
ಗ್ಯಾರಂಟಿ ಯೋಜನೆಗೆ ಅಧಿಕ ವೆಚ್ಚ : ಸಿಎಜಿ ವರದಿಗೆ ಎಚ್.ಎಂ.ರೇವಣ್ಣಆಕ್ಷೇಪ
ಸಿಎಜಿ ವರದಿ ಗ್ಯಾರಂಟಿ ಯೋಜನೆಯ ನ್ಯೂನತೆ ಬಗ್ಗೆ ಉಲ್ಲೇಖ ಮಾಡಲು ಯಾವುದೇ ಅಭ್ಯಂತರ ಇಲ್ಲ. ಆದರೆ, ಯೋಜನೆಯೇ ಸರಿ ಇಲ್ಲ ಎಂಬರ್ಥದಲ್ಲಿ ಉಲ್ಲೇಖಿಸಿರುವುದು ಸರಿಯಲ್ಲ.
ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಅಧಿಕ ವೆಚ್ಚ ಮಾಡಿರುವ ಬಗ್ಗೆ ಉಲ್ಲೇಖಿಸಿರುವ ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ವರದಿಗೆ (ಸಿಎಜಿ) ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಚ್.ಎಂ.ರೇವಣ್ಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಯು ರಾಜ್ಯದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ. ಆದರೆ, ಸಿಎಜಿ ವರದಿಯಲ್ಲಿ ಗ್ಯಾರಂಟಿ ಯೋಜನೆ ಕುರಿತು ಸರಿಯಾಗಿ ಉಲ್ಲೇಖವಾಗಿಲ್ಲ. ಯೋಜನೆಗಳಲ್ಲಿ ನ್ಯೂನತೆಗಳು ಇದ್ದರೆ ಅದರ ಬಗ್ಗೆ ಉಲ್ಲೇಖ ಮಾಡಲು ಯಾವುದೇ ಅಭ್ಯಂತರ ಇಲ್ಲ. ಆದರೆ, ಯೋಜನೆಯೇ ಸರಿ ಇಲ್ಲ ಎಂಬರ್ಥದಲ್ಲಿ ಉಲ್ಲೇಖಿಸಿರುವುದು ಸರಿಯಲ್ಲ. ಈ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಮುಂದಿನ ದಿನದಲ್ಲಿ ಸಿಎಜಿಗೆ ಮಾಹಿತಿ ನೀಡುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ನೊಬೆಲ್ ಪ್ರಶಸ್ತಿ ವಿಜೇತರಾದ ಅಮರ್ತ್ಯಸೇನ್ ಸೇರಿದಂತೆ ಹಲವು ಗಣ್ಯರು ಗ್ಯಾರಂಟಿ ಯೋಜನೆಗಳ ಕುರಿತು ಶ್ಲಾಘಿಸಿದ್ದಾರೆ. ಯೋಜನೆಯಿಂದ ಬಡವರ, ಮಧ್ಯಮ ವರ್ಗದವರ ಜೀವನವು ಸುಧಾರಣೆಯಾಗಿದೆ. ಆರ್ಥಿಕತೆಯಿಂದಲೂ ಜೀವನಮಟ್ಟದಲ್ಲಿ ಸುಧಾರಣೆ ಕಂಡಿದೆ. ಈ ಬಗ್ಗೆ ಆರ್ಥಿಕ ತಜ್ಞರೇ ತಿಳಿಸಿದ್ದಾರೆ. ಆದರೆ, ಸಿಎಜಿ ಹೇಳಿರುವ ಆರೋಪವು ಸಮಂಜಸವಾಗಿಲ್ಲ. ಯೋಜನೆಗಳಲ್ಲಿ ತಪ್ಪುಗಳಿದ್ದರೆ ಅವುಗಳನ್ನು ಸರಿಪಡಿಸುವ ಕೆಲಸವನ್ನು ಸರ್ಕಾರ ಮಾಡಲಿದೆ. ಇಂತಹ ವರದಿಯಿಂದ ಜನತೆಗೆ ತಪ್ಪು ಮಾಹಿತಿ ಹೋದಂತಾಗುತ್ತದೆ ಎಂದು ಹೇಳಿದರು.
