮೀನು ಡಿನೋಟಿಫಿಕೇಷನ್ ಆದಾಗ ಜಮೀನಿನ ಮೌಲ್ಯ 3 ಲಕ್ಷ ಇತ್ತು. ಈಗ 56 ಕೋಟಿ ಆಗಿದೆ ಎಂದು ಹೈಕೋರ್ಟ್ ಆದೇಶದಲ್ಲಿದೆ. ಆದರೆ, ಇದಕ್ಕೂ ದೇವರಾಜುಗೂ ಯಾವುದೇ ಸಂಬಂಧವಿಲ್ಲ.

ಕರ್ನಾಟಕದಲ್ಲಿ ಡಿನೋಟಿಫಿಕೇಷನ್ ವಿಚಾರ ಹೊಸದಲ್ಲ. ರೈತರು ಡಿನೋಟಿಫಿಕೇಷನ್ ಅರ್ಜಿ ಸಲ್ಲಿಸಿದಾಗ ಸರ್ಕಾರ ಪರಿಗಣಿಸುತ್ತದೆ. 1998 ರಲ್ಲಿ ಏನಾಯಿತು ಎಂಬುದನ್ನು 2024 ರಲ್ಲಿ ತೀರ್ಮಾನಿಸಲಾಗುವುದಿಲ್ಲ ಎಂದು ದೇವರಾಜು ಪರ ಹಿರಿಯ ವಕೀಲ ದುಷ್ಯಂತ್ ದವೆ ವಾದಿಸಿದರು.

ವಾದ ಆಲಿಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ, ಹೈಕೋರ್ಟ್ ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಲು ಸಾಧ್ಯವಿಲ್ಲ. ಸಿಬಿಐ ತನಿಖೆ ಕೋರಿರುವ ಅರ್ಜಿಯಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ನೀವು ಏಕಸದಸ್ಯ ಪೀಠಕ್ಕೇ ಮನವಿ ಸಲ್ಲಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Read More
Next Story