![ರಾಜ್ಯ ರಾಜಕೀಯ ಬೆಳವಣಿಗೆ | ಹೈಕಮಾಂಡ್‌ಗೆ ವರದಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜ್ಯ ರಾಜಕೀಯ ಬೆಳವಣಿಗೆ | ಹೈಕಮಾಂಡ್‌ಗೆ ವರದಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್](https://karnataka.thefederal.com/h-upload/2024/10/05/480781-dks.webp)
ರಾಜ್ಯ ರಾಜಕೀಯ ಬೆಳವಣಿಗೆ | ಹೈಕಮಾಂಡ್‌ಗೆ ವರದಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಪಕ್ಷದಲ್ಲಿ ವರದಿ ತಯಾರಿಸಲೆಂದೇ ಸಂಶೋಧನಾ ತಂಡವಿದೆ. ರಾಜ್ಯದ ಬೆಳವಣಿಗೆಗಳ ಕುರಿತ ವರದಿಯನ್ನು ಸಂಶೋಧನಾ ತಂಡ ಹೈಕಮಾಂಡ್‌ಗೆ ತಲುಪಿಸುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ
ಮುಖ್ಯಮಂತ್ರಿ ಬದಲಾವಣೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ನಿತ್ಯದ ರಾಜಕೀಯ ಬೆಳವಣಿಗೆಗಳ ಕುರಿತು ಹೈಕಮಾಂಡ್ ವರದಿ ತರಿಸಿಕೊಳ್ಳುತ್ತಿದೆ. ನಾವೂ ಕೂಡ ವರದಿ ಕಳುಹಿಸುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ರಾಜ್ಯದಲ್ಲಿ ಸಚಿವರ ಸಭೆ, ಸಚಿವರ ದೆಹಲಿ ಭೇಟಿ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ʼಪಕ್ಷದಲ್ಲಿ ವರದಿ ತಯಾರಿಸಲೆಂದೇ ಸಂಶೋಧನಾ ತಂಡವಿದೆ. ರಾಜ್ಯದ ಬೆಳವಣಿಗೆಗಳ ಕುರಿತ ವರದಿಯನ್ನು ಸಂಶೋಧನಾ ತಂಡ ಹೈಕಮಾಂಡಿಗೆ ತಲುಪಿಸುತ್ತದೆ' ಎಂದರು.
'ಎಫ್ಐಆರ್‌ಗೆ ಭಯ ಪಡುವುದಿಲ್ಲ' ಎಂಬ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಅದು ಅವರ ವೈಯಕ್ತಿಕ ವಿಚಾರ. ಅದರಲ್ಲಿ ನಾನು ಮಧ್ಯಪ್ರವೇಶಿಸುವುದಿಲ್ಲ ಎಂದರು.
ಕುಮಾರಸ್ವಾಮಿ ವಿರುದ್ಧ ಎಫ್ಐಆರ್ ದಾಖಲಾಗಿರುವ ಬಗ್ಗೆ ನನಗೆ ಗೊತ್ತಿಲ್ಲ. ಅದನ್ನು ತಿಳಿದುಕೊಳ್ಳಲು ನಾನು ಗೃಹ ಸಚಿವನಲ್ಲ ಎಂದು ಹೇಳಿದರು. ಸದ್ಯ ಚನ್ನಪಟ್ಟಣದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿಸುತ್ತಿದ್ದೇನೆ. ಸಿಎಸ್ಆರ್ ನಿಧಿಯಲ್ಲಿ ಶಾಲೆಗಳ ಭೂಮಿ ಪೂಜೆ ಮಾಡಿಸಿದ್ದೇನೆ. ಅದನ್ನು ಹೊರತುಪಡಿಸಿ ಬೇರೆ ಏನೂ ಗೊತ್ತಿಲ್ಲ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸತೀಶ ಜಾರಕಿಹೊಳಿ ಭೇಟಿ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ನಮ್ಮ ಪಕ್ಷದ ನಾಯಕರನ್ನು ನಾವು ಭೇಟಿ ಮಾಡದೇ ಬೇರೆ ಯಾರು ಭೇಟಿ ಮಾಡುತ್ತಾರೆ ಎಂದು ಪ್ರಶ್ನಿಸಿದರು.