ಮೂರು ಜಿಲ್ಲೆಗಳಿಗೆ ಪ್ರಶಸ್ತಿ
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು ಜಿಲ್ಲಾಧ್ಯಕ್ಷರೊಂದಿಗೆ ಸಭೆ ನಡೆಸಲಾಗಿದೆ. ರಾಜ್ಯದೆಲ್ಲೆಡೆ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಯಾವ ಜಿಲ್ಲೆಯಲ್ಲಿ ಉತ್ತಮವಾಗಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತದೆಯೋ ಆ ಜಿಲ್ಲೆಗೆ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ. ಮೂರು ಜಿಲ್ಲೆಗೆ ಪ್ರಶಸ್ತಿ ನೀಡಲಾಗುವುದು. ಅಂತೆಯೇ ತಾಲೂಕು ಮಟ್ಟದಲ್ಲಿಯೂ ಉತ್ತಮವಾಗಿ ಕಾರ್ಯನಿರ್ವಹಿಸುವ ತಾಲೂಕುಗಳಿಗೆ ಪ್ರಶಸ್ತಿ ನೀಡುವ ಚಿಂತನೆ ಇದೆ. ಮುಂದಿನ ದಿನದಲ್ಲಿ ಈ ಬಗ್ಗೆ ಶೀಘ್ರದಲ್ಲಿಯೇ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಗ್ಯಾರಂಟಿ ಯೋಜನೆಗಳು ಆರ್ಥಿಕ ಸಬಲತೆಗೆ ಕಾರಣವಾಗಿದೆ. ತಲಾ ಆದಾಯವು ಸಹ ಹೆಚ್ಚಳವಾಗಿದೆ. ಗ್ಯಾರಂಟಿ ಯೋಜನೆ ಬಗ್ಗೆ ಬಿಜೆಪಿ ಟೀಕಿಸಿದೆ. ಅಲ್ಲದೇ, ಪ್ರಧಾನಿ ನರೇಂದ್ರ ಮೋದಿ ಸಹ ಆರ್ಥಿಕ ದಿವಾಳಿಯಾಗಲಿದೆ ಎಂಬುದಾಗಿ ಹೇಳಿಕೆ ನೀಡಿದ್ದರು. ಆದರೆ, ಆ ಹೇಳಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ಮಾಡಿದ್ದಾರೆ ಎಂದು ಹೇಳಿದರು.
94 ಸಾವಿರ ಕೋಟಿ ವೆಚ್ಚ
ಗ್ಯಾರಂಟಿ ಯೋಜನೆ ಜಾರಿಯಾದ ಎರಡು ವರ್ಷದಲ್ಲಿ 94 ಸಾವಿರ ಕೋಟಿ ರೂ.ಗಿಂತ ಹೆಚ್ಚು ವೆಚ್ಚ ಮಾಡಲಾಗಿದೆ. ಯೋಜನೆಗಳು ಶೇ.98ರಷ್ಟು ಜಾರಿ ಮಾಡಲಾಗಿದೆ. ಶಕ್ತಿ ಯೋಜನೆಯು ಗೋಲ್ಡನ್ ಬುಕ್ ರೆಕಾರ್ಡ್‌ನಲ್ಲಿ ದಾಖಲಾಗಿದೆ. 500 ಕೋಟಿಗಿಂತ ಹೆಚ್ಚು ಟಿಕೆಟ್ ವಿತರಣೆ ಮಾಡಲಾಗಿದೆ. ಈ ಯೋಜನೆಯನ್ನು 533 ಕೋಟಿ ಫಲಾನುಭವಿಗಳು ಸದುಪಯೋಗ ಮಾಡಿಕೊಂಡಿದ್ದು, ಇದಕ್ಕಾಗಿ 13,589 ಕೋಟಿ ರೂ. ವೆಚ್ಚ ಮಾಡಲಾಗಿದೆ. ಗೃಹ ಲಕ್ಷ್ಮೀ ಯೋಜನೆಯಲ್ಲಿ 1.24 ಕೋಟಿ ಫಲಾನುಭವಿಗಳು ಲಾಭ ಪಡೆದುಕೊಂಡಿದ್ದಾರೆ. ಇದಕ್ಕಾಗಿ 50 ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ. ಗೃಹ ಜ್ಯೋತಿ ಯೋಜನೆ 1.68 ಕೋಟಿ ಫಲಾನುಭವಿಗಳಿಗೆ ಉಪಯೋಗವಾಗಿದ್ದು, 18,139 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಯುವನಿಧಿ ಯೋಜನೆಯು 2024ರ ಜನವರಿ ತಿಂಗಳಲ್ಲಿ ಅನುಷ್ಠಾನಕ್ಕೆ ತರಲಾಗಿದ್ದು, 2.55 ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗಿದೆ. ಇದಕ್ಕಾಗಿ 623 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇನ್ನು, ಅನ್ನಭಾಗ್ಯ ಯೋಜನೆಯಲ್ಲಿ 2024ರ ಡಿಸೆಂಬರ್‌ವರೆಗೆ 72.02 ಕುಟುಂಬಗಳು ಫಲಾನುಭವಿಯಾಗಿದ್ದು, 11,821.17 ಕೋಟಿ ರೂ. ವೆಚ್ಚ ಮಾಡಲಾಗಿದೆ. 2025ರ ಫೆಬ್ರವರಿಯಿಂದ ಈವರೆಗೆ 14.64 ಲಕ್ಷ ಮೆಟ್ರಿಕ್ ಟನ್ ಪಡಿತರಗಳನ್ನು 3,322 ವೆಚ್ಚದಲ್ಲಿ ವಿತರಣೆ ಮಾಡಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಪಡಿತರ ವಿತರಣೆಯಲ್ಲಿ ಕೆಲವೊಂದು ನ್ಯೂನತೆಗಳು ಇರುವುದು ಕಂಡುಬಂದಿದ್ದು, ಅವುಗಳನ್ನು ಸರಿಪಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು.